ಪ್ರಾಮಾಣಿಕವಾಗಿ ದುಡಿಯುವವರನ್ನು ಗೆಲ್ಲಿಸಿ

ಪಂಚಮಸಾಲಿ ಸಮಾಜಕ್ಕೆ ಬಸವ ಜಯಮೃತ್ಯುಂಜಯ ಶ್ರೀ ಕರೆ 

ದಾವಣಗೆರೆ, ಸೆ. 30 – ಪಂಚಮಸಾಲಿ ಸಮಾಜದ ಪರವಾಗಿ ಪ್ರಾಮಾಣಿಕವಾಗಿ ದುಡಿಯುತ್ತಿರುವವರನ್ನು ಮುಂದಿನ ಚುನಾವಣೆಗಳಲ್ಲಿ ಗೆಲ್ಲಿಸಲು ಶ್ರಮಿಸುವಂತೆ ಪಂಚಮಸಾಲಿ ಸಮಾಜಕ್ಕೆ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದ್ದಾರೆ.

ನಗರದ ತ್ರಿಶೂಲ್ ಕಲಾ ಭವನದಲ್ಲಿ ಆಯೋಜಿಸಲಾಗಿದ್ದ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್,  2ಎ ಮೀಸಲಾತಿ ಹೋರಾಟದ ಸಭೆ ಹಾಗೂ ಪಂಚಮಸಾಲಿ ಮಹಾಸಭಾದ ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷರಾಗಿ ಮಾಜಿ ಮೇಯರ್ ಬಿ.ಜಿ. ಅಜಯ್ ಕುಮಾರ್ ಅಧಿಕಾರ ವಹಿಸಿಕೊಳ್ಳುವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡುತ್ತಿದ್ದರು.

ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್ ಅವರು ಸದನದಲ್ಲಿ ದನಿ ಎತ್ತಿರುವುದು ಸಮಾಜದ ಪುಣ್ಯ. ಬಿ.ಜಿ. ಅಜಯ್ ಕುಮಾರ್ ದಾವಣಗೆರೆಯಲ್ಲಿ ಹಾಗೂ ಹೆಚ್.ಎಸ್. ಶಿವಶಂಕರ್ ಹರಿಹರ ದಲ್ಲಿ ಸಮಾಜಕ್ಕೆ ಶ್ರಮಿಸುತ್ತಿದ್ದಾರೆ. ನಮಗೆ ನೂರು ಜನ ಶಾಸಕರು ಬೇಡ, ಸಮಾಜಕ್ಕೆ ಪ್ರಾಮಾಣಿಕವಾದವರು ಗೆಲ್ಲಬೇಕಿದೆ ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಮಾಜಕ್ಕೆ ಮೀಸ ಲಾತಿ ಕೊಡುವುದಾಗಿ ಹೇಳಿ ಕೈ ಕೊಟ್ಟರು. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೀಸಲಾತಿ ಕೊಡುವ ವಿಶ್ವಾಸ ಇದೆ. ಅವರು ಮೀಸಲಾತಿ ಕಲ್ಪಿಸಿದರೆ, ಡೈಮಂಡ್ ಕಲ್ಲುಸಕ್ಕರೆಯಲ್ಲಿ ತುಲಾಭಾರ ಮಾಡುತ್ತೇವೆ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯ ಸಂದರ್ಭದಲ್ಲಿ ಅವರ ಚಿತ್ರವನ್ನೂ ಇಟ್ಟು ಗೌರವಿಸುತ್ತೇವೆ ಎಂದು ಶ್ರೀಗಳು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅರವಿಂದ ಬೆಲ್ಲದ್, ಪಂಚಮಸಾಲಿ ಸಮಾಜದಲ್ಲಿ ರೈತರೇ ಹೆಚ್ಚಾಗಿದ್ದು ಅತಿವೃಷ್ಟಿ – ಅನಾವೃಷ್ಟಿಯಿಂದ ಬಳಲುತ್ತಿದ್ದಾರೆ. ಹೀಗಾಗಿ ಸಮಾಜಕ್ಕೆ ಮೀಸಲಾತಿ ಬೇಕಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಮೇಯರ್ ಬಿ.ಜಿ. ಅಜಯ್ ಕುಮಾರ್ ಅವರು ಪಂಚಮಸಾಲಿ ಸಮಾಜದ ಯುವ ಘಟಕದ ರಾಷ್ಟ್ರಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಪಂಚ ಲಾಂಛನಗಳನ್ನು ನೀಡಿ ಅವರಿಗೆ ಅಧ್ಯಕ್ಷ ಸ್ಥಾನ ವಹಿಸಿಕೊಡಲಾಯಿತು.

ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ನಂದಿಗುಡಿಯ ನೊಳಂಬ ಪೀಠದ ಜಗದ್ಗುರು ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ, ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶೆಪ್ಪನವರ್‌, ಸಮಾಜದ ಮುಖಂಡರಾದ ಮಂಜುನಾಥ ಕುನ್ನೂರು, ಸೋಮಣ್ಣ ಬೇವಿನಮರದ್, ನಂದಿಹಳ್ಳಿ ಹಾಲಪ್ಪ, ಮಲ್ಲೇಶ್, ಪುಟ್ಟಸ್ವಾಮಿ, ವೀಣ ಕಾಶೆಪ್ಪನವರ್‌, ಡಾ. ನಾಗರಾಜ್ ಹುಲಿ, ರುದ್ರಗೌಡ್ರು, ಕೇಬಲ್ ಮಹೇಶ್, ಚಿದಾನಂದಪ್ಪ ಬೆನಕನಕೊಂಡಿ, ಸುಭಾಶ್ಚಂದ್ರ ಮತ್ತಿತರರು ಉಪಸ್ಥಿತರಿದ್ದರು.

error: Content is protected !!