ಕಾಡಾ ಸಭೆ : ಮಾಹಿತಿ ಪಡೆದ ಅಧ್ಯಕ್ಷೆ ಪವಿತ್ರ

ದಾವಣಗೆರೆ, ಜು. 9 – ತುಂಗಾ ಮತ್ತು ಭದ್ರಾ ಜಲಾಶಯದ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಮಲವಗೊಪ್ಪದಲ್ಲಿರುವ ಭದ್ರಾ ಕಾಡಾ ಪ್ರಾಧಿಕಾರದ ಸಭಾಂಗಣದಲ್ಲಿ ಅಧ್ಯಕ್ಷೆ ಪವಿತ್ರ ರಾಮಯ್ಯ ಅವರು ಬುಧವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಸಭೆಯಲ್ಲಿ ಪ್ರಮುಖವಾಗಿ ತುಂಗಾ, ಭದ್ರಾ ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಕೈಗೊಂಡಿ ರುವ ನಾಲೆಗಳ ದುರಸ್ತಿ ಕಾಮಗಾರಿ ಹಾಗೂ ಪ್ರಸ್ತುತ ನಾಲೆಯ ಸ್ಥಿತಿ ಗತಿಗಳ ಕುರಿತು ಮಾಹಿತಿ ಪಡೆಯಲಾಯಿತು. ತುಂಗಾ ಮತ್ತು ಭದ್ರಾ ನಾಲೆಗಳಲ್ಲಿ ತುಂಬಿರುವ ಹೂಳು ಮತ್ತು ನಾಲೆಯ ಸುತ್ತ ಬೆಳೆದುಕೊಂಡಿರುವ ಜಂಗಲ್ ತೆಗೆದಿರುವ ಕುರಿತು ಮಾಹಿತಿ ಪಡೆಯಲಾಯಿತು. 

ನಾಲೆ ಏರಿ ರಸ್ತೆ ಕಾಮಗಾರಿ ಮತ್ತು ತುರ್ತಾಗಿ ಆಗಬೇಕಿರುವ ರಸ್ತೆಗಳ ಕುರಿತು ಚರ್ಚಿಸಲಾ ಯಿತು. ನಾಲೆ ಪಿಕಪ್ ಹಾಗೂ ಗೇಟ್‍ಗಳ ಕುರಿತು ಮಾಹಿತಿ ಪಡೆಯಲಾಯಿತು. ಭದ್ರಾ ಜಲಾಶಯದ ದುರಸ್ತಿ ಹಾಗೂ ನವೀಕರಣ ಕಾಮಗಾರಿಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡುವ ಅನುದಾನದಲ್ಲಿ ಕೈಗೊಳ್ಳುವ ಕಾಮಗಾರಿಯ ಬಗ್ಗೆ ಚರ್ಚೆ ನಡೆಸಲಾಯಿತು. 

ಭದ್ರಾ ಜಲಾಶಯದಿಂದ ಭದ್ರಾ ಮೇಲ್ದಂಡೆ ಯೋಜನೆಯ ಮುಖಾಂತರ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ನೀರು ಹರಿಸಲು ರಾಜ್ಯ ಸರ್ಕಾರ ಆದೇಶಿಸಿದ್ದು, ಇದರ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ, ಪ್ರಸ್ತುತ ಮಳೆಗಾಲ ನಿರೀಕ್ಷಿತ ಪ್ರಮಾಣದಲ್ಲಿ ಬಾರದಿರುವ ಕಾರಣ ಮುಂದಿನ ದಿನಗಳನ್ನು ಗಮನದಲ್ಲಿ ಇಟ್ಟುಕೊಂಡು ಹಾಗೂ ಅಚ್ಚುಕಟ್ಟು ವ್ಯಾಪ್ತಿಯ ರೈತರ ಹಿತ ದೃಷ್ಟಿಯಿಂದ ಸರ್ಕಾರಕ್ಕೆ ಪತ್ರ ಬರೆದು ವಸ್ತು ಸ್ಥಿತಿಯ ಕುರಿತು ವಿವರಣೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

ಆಡಳಿತಾಧಿಕಾರಿ ಕೃಷ್ಣಮೂರ್ತಿ ಕುಲಕರ್ಣಿ, ಭದ್ರಾ ಯೋಜನಾ ವೃತ್ತ ಅಧೀಕ್ಷಕ ಅಭಿಯಂತರ ಚಂದ್ರಹಾಸ್, ತುಂಗಾ ಮೇಲ್ದಂಡೆ ಯೋಜನಾ ವಲಯ ಅಧೀಕ್ಷಕ ಅಭಿಯಂತರ ರಮೇಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

error: Content is protected !!