ಜಯದೇವ ಲೀಲೆ ಪ್ರವಚನ ಮಂಗಲ ಕಾರ್ಯಕ್ರಮದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರ ಬಣ್ಣನೆ
ದಾವಣಗೆರೆ, ಅ. 4- ಜಯದೇವ ಜಗದ್ಗುರುಗಳು ಚಲನಶೀಲತೆ ವ್ಯಕ್ತಿತ್ವವನ್ನ ಹೊಂದಿದವರು. ಎಂದಿಗೂ ಅವರು ಸುಮ್ಮನೇ ಇದ್ದವರಲ್ಲ. ತಮ್ಮ ಮಹಾನ್ ಕಾರ್ಯಗಳ ಮೂಲಕವೇ ಯಶಸ್ವೀ ಜೀವನ ಸಾಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಚಿತ್ರದುರ್ಗ ಬೃಹನ್ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ನುಡಿದರು.
ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 69ನೇ ಸ್ಮರಣೋತ್ಸವದ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಶ್ರೀ ಜಯದೇವಲೀಲೆ ಪ್ರವಚನ ಮಂಗಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿ ವರ್ಷ ನಡೆಸಲಾಗುತ್ತಿರುವ ಜಯದೇವ ಲೀಲೆ ಪ್ರವಚನವನ್ನು ಮುಂದಿನ ವರ್ಷದಿಂದ ಮೂರು ದಿನಗಳ ಬದಲಿಗೆ 4-5 ದಿನಗಳ ಕಾಲ ನಡೆಸಲಾಗುವುದು ಎಂದು ಶರಣರು ತಿಳಿಸಿದರು.
ದಾವಣಗೆರೆಯಲ್ಲಿ ನಡೆಯುತ್ತಿದ್ದಂತಹ ಜಯದೇವ ಲೀಲೆ ಪ್ರವಚನ ಕೇಳಲು ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಯವರೊಂದಿಗೆ ನಾವು ಆಗಮಿಸುತ್ತಿದ್ದೆವು. ಶ್ರೀ ಮಲ್ಲಿಕಾರ್ಜನ ಸ್ವಾಮೀಜಿಯವರು ಆಶೀರ್ವಚನ ನೀಡುವ ಸಂದರ್ಭದಲ್ಲಿ ಕಂಬನಿ ಹರಿಯುತ್ತಿತ್ತು. ಆ ಕಂಬನಿ ಜಯದೇವ ಜಗದ್ಗುರುಗಳವರ ಕಾರ್ಯಧಾರೆ, ಕ್ರಿಯಾಶೀಲತೆಯ ಬಾಂಧವ್ಯವನ್ನು ಮೆಲುಕು ಹಾಕುವ ಪ್ರತೀಕವಾಗಿತ್ತು ಎಂದು ನೆನಪಿಸಿಕೊಂಡ ಅವರು, ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಯವರು ಜಯದೇವ ಲೀಲೆ ಪ್ರವಚನವನ್ನು ಕಣ್ಣು ತೊಳೆಯುವ ಹಬ್ಬ ಎಂದೇ ಕರೆಯುತ್ತಿದ್ದುದಾಗಿ ಹೇಳಿದರು.
ಜನ ಸಾಮಾನ್ಯರು ಮಾಡದಂತಹ ಕೆಲಸ ಮಾಡುವವರೇ ವಿಭೂತಿ ಪುರುಷರು. ಜಯದೇವ ಶ್ರೀಗಳೂ ಸಹ ಅಸಹಾಯಕರ ಮೇಲೆ ಅನುಭೂತಿ ತೋರುವ ಮೂಲಕ ಮಹಾನ್ ವಿಭೂತಿ ಪುರುಷರಾಗಿದ್ದರು. ಪ್ರಸ್ತುತ ದಿನಗಳಲ್ಲಿ ಮಹತ್ಕಾರ್ಯ ಸಾಧಿಸುವಂತಹ ಮಹಾಸ್ವಾಮೀಜಿ, ಶರಣರು, ಮಾನವರು ಬೇಕಾಗಿದ್ದಾರೆ ಎಂದು ಹೇಳಿದರು.
ಜೀವಿತಾವಧಿಯಲ್ಲಿ ದೇಶ ಮತ್ತು ಸಮಾಜಕ್ಕೆ ಅತ್ಯುತ್ತಮ ಕಾಣಿಕೆ ನೀಡಬೇಕು. ಅಂತಹ ಮಹಾನ್ ಕಾರ್ಯಗಳಿಂದಾಗಿಯೇ ವಿಶ್ವ ಗುರುಗಳ ಸಾಲಿನಲ್ಲಿ ಶ್ರೀ ಜಯದೇವ ಜಗದ್ಗುರುಗಳ ಹೆಸರಿದೆ. ಅವರೊಬ್ಬ ಮಿಂಚುವ ಮಾಣಿಕ್ಯ. ಯಾವುದೇ ಸೌಲಭ್ಯಗಳೇ ಇಲ್ಲದ ಕಾಲದಲ್ಲಿ ಜಯದೇವ ಜಗದ್ಗುರುಗಳವರು ಲೆಕ್ಕ ಹಾಕಲು ಸಾಧ್ಯವಾಗದಷ್ಟು ಅಗಣಿತ ಮಹತ್ಕಾರ್ಯಗಳನ್ನು ಮಾಡಿದ್ದಾರೆ ಎಂದರು.
ಅಥಣಿಯ ಗಚ್ಚಿನಮಠದ ಶ್ರೀ ಶಿವಬಸವ ಸ್ವಾಮೀಜಿ, ಗುರುಮಠಕಲ್‌ನ ಶ್ರಿ ಶಾಂತವೀರ ಸ್ವಾಮೀಜಿ, ಚನ್ನಗಿರಿಯ ಶ್ರೀ ಜಯ ಬಸವ ಚಂದ್ರ ಸ್ವಾಮೀಜಿ, ಹಾವೇರಿಯ ಶ್ರೀ ಬಸವ ಶಾಂತಲಿಂಗ ಸ್ವಾಮೀಜಿ ಹಾಗು ಇತರರು ಉಪಸ್ಥಿತರಿದ್ದರು. ಎಸ್. ಓಂಕಾರಪ್ಪ ಸ್ವಾಗತಿಸಿದರು. ಫಾರೂಖ್ ಉಲ್ಲಾ ನಿರೂಪಿಸಿದರು.