ಮೀಸಲಾತಿ ಬಗ್ಗೆ ಸ್ಪಷ್ಟ ಭರವಸೆ ಕೊಡಿ

ಪಂಚಮಸಾಲಿಗರಿಗೆ 2ಎ ಮೀಸಲಾತಿ ಬಗ್ಗೆ ಸಿಎಂಗೆ ಬಸವ ಜಯಮೃತ್ಯುಂಜಯ ಶ್ರೀ ಆಗ್ರಹ

ದಾವಣಗೆರೆ, ಸೆ. 30 – ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮಾಜಕ್ಕೆ ಸಮಾಧಾನ ತರುವ ರೀತಿಯಲ್ಲಿ ಸ್ಪಷ್ಟ ಭರವಸೆ ನೀಡಬೇಕು. ಇಲ್ಲವಾದರೆ ಮೀಸಲಾತಿಗಾಗಿ ಹೋರಾಟ ಮುಂದುವರೆಸಲಾಗುವುದು ಎಂದು ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗಡೆ ಅವರು ಮೀಸಲಾತಿ ಬಗ್ಗೆ ನೀಡಿರುವ ಹೇಳಿಕೆಯೂ ಸಮಾಧಾನ ತಂದಿದೆ. ಅಕ್ಟೋಬರ್ 1ರಂದು ಆಯೋಗದ ಎದುರು ದಾಖಲೆಗಳನ್ನು ಸಲ್ಲಿಸಲಿದ್ದೇವೆ. ಆಯೋಗ ತ್ವರಿತವಾಗಿ ವರದಿ ನೀಡಿ, ರಾಜ್ಯ ಸರ್ಕಾರ ಅಕ್ಟೋಬರ್ 13ರ ಒಳಗೆ 2ಎ ಮೀಸಲಾತಿ ಘೋಷಿಸುವ ನಿರೀಕ್ಷೆ ಇದೆ ಎಂದು ಶ್ರೀಗಳು ಹೇಳಿದ್ದಾರೆ.

ಸಮಾಜದ ಹೋರಾಟದ ಫಲವಾಗಿ ಇಪ್ಪತ್ತೈದು ವರ್ಷಗಳಿಂದ ಬಾಕಿ ಇದ್ದ ಮೀಸಲಾತಿ ವಿಷಯ ಶೇ.99ರಷ್ಟು ಮುನ್ನಡೆ ಕಂಡಿದ್ದು, ಆಯೋಗದ ವರದಿ ಸಲ್ಲಿಕೆಯ ನಂತರ ಸಂಪುಟದಲ್ಲಿ ಅನುಮತಿ ಪಡೆಯುವ ಶೇ.1ರಷ್ಟು ಕೆಲಸ ಮಾತ್ರ ಬಾಕಿ ಇದೆ. ಆ ಬಗ್ಗೆಯೂ ಮುಖ್ಯಮಂತ್ರಿ ಕ್ರಮ ತೆಗೆದುಕೊಳ್ಳಬೇಕು. ಅ.1ರಂದು ಬೆಂಗಳೂರಿನಲ್ಲಿ ಮೀಸಲಾತಿಗೆ ಒತ್ತಾಯಿಸಿ ಬೃಹತ್ ಸಭೆ ನಡೆಯಲಿದೆ. ಸಭೆಗೆ ಮುಂಚೆಯೇ ಸ್ಪಷ್ಟ ಭರವಸೆ ನೀಡಬೇಕು ಎಂದವರು ಆಗ್ರಹಿಸಿದ್ದಾರೆ.

ಒಂದು ವೇಳೆ ಸರ್ಕಾರ ಸ್ಪಷ್ಟ ಭರವಸೆ ನೀಡದೇ ಹೋದರೆ, ಸ್ವತಂತ್ರ ಉದ್ಯಾನವನದಲ್ಲಿ ಧರಣಿ ನಡೆಸುವುದೂ ಸೇರಿದಂತೆ ಹೋರಾಟದ ಮುಂದಿನ ಹೆಜ್ಜೆಗಳನ್ನು ಇಡಲಾಗುವುದು ಎಂದ ಶ್ರೀಗಳು, ಪಂಚಮಸಾಲಿ ಸಮಾಜ ಈಗ ಮೀಸಲಾತಿ ಎಂಬ ಬಸ್ ನಿಲ್ದಾಣಕ್ಕೆ ಬಂದಿದೆ. ಈ ಬಾರಿ ಮೀಸಲಾತಿಯ ಬಸ್ ಏರುವ ಸಂಪೂರ್ಣ ಭರವಸೆ ಇದೆ ಎಂದು ಶ್ರೀಗಳು ಹೇಳಿದ್ದಾರೆ.

ಅ.1ರ ಶುಕ್ರವಾರದಂದು ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಜೆ.ಹೆಚ್. ಪಟೇಲ್ ಅವರ ಜನ್ಮ ದಿನವನ್ನು ಆಚರಿಸಲಾಗುವುದು ಎಂದವರು ಇದೇ ಸಂದರ್ಭದಲ್ಲಿ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಲಿಂಗಾಯತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆರು ತಿಂಗಳಲ್ಲಿ ಮೀಸಲಾತಿ ಕಲ್ಪಿಸುವುದಾಗಿ ನೀಡಿದ ಭರವಸೆಯಂತೆ ಹೋರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ನಮ್ಮ ಸಮಾಜದ ಮಕ್ಕಳಿಗೆ 2ಎ ಮೀಸಲಾತಿ ಪತ್ರ ಸಿಗುವವರೆಗೂ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.

ಮೀಸಲಾತಿ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಶಿವಶಂಕರ್ ಮಾತನಾಡಿ, ನೊಳಂಬ ಸಮಾಜದ ಅಧ್ಯಕ್ಷ ಎಂ.ಎಸ್. ಪಾಟೀಲ್‌ ಅವರು ಇತ್ತೀಚೆಗೆ 2ಎ ಮೀಸಲಾತಿಗೆ ಒತ್ತಾಯಿಸಿದ್ದಾರೆ. ಇದು ಪಂಚಮಸಾಲಿ ಹೋರಾಟದಿಂದ ಲಿಂಗಾಯತದ ಎಲ್ಲ ಒಳ ಸಮುದಾಯಗಳ ಕಣ್ತೆರೆಸಿರುವುದನ್ನು ತೋರಿಸುತ್ತಿದೆ ಎಂದರು.

ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶೆಂಪೂರ್, ಸಮಾಜದ ಮುಖಂಡರಾದ ತ್ರಿಶೂಲ್ ಪಾಣಿ ಪಟೇಲ್‌, ಹೆಚ್.ಎಸ್. ಅರವಿಂದ, ಹೇಮಂತ್‌ ಕುಮಾರ್ ಪಾಟೀಲ್‌, ದೀಟೂರು ಮಲ್ಲಪ್ಪ, ಮಾಜಿ ಮೇಯರ್‌ ಬಿ.ಜಿ. ಅಜಯ್‌ ಕುಮಾರ್‌, ಪರಮೇಶ್ವರ ಗೌಡ್ರು,  ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್‌, ಎಸ್. ಓಂಕಾರಪ್ಪ, ಗೋಕಾಕ್ ನಿಂಗಪ್ಪ ತಿರೋಜಿ, ಅಶೋಕ್ ಗೋಪನಾಳ್‌, ಮಹಾಂತೇಶ್, ಶಂಭುಲಿಂಗನ ಗೌಡ ಪಾಟೀಲ್‌ ಮತ್ತಿತರರು ಉಪಸ್ಥಿತರಿದ್ದರು.

error: Content is protected !!