ದಾವಣಗೆರೆ,ಸೆ.30- ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಕಳೆದ 7 ವರ್ಷಗಳ ಹಿಂದೆ ನಿವೃತ್ತರಾಗಿರುವ ನಗರದ ಪಿ.ಕಲ್ಲಪ್ಪ ಅವರು, ತಮಗೆ ಸೇರಿದ ಕೋಟ್ಯಾಂತರ ರೂ. ಮೌಲ್ಯದ ಮನೆಯನ್ನು ಅಂಧರ ಆಶ್ರಮಕ್ಕೆ ದಾನವಾಗಿ ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಜಾಗೃತ ದಳ ಸಬ್ ಇನ್ ಸ್ಪೆಕ್ಟರ್ ಆಗಿದ್ದ ಸಂದರ್ಭದಲ್ಲಿ, 2014 ಮಾರ್ಚ್ 31ರಂದು ನಿವೃತ್ತರಾಗಿದ್ದ ಕಲ್ಲಪ್ಪ ಅವರು, ತಮ್ಮ ಸೇವೆಯ ಕೊನೆಯ ತಿಂಗಳ ವೇತನವನ್ನು ಪೊಲೀಸ್ ಕಲ್ಯಾಣ ನಿಧಿಗೆ ಹಾಗೂ ನಿವೃತ್ತಿ ವೇತನದ ಮೊದಲ ತಿಂಗಳ ಪಿಂಚಣಿ ಹಣವನ್ನು ನಿವೃತ್ತ ಪೊಲೀಸರ ಕಲ್ಯಾಣ ನಿಧಿಗೆ ಸಮರ್ಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದೀಗ, ಸ್ಥಳೀಯ ಸರಸ್ವತಿ ಬಡಾವಣೆ 1ನೇ ಮುಖ್ಯ ರಸ್ತೆ, 4ನೇ ತಿರುವಿನಲ್ಲಿರುವ ತಾವು ಸಂಪಾದಿಸಿದ್ದ ಹಣದಲ್ಲಿ ನಿರ್ಮಿಸಿ ವಾಸವಾಗಿದ್ದ ಮನೆಯನ್ನು ಬಾಡಾ ಕ್ರಾಸ್ ಬಳಿಯ ಶ್ರೀ ಗುರು ಪಂಡಿತ ಪಂಚಾಕ್ಷರಿ ಗವಾಯಿಗಳ ಅಂಧರ ಶಿಕ್ಷಣ ಸಮಿತಿಯಡಿಯಲ್ಲಿರುವ ಶ್ರೀ ವೀರೇಶ್ವರ ಪುಣ್ಯಾಶ್ರಮಕ್ಕೆ ಅವರು ದಾನವಾಗಿ ಕೊಟ್ಟಿದ್ದಾರೆ.
ತಮ್ಮ ಸಂತೃಪ್ತ ಜೀವನಕ್ಕೆ ಪೊಲೀಸ್ ಇಲಾಖೆಗೆ ಋಣಿಯಾಗಿರುವುದಾಗಿ ತಿಳಿಸಿರುವ ಕಲ್ಲಪ್ಪ, ಈ ಹಿನ್ನೆಲೆಯಲ್ಲಿ ತಮ್ಮ ಕೈಲಾದ ನೆರವು ನೀಡುವ ನಿಟ್ಟಿನಲ್ಲಿ ಪೊಲೀಸ್ ಕಲ್ಯಾಣ ನಿಧಿ ಮತ್ತು ನಿವೃತ್ತ ಪೊಲೀಸರ ಕಲ್ಯಾಣ ನಿಧಿಗೆ ದೇಣಿಗೆ ನೀಡಿದ್ದೇನೆ ಎಂದು ಅವರು ಭಾವುಕರಾಗಿ ನುಡಿದಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ 39 ವರ್ಷಗಳ ಸುದೀರ್ಘ ಕಾಲ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಕಲ್ಲಪ್ಪ, ಮೃದು ಸ್ವಭಾವದವರಾಗಿದ್ದು, ಸರಳ – ಸಜ್ಜನಿಕೆಗೆ ಹೆಸರಾಗಿದ್ದಾರೆ. ಪೊಲೀಸರು ದೇಶಕ್ಕೆ ಸಲ್ಲಿಸುತ್ತಿ ರುವ ಸೇವೆಯನ್ನು ಮೆಲುಕು ಹಾಕಿರುವ ಅವರು, ಪೊಲೀಸರ ಕಠಿಣ ಸೇವೆಯನ್ನು ಸ್ವತಃ ತಾವು ಅರಿತಿರುವ ಕಾರಣ, ತಮ್ಮ ಸಹೋದ್ಯೋಗಿಗಳಿಗೆ ಸಹಾಯ ಹಸ್ತ ಚಾಚುವ ದಿಸೆಯಲ್ಲಿ ಈ ದೇಣಿಗೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಗೌರವಾರ್ಪಣೆ : ಶ್ರೀ ವೀರೇಶ್ವರ ಪುಣ್ಯಾಶ್ರಮ ದಲ್ಲಿ ಕಳೆದ ವಾರ ನಡೆದ ಪರಮಪೂಜ್ಯ ಗಾನ ಯೋಗಿ ಲಿಂ.ಪಂ. ಪಂಚಾಕ್ಷರಿ ಗವಾಯಿಗಳವರ 77ನೇ ಪುಣ್ಯ ಸ್ಮರಣೋತ್ಸವ, ಪದ್ಮಭೂಷಣ ಲಿಂ.ಡಾ.ಪಂಡಿತ ಪುಟ್ಟರಾಜ ಗವಾಯಿಗಳವರ 11ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ, ತಾವು ವಾಸವಾಗಿದ್ದ ಮನೆಯನ್ನು ಶ್ರೀ ವೀರೇಶ್ವರ ಪುಣ್ಯಾಶ್ರಮಕ್ಕೆ ದಾನ ಮಾಡಿರುವ ನಿವೃತ್ತ ಪೊಲೀಸ್ ಅಧಿಕಾರಿ ಕಲ್ಲಪ್ಪ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.