ಫುಡ್ ಕಿಟ್ ವಿತರಣೆಯಲ್ಲಿ ಎಂ.ಎಲ್.ಸಿ. ನಾರಾಯಣ ಸ್ವಾಮಿ
ದಾವಣಗೆರೆ, ಜು.9- ಕಳೆದ 15 ತಿಂಗಳಿನಿಂದ ಶಾಲಾ ಮಕ್ಕಳು ಅತಂತ್ರ ಸ್ಥಿತಿಯಲ್ಲಿದ್ದು ಕೂಡಲೇ ಶಾಲೆಗಳನ್ನು ಆರಂಭಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣ ಸ್ವಾಮಿ ಒತ್ತಾಯಿಸಿದ್ದಾರೆ.
ನಗರದ ಜಿಎಂಐಟಿ ಕಾಲೇಜು ಆವರಣದಲ್ಲಿ ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಫುಡ್‍ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರ ಎಲ್ಲಾ ವಹಿವಾಟುಗಳನ್ನು ನಡೆಸಲು ಅನುಮತಿ ನೀಡಿದೆ. ಆದರೆ ಶಾಲಾರಂಭಕ್ಕೆ ಹಿಂದೇಟು ಹಾಕುತ್ತಿದೆ. ಟಿ.ವಿ. ಮಾಧ್ಯಮಗಳು ಶಾಲೆ ಆರಂಭಿಸಿದರೆ ಕೊರೊನಾ ಬರುತ್ತದೆ ಎಂಬ ಸಂದೇಶ ಸಾರುತ್ತಿವೆ. ಮಾಧ್ಯಮಗಳು ಇಂತಹ ಕೆಲಸ ಮಾಡಬಾರದು ಎಂದರು.
ಶಾಲೆಗಳು ಇಲ್ಲದ ಕಾರಣ ಮಕ್ಕಳು ಖಿನ್ನತೆಗೆ ಒಳಗಾಗಿದ್ದಾರೆ. ಹಳ್ಳಿಗಳಲ್ಲಿ ಬಾಲ ಕಾರ್ಮಿಕ ಪದ್ದತಿ ಆರಂಭವಾಗಿದೆ. ಜೀತ ಪದ್ದತಿ, ಬಾಲ್ಯ ವಿವಾಹ ಆರಂಭವಾಗಿದೆ. ದೊಡ್ಡ ಪ್ರಮಾಣದಲ್ಲಿ ಮಕ್ಕಳು ಮೊಬೈಲ್‍ಗೆ ದಾಸರಾಗಿದ್ದಾರೆ. ಮೊಬೈಲ್ ಇಲ್ಲದೇ ಜೀವ ಇಲ್ಲ ಎನ್ನುವ ಪರಿಸ್ಥಿತಿಗೆ ಬಂದಿದ್ದಾರೆ. ಮಕ್ಕಳು ಬದುಕು ಹಸನಾಗಬೇಕಾದರೆ ಶಾಲೆಗಳ ಆರಂಭಕ್ಕೆ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರು ಒಪ್ಪಿಗೆ ನೀಡಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ್, ಪ್ರಸ್ತುತ ದಿನಗಳಲ್ಲಿ ಅನುದಾನ ರಹಿತ ಶಿಕ್ಷಣ ಸಂಸ್ಥೆ ನಡೆಸುವುದು ಕಷ್ಟ ಎಂದರು.
ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ರಾಜ್ಯದಲ್ಲಿ ಮಾತ್ರವಲ್ಲದೇ ದೇಶದಲ್ಲಿ ಹೆಚ್ಚು ಜನ ಪ್ರತಿಭಾವಂತರಾಗಿ ಉದ್ಯೋಗ ಪಡೆಯಲು ಅನುಕೂಲ ಆಗಿದೆ ಎಂದರು.
ಪ್ರತಿಭಾವಂತರು ಉದ್ಯೋಗಿಗಳಾದ ನಂತರ ಕೇವಲ ಅವರು ಪಡೆಯುವ ಸಂಬಳ ಮುಖ್ಯವಲ್ಲ, ಅವರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದರೆ ಮಾತ್ರ ಸಂಸ್ಥೆಗಳು, ಸರ್ಕಾರ ಬೆಳೆಯಲು ಸಾಧ್ಯ ಎಂದರು. ನಗರದ 800 ಜನ ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಆಹಾರ ಧಾನ್ಯದ ಕಿಟ್ ವಿತರಿಸಲಾಯಿತು. ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ, ಮಾಜಿ ಶಾಸಕ ಬಸವರಾಜನಾಯ್ಕ, ಲಿಂಗರಾಜ್, ಜಯಣ್ಣ, ಸಹನಾ ರವಿ, ಗೀತಾ ದಿಳ್ಯಪ್ಪ, ಡಿಡಿಪಿಐ ಪರಮೇಶ್ವರಪ್ಪ, ಶ್ರೀನಿವಾಸ್, ರೇವಣಸಿದ್ದಪ್ಪ, ರಾಮಮೂರ್ತಿ, ಸಾಂಬಶಿವಯ್ಯ, ರಾಮರೆಡ್ಡಿ, ಶಿವನಾಯ್ಕ, ಮಂಜಾನಾಯ್ಕ್ ಇತರರಿದ್ದರು.