ದಾವಣಗೆರೆ, ಏ.19- ಸರ್ಕಾರಿ ನೌಕರ ರೆಂದು ಪರಿಗಣನೆ, 6ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ಸಾರಿಗೆ ನೌಕರರು ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ನಿಗಮದ ಬೆರಳೆಣಿಕೆಯಷ್ಟು ನೌಕರರು ಮಾತ್ರ ದಿನದಿಂದ ದಿನಕ್ಕೆ ಹಂತ ಹಂತವಾಗಿ ಕೆಲಸಕ್ಕೆ ಹಾಜರಾಗುತ್ತಿದ್ದಾರೆ.
ಈ ಮಧ್ಯೆ ದಾವಣಗೆರೆ ಕೆಎಸ್ಆರ್ಟಿಸಿ ವಿಭಾಗೀಯ ಅಧಿಕಾರಿಗಳು ತಮ್ಮ ನೌಕರರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಚಾಲಕರು ಮತ್ತು ನಿರ್ವಾಹಕರ ವಿಳಾಸ ಪಡೆದು ಅವರ ಮನೆಗಳಿಗೆ ತೆರಳುತ್ತಿರುವ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗುವಂತೆ ಮನವೊಲಿಸಲು ಪ್ರಯತ್ನಿಸಿದ್ದಾರೆ.
ಅದಕ್ಕೂ ಒಪ್ಪದಿದ್ದಲ್ಲಿ ಒತ್ತಾಯ ಪೂರ್ವಕವಾಗಿ ನೌಕರರನ್ನು ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡುತ್ತಿದ್ದಾರೆ ಎನ್ನಲಾಗಿದೆ. ಆದರೆ, ಅಧಿಕಾರಿಗಳು ಮನೆಗಳಿಗೆ ಬರುವ ಮಾಹಿತಿ ಪಡೆದಿರುವ ಸಿಬ್ಬಂದಿಗಳು ತಮ್ಮ ಮೇಲಾಧಿಕಾರಿಗಳು ಮನೆಗೆ ಬರುವ ಮೊದಲೇ ಮನೆಯಿಂದ ಹೊರಹೋಗುವ ಮೂಲಕ ಅಧಿಕಾರಿಗಳ ಕಣ್ತಪ್ಪಿಸಿ ಓಡಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಸದ್ಯ ಮನೆಗೆ ತೆರಳಿದರೂ ನೌಕರರು ಸಿಗದ ಕಾರಣ, ಅಧಿಕಾರಿಗಳು ಅವರು ಇರುವ ಸ್ಥಳದ ಬಗ್ಗೆ ಮಾಹಿತಿ ಪಡೆದು ಹುಡುಕಾಟದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ನೌಕರರು – ಸರ್ಕಾರದ ನಡುವಿನ ಈ ಜಟಾಪಟಿ ಯಾವ ಹಂತಕ್ಕೆ ತಲುಪುತ್ತದೋ ಕಾದು ನೋಡಬೇಕಿದೆ.
ನಾಲ್ಕು ಕೋಟಿ ನಷ್ಟ : ಕೆಎಸ್ಆರ್ಟಿಸಿ ಸಿಬ್ಬಂದಿಗಳು ಮುಷ್ಕರ ಪ್ರಾರಂಭ ಮಾಡಿದಾಗಿ ನಿಂದ ದಾವಣಗೆರೆ ಡಿಪೋ, ಹೊನ್ನಾಳಿ ಮತ್ತು ಹರಿಹರದ ಡಿಪೋಗಳಿಗೆ ಇದುವರೆಗೂ ಸುಮಾರು ನಾಲ್ಕು ಕೋಟಿ ರೂ.ಗಳಷ್ಟು ನಷ್ಟ ಉಂಟಾಗಿದೆ ಎಂದು ಕೆಎಸ್ಆರ್ಟಿಸಿ ಡಿಸಿ ಸಿದ್ದೇಶ್ ಹೆಬ್ಬಾಳ್ ತಿಳಿಸಿದರು.
ಸೋಮವಾರ ಸುಮಾರು 50ಕ್ಕೂ ಹೆಚ್ಚು ಬಸ್ಗಳು ಸಂಚಾರ ಮಾಡಿದ್ದು, 70 ಜನ ಸಿಬ್ಬಂದಿಗಳು ಕಾರ್ಯನಿರ್ವಹಿಸಿದ್ದಾರೆ. ಭಾನುವಾರ ಈ ಸಂಖ್ಯೆಯಲ್ಲಿ ವೃದ್ಧಿ ಕಂಡಿತ್ತು. ನಾಳೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿಗಳು ಬರುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಸೋಮವಾರ ಹುಬ್ಬಳ್ಳಿ, ಬೆಂಗಳೂರು, ರಾಣೇಬೆನ್ನೂರು, ಹೊಸಪೇಟೆ, ಶಿವಮೊಗ್ಗ, ಚಿತ್ರದುರ್ಗ, ಹರಪನಹಳ್ಳಿ, ಹರಿಹರಕ್ಕೆ ಬಸ್ಗಳು ತೆರಳಿದವು.
ಕೆಎಸ್ಆರ್ಟಿಸಿ ನೌಕರರು ತಮ್ಮ ಬೇಡಿಕೆ ಗಳ ಈಡೇರಿಗೆ ಒತ್ತಾಯಿಸಿ ಸೋಮವಾರ ಹಮ್ಮಿಕೊಂಡಿದ್ದ ಜೈಲು ಭರೋ ಚಳುವಳಿ, ಉಪ ವಾಸ ಸತ್ಯಾಗ್ರಹವನ್ನು ದಾವಣಗೆರೆ ಡಿಪೋದ ನೌಕರರು ಹಿಂಪಡೆದು ಕರ್ತವ್ಯಕ್ಕೆ ಹಾಜರಾಗುವ ಮೂಲಕ ತಮ್ಮ ಬಸ್ಸುಗಳನ್ನು ರಸ್ತೆಗೆ ಇಳಿಸಿದ್ದಾರೆ. ಸಾರಿಗೆ ನೌಕರರು ಜೈಲು ಭರೋ ಚಳುವಳಿ ಹಿಂಪಡೆದ ಹಿನ್ನೆಲೆಯಿಂದ ಸೋಮವಾರ ಅರ್ಧದಷ್ಟು ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದರು.
ಖಾಸಗಿ ಬಸ್ಸುಗಳಿಗೆ ಹತ್ತಿದ್ದ ಪ್ರಯಾಣಿಕರು ಕೆಎಸ್ಆರ್ಟಿಸಿ ಬಸ್ಸುಗಳನ್ನು ಕಂಡ ಕೂಡಲೇ ಅದರಿಂದ ಕೆಳಗಿಳಿದು ಅವುಗಳತ್ತ ಓಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಮಾಹಿತಿಯ ಪ್ರಕಾರ ಕೆಎಸ್ಆರ್ಟಿಸಿ ಡಿಪೋದ ಸುತ್ತಮುತ್ತ 144ನೇ
ಸೆಕ್ಷನ್ ಪ್ರಕಾರ ನಿಷೇದಾಜ್ಞೆ ಜಾರಿಗೊಳಿಸಿದ್ದ ಹಿನ್ನೆಲೆ ಯಲ್ಲಿ ಯಾವುದೇ ಸಿಬ್ಬಂದಿ ಜೈಲು ಭರೋ, ಉಪವಾಸ ಸತ್ಯಾಗ್ರಹ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿಲ್ಲ ಎನ್ನಲಾಗಿದೆ.