ಜಗಳೂರು, ಅ. 4- ತಾಲ್ಲೂಕಿನ ಅಂತರ್ಜಲ ಅಭಿವೃದ್ಧಿಗಾಗಿ 3.85 ಕೋಟಿ ರೂ. ಅನುದಾನ ಮಂಜೂ ರಾಗಿದೆ ಎಂದು ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರೂ, ಶಾಸಕರೂ ಆದ ಎಸ್.ವಿ. ರಾಮಚಂದ್ರ ತಿಳಿಸಿದರು.
ಜಗಳೂರು ತಾಲ್ಲೂಕಿನ ಹಿರೇಮಲ್ಲನಹೋಳೆ ಗ್ರಾಮದಲ್ಲಿ ವಿಶ್ವೇಶ್ವರಯ್ಯ ಜಲ ನಿಗಮದ ಸುಮಾರು 1.35 ಕೋಟಿ ರೂ. ವೆಚ್ಚದಲ್ಲಿ ಜಿನಗಿಹಳ್ಳಕ್ಕೆ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಮಳೆಗಾಲದಲ್ಲಿ ಮಳೆ ನೀರು ವ್ಯರ್ಥವಾಗಿ ಹರಿದುಹೋಗುವು ದನ್ನು ತಡೆದು ನಿಲ್ಲಿಸುವುದರಿಂದ ಅಂತರ್ಜಲ ಹೆಚ್ಚಾಗುತ್ತದೆ. ಆದ್ದರಿಂದ ತಾಲ್ಲೂ ಕಿನ ಆಕನೂರು ಮತ್ತು ಕಮಂಡಲಗುಂದಿ ಸಮೀಪ ಎರಡು ಬೃಹತ್ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು.
ಕ್ಷೇತ್ರದಲ್ಲಿ 57 ಕೆರೆ ತುಂಬಿಸುವ ಯೋಜನೆ ಮತ್ತು ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನದಿಂದ ಅಂತರ್ಜಲ ಅಭಿವೃದ್ಧಿಯಾಗಿ ಕ್ಷೇತ್ರದಲ್ಲಿ ಹಸಿರು ತುಂಬಿ, ರೈತರ ಬದುಕು ಹಸನಾಗಲಿದೆ ಎಂದು ಶಾಸಕರು ಆಶಯ ವ್ಯಕ್ತಪಡಿಸಿದರು.
ತಾಲ್ಲೂಕಿನ ಬಹು ನಿರೀಕ್ಷೆಯ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ 1,300 ಕೋಟಿ ರೂ. ಮಂಜೂರಾಗಿದ್ದು, ನ.5 ರಂದು ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಅವರು ಭೂಮಿ ಪೂಜೆ ನೆರವೇರಿಸಲಿದ್ದಾರೆ ಎಂದು ಹೇಳಿದರು.
ಮೂಡಲ ಮಾಚಿಕೆರೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ 35 ಲಕ್ಷ ರೂ. ವೆಚ್ಚದ ತಳ ಹಂತದ ಸೇತುವೆ ನಿರ್ಮಾಣ, ಹಿರೇಮಲ್ಲನಹೊಳೆ, ಗೊಲ್ಲರಹಟ್ಟಿ ಗ್ರಾಮದಲ್ಲಿ 35ಲಕ್ಷ ರೂ. ವೆಚ್ಚದ ಸಿ.ಸಿ. ರಸ್ತೆಯ ಕಾಮಗಾರಿಗಳು, ಸೊಕ್ಕೆ ಗ್ರಾಮದ್ಲಲಿ 1.90 ಕೋಟಿ ರೂ. ವೆಚ್ಚದ ಬ್ಯಾರೇಜ್ ನಿರ್ಮಾಣ ಕಾಮಗಾರಿ, ಹಿರೇಬನ್ನಿಹಟ್ಟಿಯಲ್ಲಿ 25 ಲಕ್ಷ ರೂ. ಚೆಕ್ ಡ್ಯಾಂ, ಗೌರಿಪುರದಲ್ಲಿ 40 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಸೇರಿದಂತೆ ಹಲವಾರು ಕೋಟಿ ರೂ. ವೆಚ್ಚದ ಕಾಮಗಾರಿಗಳಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಪಲ್ಲಾಗಟ್ಟೆ ಮಹೇಶ್, ಜಿ.ಪಂ. ಮಾಜಿ ಸದಸ್ಯ ಸೊಕ್ಕೆ ನಾಗರಾಜ್ , ರಘುರಾಮರೆಡ್ಡಿ , ವೀಣಾ ವೀರೇಶ್, ಎ.ಎಸ್ .ತಿಪ್ಪೇಸ್ವಾಮಿ, ಇಂದ್ರೇಶ್, ಅರವಿಂದ್ ಪಟೇಲ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.