ದಾವಣಗೆರೆ, ಅ.4- ಕಳೆದ ಐದು ತಿಂಗಳಿನಿಂದ ಬಾಕಿ ಇರುವ ಶಿಷ್ಯ ವೇತನ ನೀಡುವಂತೆ ಒತ್ತಾಯಿಸಿ ಕಳೆದ ನಾಲ್ಕು ದಿನಗಳಿಂದ ಬೀದಿಗಿಳಿದು ವಿಭಿನ್ನವಾಗಿ ಹೋರಾಟ ನಡೆಸುತ್ತಿರುವ ಜೆಜೆಎಂ ಮೆಡಿಕಲ್ ಕಾಲೇಜಿನ ವೈದ್ಯ ವಿದ್ಯಾರ್ಥಿಗಳು ಇಂದೂ ಸಹ ನಗರದ ಜಯದೇವ ವೃತ್ತದಲ್ಲಿ ಪಿಪಿಇ ಕಿಟ್ ಧರಿಸಿ ವಿನೂತವಾಗಿ ಪ್ರತಿಭಟಿಸುವ ಮುಖೇನ ಸರ್ಕಾರ ಹಾಗೂ ಕಾಲೇಜು ಆಡಳಿತ ಮಂಡಳಿಯ ಗಮನ ಸೆಳೆದರು.
ಜೀವದ ಹಂಗು ತೊರೆದು ಕೆಲಸ ಮಾಡಿದ್ದೇವೆ. ಕೊರೊನಾ ವೇಳೆಯಲ್ಲಿ ಹಗಲು, ರಾತ್ರಿ ಕೆಲಸ ಮಾಡಿದ್ದೇವೆ. ಕೊರೊನಾ ಕಡಿಮೆಯಾಗುತ್ತಿದ್ದಂತೆ ನಮ್ಮ ಬಗ್ಗೆ ಕೇರ್ ಮಾಡುತ್ತಿಲ್ಲ. ಕಷ್ಟದ ವೇಳೆಯಲ್ಲಿ ನಮ್ಮ ಸೇವೆ ಬೇಕು. ಈಗ ಶಿಷ್ಯ ವೇತನ ನೀಡಲು ಸತಾಯಿಸುತ್ತಿರುವುದು ಯಾಕೆ? ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಪ್ರಶ್ನಿಸಿದರು.
ಕಾಲೇಜಿನ ಆಡಳಿತ ಮಂಡಳಿ ಹಾಗೂ ಸರ್ಕಾರದ ಸಂಬಂಧಿಸಿದ ಇಲಾಖೆಗೆ ಮನವಿ ಮಾಡಿದ್ದರೂ ಪ್ರಯೋಜನ ಆಗಿಲ್ಲ. ಈ ಬಗ್ಗೆ ವಿದ್ಯಾರ್ಥಿಗಳು ಪತ್ರ ಹಾಗೂ ಮನವಿ ಪತ್ರ ಸಲ್ಲಿಕೆ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೊರೊನಾದಂತಹ ಸಂಕಷ್ಟದ ವೇಳೆಯಲ್ಲಿ ಪ್ರಾಣದ ಹಂಗು ತೊರೆದು ಹೋರಾಡಿದ್ದೇವೆ. ಹಗಲಿರುಳು ಕಷ್ಟಪಟ್ಟಿದ್ದೇವೆ. ಕೋವಿಡ್ ವಿರುದ್ಧ ಕೆಲಸ ಮಾಡುವ ವೈದ್ಯರಿಗೆ ಸಕಾಲಕ್ಕೆ ವೇತನ ಪಾವತಿ ಮಾಡುವಂತೆ ಎಲ್ಲಾ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಆದರೂ ಕಳೆದ ಐದು ತಿಂಗಳಿನಿಂದ ವೇತನ ಪಾವತಿಸಿಲ್ಲ ಎಂದು ಆರೋಪಿಸಿದರು.
`ಹೊರಗೆ ಬಿಳಿ ಬಟ್ಟೆ..ಒಳಗೆ ಖಾಲಿ ಹೊಟ್ಟೆ ‘ ಎಂಬ ಘೋಷಣೆ ಕೂಗಿದರು. ಪ್ರತಿಭಟನೆಯಲ್ಲಿ ನೂರಾರು ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.