ಮುಂದಿನ ಪೀಳಿಗೆಗೆ ಇದು ಗಾಂಧೀಜಿ ಜೀವನ ದರ್ಶನದ ತಾಣ
ದಾವಣಗೆರೆ, ಫೆ. 16 – ಒಂದೂವರೆ ಶತಮಾನದ ಹಿಂದೆ ಜನಿಸಿದ್ದ ಮಹಾತ್ಮ ಗಾಂಧೀಜಿಯವರ ಜೀವನಾದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದೊಂದಿಗೆ ರೂಪುಗೊಂಡಿರುವ ನಗರದ ಗಾಂಧಿ ಭವನ ಉದ್ಘಾಟನೆಯ ಹಂತಕ್ಕೆ ತಲುಪಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಜಿಲ್ಲಾ ಕೇಂದ್ರದಲ್ಲಿ ಗಾಂಧಿ ಭವನ ನಿರ್ಮಿಸಲಾಗಿದೆ.
ಎಸ್.ಎಸ್. ಹೈಟೆಕ್ ಆಸ್ಪತ್ರೆ ಸಮೀಪದ ರಾಮನಗರದಲ್ಲಿ ಸುಮಾರು ಮೂರು ಕೋಟಿ ರೂ. ವೆಚ್ಚದಲ್ಲಿ 1 ಎಕರೆ ಜಾಗದಲ್ಲಿ ನಿರ್ಮಾಣಗೊಂಡಿರುವ ಗಾಂಧಿ ಭವನ, ಗಾಂಧೀಜಿ ಜೀವನದ ಹೋರಾಟದ ಹಲವಾರು ಹಂತಗಳನ್ನು ಬಿಂಬಿಸುತ್ತಿದೆ.
ವಸ್ತು ಪ್ರದರ್ಶನಾಲಯ, ಗ್ರಂಥಾಲಯ, ಸಭಾಂಗಣ ಇತ್ಯಾದಿ ಸೌಲಭ್ಯಗಳ ಜೊತೆಗೆ ಗ್ರಾನೈಟ್ ಹಾಗೂ ಸಿಮೆಂಟ್ನಿಂದ ರೂಪಿಸಲಾಗಿರುವ ಮನಸೂರೆಗೊಳ್ಳುವ ಪ್ರತಿಮೆಗಳು ಗಾಂಧಿ ಜೀವನದ ಚಿತ್ರಣ ಬಿಂಬಿಸುತ್ತಿವೆ.
ಗಾಂಧೀಜಿ ನೇತೃತ್ವದಲ್ಲಿ ನಡೆದ ದಂಡಿ ಯಾತ್ರೆ ಬಿಂಬಿಸುವ ಸಿಮೆಂಟ್ ಕಲಾಕೃತಿ ಸರಣಿ ಈ ಕೇಂದ್ರದ ಪ್ರಮುಖ ಆಕರ್ಷಣೆಯಂತಿದೆ. ಗಾಂಧೀಜಿ ಹಾಗೂ ಪತ್ನಿ ಕಸ್ತೂರಿಬಾ ಅವರ ಪ್ರತಿಮೆಗಳು ಒಂದೆಡೆಯಿದ್ದರೆ, ಭವನದ ಕೇಂದ್ರದಲ್ಲಿ ಗ್ರಾನೈಟ್ನಿಂದ ತಯಾರಿಸಲಾದ ಭವ್ಯ ಪ್ರತಿಮೆ ಇದೆ. ಇದನ್ನು 22 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಕೆಂಪು ಹಂಚು ಹೊಂದಿರುವ ಭವನದ ಸುತ್ತಲಿನ ಭೂವಿನ್ಯಾಸವು ಹಸಿರಿನ ಹೊದಿಕೆಯಲ್ಲಿದೆ. ಉದ್ಯಾನವನದ ಕೇಂದ್ರದಲ್ಲಿ ಧ್ಯಾನಮಗ್ನರಾದ ಗಾಂಧಿ ಪ್ರತಿಮೆ ಇದ್ದರೆ, ಸುತ್ತಲೂ ಮಗುವೊಂದನ್ನು ಓದಿಸುವ, ರಾಷ್ಟ್ರದ ನೇತಾರನನ್ನು ಪುಟಾಣಿಯೋರ್ವ ಮುನ್ನಡೆಸುವ, ಗಾಂಧೀಜಿ ತಮ್ಮ ಸಹಾಯಕಿಯರೊಂದಿಗೆ ಸಾಗುವ ಕಲಾಕೃತಿಗಳು ಇಲ್ಲಿವೆ.
ಇಲ್ಲಿನ ಕಲಾಕೃತಿಗಳನ್ನು ಶಿವಮೊಗ್ಗದ ಕಲಾವಿದರಾದ ಪರಶುರಾಮ ಮತ್ತು ಎಂ.ಡಿ. ಹೊನ್ನಮ್ಮನವರ್ ಹಾಗೂ ಸಹಾಯಕರು ನಿರ್ಮಿಸಿದ್ದಾರೆ. 2019ರ ಜೂನ್ನಲ್ಲಿ ಈ ಭವನದ ಕಾಮಗಾರಿ ಆರಂಭವಾಗಿದ್ದು, ಫೆಬ್ರವರಿ 2021ಕ್ಕೆ ಪೂರ್ಣಗೊಂಡಿದೆ.
ಭವನದ ಉದ್ಘಾಟನೆಗಾಗಿ ದಿನಾಂಕ ನಿಗದಿಗೆ ಇಲಾಖೆಯ ಕೇಂದ್ರ ಕಚೇರಿಗೆ ಪತ್ರ ಬರೆಯಲಾಗಿದೆ. ಉತ್ತರದ ನಿರೀಕ್ಷೆಯಲ್ಲಿದ್ದೇವೆ ಎಂದು ಗಾಂಧಿ ಭವನದ ಸದಸ್ಯ ಕಾರ್ಯದರ್ಶಿಯೂ ಆಗಿರುವ ಜಿಲ್ಲಾ ವಾರ್ತಾಧಿಕಾರಿ ಡಿ. ಅಶೋಕ್ ಕುಮಾರ್ ತಿಳಿಸಿದ್ದಾರೆ.
ಮಹಾತ್ಮ ಗಾಂಧೀಜಿ ಅವರ ತತ್ವಾದರ್ಶಗಳನ್ನು ಜನತೆಗೆ ತಲುಪಿಸುವ ಕಾರ್ಯವನ್ನು ವಾರ್ತಾ ಇಲಾಖೆ ನಿರಂತರವಾಗಿ ಮಾಡಿಕೊಂಡು ಬಂದಿದೆ. ಮುಂದುವರೆದ ಭಾಗವಾಗಿ ಮುಂದಿನ ಪೀಳಿಗೆಗೆ ಗಾಂಧೀಜಿ ತತ್ವಾದರ್ಶಗಳನ್ನು ತಿಳಿಸಲು ಗಾಂಧಿ ಭವನ ನಿರ್ಮಿಸಿದೆ ಎಂದು ಅಶೋಕ್ ಕುಮಾರ್ ಹೇಳಿದ್ದಾರೆ.