ಸರ್ಕಾರಿ-ಖಾಸಗಿ ಬಸ್ ಚಾಲಕ, ನಿರ್ವಾಹಕರ ಮಧ್ಯೆ ಮಾತಿನ ಚಕಮಕಿ

ದಾವಣಗೆರೆ, ಏ.19- ಪ್ರಯಾಣಿಕರು ಸಂಚರಿಸುವ ಮಾರ್ಗದಲ್ಲಿ ಬಸ್ಸುಗಳನ್ನು ಓಡಿಸುವ ವಿಚಾರದಲ್ಲಿ ಕೆಎಸ್‍ಆರ್‍ಟಿಸಿ ಸಾರಿಗೆ ನೌಕರರು ಹಾಗೂ ಖಾಸಗಿ ಬಸ್ ನೌಕರರ ನಡುವೆ ಜಟಾಪಟಿ, ಮಾತಿನ ಚಕ ಮಕಿಯೂ ನಡೆದು ನಿಲ್ದಾಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಸಾರಿಗೆ ಅಧಿಕಾರಿಗಳು ತಮಗೆ ನೀಡಿರುವ ಪರವಾನಗಿಯಂತೆ ಮಾರ್ಗ ರಹದಾರಿಯಲ್ಲಿ ಬಸ್ಸುಗಳನ್ನು ಓಡಿಸುವ ವಿಚಾರದಲ್ಲಿ ನಗರದ ಹೈಸ್ಕೂಲ್ ಮೈದಾನ ದಲ್ಲಿ ನಿರ್ಮಿಸಲಾಗಿರುವ ಕೆಎಸ್‍ಆರ್‍ಟಿಸಿ ಬಸ್‍ ನಿಲ್ದಾಣದಲ್ಲಿ ಕೆಎಸ್‍ಆರ್‍ಟಿಸಿ ಹಾಗೂ ಖಾಸಗಿ ಬಸ್ ಚಾಲಕರ ನಡುವೆ ನಾ ಮುಂದು, ತಾ ಮುಂದು ಎನ್ನುವಂತೆ ತಮಗೆ ನೀಡಿರುವ ಮಾರ್ಗ ರಹದಾರಿಯಲ್ಲಿ ನಾವೇ ಮೊದಲು ಬಸ್ಸುಗಳನ್ನು ಬಿಡಬೇಕೆನ್ನುವ ವಿಚಾರದಲ್ಲಿ ಒಬ್ಬರಿಗೊಬ್ಬರು ಗಲಾಟೆಯಲ್ಲಿ ತೊಡಗಿದರು.

ಇದು ಕೆಎಸ್‍ಆರ್‍ಟಿಸಿ ಬಸ್ಸುಗಳು ನಿಲ್ಲುವ ಸ್ಥಳ, ಅಲ್ಲದೇ ನಾವುಗಳೇ ಈ ಮಾರ್ಗದಲ್ಲಿ ಸಂಚರಿಸಬೇಕು ಎಂದು ಕೆಎಸ್‍ಆರ್‍ಟಿಸಿ ಬಸ್ಸಿನ ಚಾಲಕರು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಖಾಸಗಿ ಬಸ್ ಚಾಲಕರು ಸಾರಿಗೆ ಇಲಾಖೆಯಿಂದ ಇದೇ ನಿಲ್ದಾಣದಿಂದ ಇದೇ ಮಾರ್ಗದಲ್ಲಿ ಸಂಚರಿಸುವಂತೆ ನಮಗೂ ರಹದಾರಿ ನೀಡಿದ್ದಾರೆ. ಕಾರಣ ನಾವುಗಳೇ ಮೊದಲು ಆ ಮಾರ್ಗದಲ್ಲಿ ಸಂಚರಿಸುತ್ತೇವೆ ಎಂದು ಒಬ್ಬರಿಗೊಬ್ಬರು ಪರಸ್ಪರ ವಾದ ಮಾಡಿಕೊಂಡಿದ್ದಾರೆ.

6ನೇ ವೇತನ ಆಯೋಗದ ಅನ್ವಯ ವೇತನ ಹೆಚ್ಚಳ ಮತ್ತು ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿ ಕೆಎಸ್‍ಆರ್‍ಟಿಸಿ ಸಾರಿಗೆ ನೌಕರರು ಮುಷ್ಕರ ಆರಂಭಿಸಿ ಸೋಮವಾರ 13ನೇ ದಿನಕ್ಕೆ ಕಾಲಿಟ್ಟಿದೆ. ಮುಷ್ಕರದ ಹಿನ್ನೆಲೆಯಲ್ಲಿ ನೌಕರರು ಕರ್ತವ್ಯಕ್ಕೆ ಹಾಜರಾಗದೇ ಕೆಎಸ್‍ಆರ್‍ಟಿಸಿ ಸಾರಿಗೆ ಬಸ್‍ಗಳು ಸಂಚರಿಸದ ಕಾರಣ ಸಾರಿಗೆ ಇಲಾಖೆಯಿಂದ ಕೆಎಸ್‍ಆರ್‍ಟಿಸಿ ಬಸ್‍ಗಳು ಸಂಚರಿಸುವ ಮಾರ್ಗಗಳಲ್ಲಿ ಖಾಸಗಿ ಬಸ್‍ಗಳು ಸಂಚರಿಸಲು ಅವಕಾಶ ನೀಡಲಾಗಿತ್ತು.

ಈ ಮಧ್ಯೆ ಕೆಎಸ್‍ಆರ್‍ಟಿಸಿ ಬಸ್ಸುಗಳನ್ನು ಆಯಾ ಮಾರ್ಗದಲ್ಲಿ ಓಡಿಸುವಂತೆ ಚಾಲಕರು ಮತ್ತು ನಿರ್ವಾಹಕರಿಗೆ ನಿಗಮವು ಮನವಿ ಮಾಡಿ, ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರೂ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಇದರಿಂದಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ಸರ್ಕಾರವು ಖಾಸಗಿ ಬಸ್ಸುಗಳ ಮಾಲೀಕರೊಂದಿಗೆ ಮಾತುಕತೆ ನಡೆಸಿ, ಕೆಎಸ್‍ಆರ್‍ಟಿಸಿ ಬಸ್ಸುಗಳು ಸಂಚರಿಸುವ ಮಾರ್ಗಗಳಲ್ಲಿ ಖಾಸಗಿ ಬಸ್ಸುಗಳಿಗೆ ಸಂಚರಿಸಲು ಅನುವು ಮಾಡಿಕೊಟ್ಟಿತ್ತು. ನಿಗಮವು ಇಷ್ಟೆಲ್ಲಾ ಕಸರತ್ತು ಮಾಡಿದ್ದರೂ ಸಹ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಆದರೆ ಇದೀಗ ದಿನೇ ದಿನೇ ನಿಗಮದ ಸಿಬ್ಬಂದಿಗಳು ಕೆಲಸಕ್ಕೆ ಹಾಜರಾಗುತ್ತಿದ್ದು, ಸಿಬ್ಬಂದಿಗಳ ಹಾಜರಾತಿಗೆ ತಕ್ಕಂತೆ ನಿಗಮವು ಕೆಎಸ್‍ಆರ್‍ಟಿಸಿ ಬಸ್ಸುಗಳನ್ನು ದಿನೇ ದಿನೇ ಹೆಚ್ಚಳ ಮಾಡುತ್ತಾ ಬಂದಿದೆ. 

ಪ್ರಯಾಣಿಕರೂ ಸಹ ಕೆಎಸ್‍ಆರ್‍ಟಿಸಿ ಬಸ್ಸುಗಳತ್ತ ಮುಖ ಮಾಡುತ್ತಿದ್ಧಾರೆ. ಇದರಿಂದಾಗಿ ನಮಗೆ ತೊಂದರೆ ಆಗುತ್ತಿದೆ. ಅಲ್ಲದೇ ನಿಗಮದ ಸಿಬ್ಬಂದಿಗಳು ನಮ್ಮಗಳ ವಿರುದ್ದ ಜಗಳಕ್ಕೆ ಬರುತ್ತಿದ್ದಾರೆ ಎಂದು ಖಾಸಗಿ ಬಸ್ಸುಗಳ ಚಾಲಕರು, ನಿರ್ವಾಹಕರು ದೂರಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೆಎಸ್‍ಆರ್‍ಟಿಸಿ ನೌಕರರು ನಾವುಗಳು ಬಸ್ಸುಗಳನ್ನು ಓಡಿಸುವ ಮಾರ್ಗದಲ್ಲಿ ಅವರು ಓಡಿಸುತ್ತಿದ್ದರು. ಇದೀಗ ಕರ್ತವ್ಯಕ್ಕೆ ಬಂದಿದ್ದೇವೆ. ನಮ್ಮ ಮೇಲಿನ ಅಧಿಕಾರಿಗಳು ಸೂಚನೆ ನೀಡಿದಂತೆ ನಾವುಗಳು ಆಯಾ ಮಾರ್ಗಗಳಲ್ಲಿ ಬಸ್ಸುಗಳನ್ನು ಓಡಿಸಬೇಕಾಗಿದೆ. ಕೆಎಸ್‍ಆರ್‍ಟಿಸಿ ಬಸ್ಸು ನಿಲ್ದಾಣದಲ್ಲಿ ಅವರಿಗೇನು ಕೆಲಸ ಎನ್ನುವ ವಾದ ಅವರದು.

ಈ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳ ಬಳಿ ಅಸಮಾಧಾನ ವ್ಯಕ್ತಪಡಿಸಿರುವ ಖಾಸಗಿ ಬಸ್ಸಿನ ಸಿಬ್ಬಂದಿಗಳು ನಮಗೂ ಅದೇ ಮಾರ್ಗದಲ್ಲಿ ಬಸ್ಸುಗಳನ್ನು ಓಡಿಸಲು ಅವಕಾಶ ನೀಡಿ ಎಂದು ಕೇಳಿಕೊಂಡಿದ್ದಾರೆ. ಇದಲ್ಲದೇ ಕೆಎಸ್‍ಆರ್‍ಟಿಸಿ ಬಸ್ಸುಗಳು ರಸ್ತೆಗೆ ಇಳಿದಿದ್ದಕ್ಕೆ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಕಳೆದ 13 ದಿನಗಳಿಂದ ಕೆಎಸ್‍ಆರ್‍ಟಿಸಿ ಬಸ್‍ ನಿಲ್ದಾಣದಲ್ಲಿ ತಮ್ಮ ಬಸ್ಸುಗಳನ್ನು ನಿಲ್ಲಿಸಿಕೊಂಡು ಸಾರಿಗೆ ಅಧಿಕಾರಿಗಳು ನೀಡಿದ ರಹದಾರಿಯಂತೆ ಬಸ್ಸುಗಳನ್ನು ಓಡಿಸುತ್ತಿದ್ದ ಖಾಸಗಿ ಬಸ್ಸುಗಳು ಅನಿವಾರ್ಯವಾಗಿ ಪಕ್ಕದಲ್ಲೇ ಇರುವ ಖಾಸಗಿ ಬಸ್ ನಿಲ್ದಾಣಕ್ಕೆ ವಾಪಾಸ್ಸಾಗುವ ಅನಿವಾರ್ಯತೆ ಬಂದಿದೆ. ಕೆಎಸ್‍ಆರ್‍ಟಿಸಿ ಬಸ್ಸುಗಳು ಓಡುತ್ತಿರುವುದು ಸಂತೋಷದ ವಿಷಯ. ಈಗಾಗಲೇ ನಾವುಗಳು ಯಾವುದೇ ಕಡೆಗಳಲ್ಲಿ ಹೋಗಬೇಕಾದರೂ ಕೆಎಸ್‍ಆರ್‍ಟಿಸಿ ಬಸ್ಸುಗಳಲ್ಲೇ ತೆರಳುತ್ತಿದ್ದೆವು. ಮುಷ್ಕರದಿಂದ ಅನಿವಾರ್ಯವಾಗಿ ಖಾಸಗಿ ಬಸ್ಸಿನಲ್ಲಿ ಓಡಾಡುವ ಪರಿಸ್ಥಿತಿ ಬಂದಿತ್ತು. ಇದೀಗ ಮತ್ತೆ ಸಾರಿಗೆ ನಿಗಮದ ಬಸ್ಸುಗಳು ರಸ್ತೆಗೆ ಇಳಿದಿರುವುದು ಸಂತೋಷದ ವಿಷಯವೂ ಹೌದು. ಅದಲ್ಲದೇ ಸುರಕ್ಷಿತವೂ ಹೌದು ಎನ್ನುತ್ತಾರೆ ಪ್ರಯಾಣಿಕರು.

error: Content is protected !!