ದಾವಣಗೆರೆ, ಜು. 9 – 2023ರ ಒಳಗಾಗಿ 24×7 ಜಲಸಿರಿ ಯೋಜನೆ ಪೂರ್ಣವಾಗಬೇಕು. ಇದಕ್ಕಾಗಿ ಗುತ್ತಿಗೆ ಪಡೆದಿರುವ ಕಂಪನಿಗಳು ಹೆಚ್ಚು ಜನರು ಹಾಗೂ ಸರಕುಗಳನ್ನು ಬಳಸಿಕೊಳ್ಳಬೇಕು. ಇಲ್ಲವಾದರೆ ಕಠಿಣ ವಿಳಂಬ ದಂಡ ವಿಧಿಸಲಾಗುವುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಎಚ್ಚರಿಕೆ ನೀಡಿದ್ದಾರೆ.
ಜಿಎಂಐಟಿಯಲ್ಲಿ ಕರೆದಿದ್ದ ಜಲಸಿರಿ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ದಾವಣಗೆರೆಗೆ ಸಗಟು ನೀರು ಪೂರೈಸುವ 83.37 ಕೋಟಿ ರೂ.ಗಳ ಯೋಜನೆ ಈಗಾಗಲೇ ಎರಡು ಬಾರಿ ವಿಸ್ತರಣೆ ಪಡೆದುಕೊಂಡರೂ ಪೂರ್ಣವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
2020ರಲ್ಲೇ ಯೋಜನೆ ಪೂರ್ಣವಾಗ ಬೇಕಿತ್ತು. ಎರಡು ಬಾರಿ ವಿಸ್ತರಣೆ ಪಡೆದುಕೊಳ್ಳ ಲಾಗಿದೆ. ಇನ್ನೂ ಕೆಲಸ ಮುಗಿದಿಲ್ಲ ಎಂದು ಹೇಳಿದರು.
ಗುತ್ತಿಗೆದಾರರನ್ನು ಕರೆದಾಗ ತ್ವರಿತವಾಗಿ ಮುಗಿಸುವುದಾಗಿ ಹೇಳುತ್ತಾರೆ. ಲಿಖಿತವಾಗಿಯೂ ತಿಳಿಸುತ್ತಾರೆ. ಆದರೆ, ನಂತರ ಕೆಲಸ ಮಾಡುತ್ತಿಲ್ಲ ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಹೇಳಿದರು.
ಗುತ್ತಿಗೆ ಪಡೆದಿರುವ ಎಸ್ಇಪಿಸಿ – ಡಿಆರ್ಎಸ್ ಐಟಿಪಿಎಲ್ ಜೆವಿ ಕಂಪನಿಯ ಅಧಿಕಾರಿ ಮಾತನಾಡಿ, ಕೊರೊನಾ ಕಾರಣ ದಿಂದಾಗಿ ಕಾಮಗಾರಿ ವಿಳಂಬವಾಗಿದೆ ಎಂದರು. 2017ರಲ್ಲೇ ಕಾಮಗಾರಿ ಆರಂಭ ವಾಗಿತ್ತು. 2020ರ ಆರಂಭದಲ್ಲೇ ಕಾಮಗಾರಿ ಮುಗಿಯಬೇಕಿತ್ತು. ಹೀಗಿರುವಾಗ ಕೊರೊನಾ ನೆಪ ಹೇಳುವುದು ಬೇಡ. ನವೆಂಬರ್ ಒಳಗೆ ಕಾಮಗಾರಿ ಮುಗಿಸ ಬೇಕು. ಕಾಮಗಾರಿ ಇನ್ನೂ ತಡವಾದರೆ ಹೆಚ್ಚು ದಂಡ ವಿಧಿಸಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಕೈಗಾರಿಕೆಗೆ 2,500 ಎಕರೆ ಜಾಗ
ವಿಮಾನ ನಿಲ್ದಾಣ ಸ್ಥಾಪನೆಗೆ ಕ್ರಮ : ಸಂಸದ ಸಿದ್ದೇಶ್ವರ
ಜಿಲ್ಲೆಯಲ್ಲಿ ಕೈಗಾರಿಕೆಗಳಿಗೆ ಸುಮಾರು 2,500 ಎಕರೆಯಷ್ಟು ಜಾಗ ಗುರುತಿಸಲಾಗಿದೆ. ಇದರ ವಶಕ್ಕೆ 900 ಕೋಟಿ ರೂ.ಗಳ ಅಗತ್ಯವಿದೆ. ಈ ಜಮೀನಿನಲ್ಲಿ 500 ಎಕರೆಯನ್ನು ವಿಮಾನ ನಿಲ್ದಾಣಕ್ಕೆ ಮೀಸಲಿಡಲಾಗುವುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಮೀನಿಗಾಗಿ ಬರುವ ಜು. 14ರಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರ ಜೊತೆ ಸಭೆ ನಡೆಸಲಾಗುವುದು ಎಂದವರು ಹೇಳಿದರು.
ಹರಿಹರದಲ್ಲಿ 6,500 ಕೋಟಿ ರೂ. ವೆಚ್ಚದ ಯೂರಿಯಾ ಘಟಕ ಸ್ಥಾಪನೆಗಾಗಿ ಚರ್ಚೆ ನಡೆಸಲಾಗುತ್ತಿದೆ. ಎಥೆನಾಲ್ ಘಟಕ ಸ್ಥಾಪನೆಗೆ ಎಂ.ಆರ್.ಪಿ.ಎಲ್. ಕ್ರಮ ತೆಗೆದುಕೊಳ್ಳುತ್ತಿದೆ. ಮೆಕ್ಕೆಜೋಳದ ಘಟಕಕ್ಕಾಗಿ ಐ.ಸಿ.ಎ.ಆರ್. ಸಮ್ಮತಿ ದೊರೆತಿದೆ ಎಂದವರು ಹೇಳಿದರು.
ಜಿಲ್ಲೆಯಲ್ಲಿ ಉನ್ನತ ಪದವೀಧರರಿದ್ದಾರೆ. ಅವರಿಗೆ ಉದ್ಯೋಗ ಕೊಡಿಸುವುದಷ್ಟೇ ಅಲ್ಲದೇ, ಅವರು ಉದ್ಯಮ ಸ್ಥಾಪಿಸಲು ನೆರವಾಗುವುದು ತಮ್ಮ ಉದ್ದೇಶವಾಗಿದೆ ಎಂದರು. ದಾವಣಗೆರೆಯಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ಈ ಹಿಂದೆ ಪ್ರಯತ್ನ ನಡೆಸಿದಾಗ ಕೆಲವರು ರೈತರನ್ನು ಎತ್ತಿ ಕಟ್ಟಿ ಯೋಜನೆಗೆ ಅಡ್ಡಿಪಡಿಸಿದ್ದರು. ಬೇರೆಯವರು ಬೆಳೆಯಬಾರದು ಎಂಬುದು ಅವರ ಉದ್ದೇಶ. ಇದಕ್ಕಾಗಿ ನಾನು ಹಿಂಜರಿಯುವುದಿಲ್ಲ. ವಿಮಾನ ನಿಲ್ದಾಣ ಸ್ಥಾಪನೆಗೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದವರು ಹೇಳಿದರು.
ನಗರದಲ್ಲಿ ನೀರು ಪೂರೈಕೆ ಜಾಲ ಅಳವಡಿಸುವ 681 ಕೋಟಿ ರೂ.ಗಳ ಕಾಮಗಾರಿ ಮುಂದಿನ ವರ್ಷ ಫೆಬ್ರವರಿ ಒಳಗೆ ಪೂರ್ಣ ಗೊಳ್ಳಬೇಕಿದೆ. ಆದರೆ, ಇನ್ನೂ ಶೇ.54ರಷ್ಟು ಮಾತ್ರ ಕಾಮಗಾರಿ ಪೂರ್ಣಗೊಂಡಿದೆ. ಇನ್ನು ನಾಲ್ಕು ತಿಂಗಳಲ್ಲಿ ಉಳಿದ ಕಾಮಗಾರಿ ಮುಗಿಯುವುದು ಅಸಾಧ್ಯ ಎಂದು ಸಂಸದ ಸಿದ್ದೇಶ್ವರ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಗುತ್ತಿಗೆ ಪಡೆದಿರುವ ಗುರ್ಗಾಂವ್ನ ಸುಯೇಜ್ ಪ್ರಾಜೆಕ್ಟ್ಸ್ ನ ಅಧಿಕಾರಿ ಮಾತನಾಡಿ, ನಾಲ್ಕು ತಿಂಗಳ ಹೆಚ್ಚುವರಿ ಅವಧಿಯಲ್ಲಿ ಕಾಮಗಾರಿ ಮುಗಿಸ ಲಾಗುವುದು. ಪ್ರಸಕ್ತ 6 ನೀರಿನ ಟ್ಯಾಂಕ್ಗಳು ನಿರ್ಮಾಣವಾಗಿದ್ದು, ಇನ್ನೂ 12 ಟ್ಯಾಂಕ್ಗಳು ನಿರ್ಮಾಣ ಹಂತದಲ್ಲಿವೆ. ಪ್ರತಿದಿನ 150 ರಷ್ಟು ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.
ಕಾಮಗಾರಿ ನಿಧಾನವಾಗುತ್ತಿದೆ. ಪ್ರತಿದಿನ 150 ನಲ್ಲಿಗಳಂತೆ ಸಂಪರ್ಕ ಕೊಟ್ಟರೆ, ಇರುವ ಎಲ್ಲಾ 70 ಸಾವಿರ ಮನೆಗಳಿಗೆ ಸಂಪರ್ಕ ಕಲ್ಪಿಸಲು 20 ತಿಂಗಳು ಬೇಕಾ ಗುತ್ತದೆ. ಪ್ರತಿದಿನ 600 ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಬೇಕು. ತ್ವರಿತವಾಗಿ ಟ್ಯಾಂಕ್ಗಳನ್ನು ನಿರ್ಮಿಸಬೇಕು. ಇಲ್ಲವಾದರೆ 30 ಕೋಟಿ ರೂ.ಗಳವರೆಗೆ ವಿಳಂಬ ದಂಡವಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೇಯರ್ ಎಸ್.ಟಿ. ವೀರೇಶ್, ಜಲಸಿರಿ ಕಾಮಗಾರಿ ನಡೆಸುವಾಗ ನಗರಪಾಲಿಕೆಯ ನೀರಿನ ಪೈಪ್ಗಳು ಒಡೆಯುತ್ತಿವೆ. ದುರಸ್ತಿ ಮಾಡುವುದನ್ನು ಸುಯೇಜ್ ಕಂಪನಿ ಮೂರ್ನಾಲ್ಕು ದಿನ ತಡ ಮಾಡುತ್ತಿದೆ ಎಂದು ಆಕ್ಷೇಪಿಸಿದರು.
ಕೆಯುಐಡಿಎಫ್ಸಿ – ಕೆಐಯುಡಬ್ಲ್ಯೂಎಂಐಪಿ ಕಾರ್ಯಕಾರಿ ಇಂಜಿನಿಯರ್ ಮಂಜುನಾಥ್ ಅವರು ಯೋಜನೆ ಕುರಿತು ವಿವರ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಮತ್ತಿತರರು ಉಪಸ್ಥಿತರಿದ್ದರು.