ದಾವಣಗೆರೆ, ಏ.19- ಸಂವಿಧಾನ ಸುಟ್ಟು ಹಾಕಿದ್ದಲ್ಲದೇ, ಅದನ್ನು ಬದಲಾಯಿಸಲು ಮುಂದಾಗಿದ್ದವರು ಇದೀಗ ಅಂಬೇಡ್ಕರ್‍ಗೆ ಪುಷ್ಪಾರ್ಚನೆ ಮಾಡಿ ನಾಟಕೀಯವಾಗಿ ಜಯಂತಿ ಆಚರಿಸುತ್ತಿರುವುದು ದೇಶದ ಬಹುದೊಡ್ಡ ದುರಂತ ಎಂದು ಕಾರ್ಮಿಕ ಮುಖಂಡ, ಜಿಲ್ಲಾ ಸಿಪಿಐ ಕಾರ್ಯದರ್ಶಿ ಹೆಚ್.ಕೆ. ರಾಮಚಂದ್ರಪ್ಪ ಕಿಡಿ ಕಾರಿದರು.
ಅವರು, ಇಂದು ನಗರದ ಅಶೋಕ ರಸ್ತೆಯಲ್ಲಿನ ಕಾಮ್ರೆಡ್ ಪಂಪಾಪತಿ ಭವನದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ ಜಿಲ್ಲಾ ಮಂಡಳಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ,
ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಪ್ರಪಂಚದಲ್ಲಿಯೇ ಶ್ರೇಷ್ಠ ಗ್ರಂಥವಾಗಿರುವ ಸಂವಿಧಾನವನ್ನು
ಸುಟ್ಟುಹಾಕಿ, ಹಿಂದುತ್ವದ ಆಧಾರದಲ್ಲಿ ಸಂವಿಧಾನ ತರುತ್ತೇವೆ ಎಂದವರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಭಾಷಣ ಮಾಡುತ್ತಿರುವುದು ನಾಟಕೀಯ ಎಂದು ಬೇಸರ ವ್ಯಕ್ತಪಡಿಸಿದರು.
ತಮಗಾದ ಹಿಂಸೆ, ದಬ್ಬಾಳಿಕೆ, ದೌರ್ಜನ್ಯ ಇವೆಲ್ಲವನ್ನೂ ಸಹಿಸಿಕೊಂಡು ಅರ್ಥಶಾಸ್ತ್ರ, ರಾಜನೀತಿ ಸೇರಿದಂತೆ ಹತ್ತಾರು ವಿಷಯಗಳಲ್ಲಿ ಪದವಿ ಪಡೆದುಕೊಂಡು ಡಾಕ್ಟರೇಟ್ ಪಡೆದರು. ಕಾರ್ಮಿಕ ಸಚಿವರಾಗಿ, ಕಾನೂನು ಸಚಿವರಾಗಿ, ತಮ್ಮ ನೇತೃತ್ವದಲ್ಲಿ 295 ಜನರ ಸಮಿತಿ ರಚಿಸಿ ಸಂವಿಧಾನ ಹೊರತರಲಾಯಿತು. ಇಂತಹ ಅಂಬೇಡ್ಕರ್ ಅವರಿಗೆ ಅಂದಿನ ಸರ್ಕಾರ ಅನಿವಾರ್ಯವಾಗಿ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿತು ಎಂದು ಹೇಳಿದರು.
ಸಮಾಜವಾದಿ, ಸಮತಾವಾದಿ ಸಮಾಜ ನಿರ್ಮಾಣವಾಗಬೇಕೆಂಬ ಅಂಬೇಡ್ಕರರ ಕನಸು ಇದುವರೆಗೂ ನನಸಾಗಿಲ್ಲ. ಬದಲಾಗಿ, ಅವರು ರಚಿಸಿರುವ ಸಂವಿಧಾನಕ್ಕೆ ಕುತ್ತು ತರಲಾಗುತ್ತಿದ್ದು, ಇದರ ವಿರುದ್ಧ ದನಿಯೆತ್ತುವವರಿಗೆ ಬೇರೆ ತೆರನಾದ ಪಟ್ಟ ಕಟ್ಟಿ ಮೂಲೆಗುಂಪು ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಪಿಐ ಜಿಲ್ಲಾ ಸಹಕಾರ್ಯದರ್ಶಿ ಆನಂದರಾಜ್ ವಹಿಸಿದ್ದರು, ಆವರಗೆರೆ ಚಂದ್ರು, ರಾಘವೇಂದ್ರ ನಾಯರಿ, ಡಿ.ಎಸ್.ನಾಗರಾಜ್, ಎಂ.ಬಿ.ಶಾರದಮ್ಮ, ರುದ್ರಮ್ಮ, ಸರೋಜಮ್ಮ, ವಿಶಾಲಾಕ್ಷಮ್ಮ, ಆವರಗೆರೆ ವಾಸು, ಐರಣಿ ಚಂದ್ರು, ಪಿ.ಷಣ್ಮುಖಸ್ವಾಮಿ, ಆವರಗೆರೆ ಚಂದ್ರು ಇತರರು ಇದ್ದರು.