ಆರೋಗ್ಯ ಕೇಂದ್ರಗಳಿಗೆ ಆಕ್ಸಿಜನ್ ಕಾನ್ಸಂಟ್ರೇಟರ್‌ ಕೊಡುಗೆ

ದಾವಣಗೆರೆ, ಜು.8- ಇಲ್ಲಿನ ಚಿಗಟೇರಿ ಜಿಲ್ಲಾಸ್ಪತ್ರೆ ಸೇರಿದಂತೆ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿರುವ ಆರೋಗ್ಯ ಕೇಂದ್ರಗಳಿಗೆ ಭಾಗರಿ ಫೌಂಡೇಷನ್, ಅತ್ಯಾತಿ ಟೆಕ್ನಾಲಜಿ ಪ್ರೈ. ಲಿಮಿಟೆಡ್, ರೂಟ್ಸ್ ರಿಫಾರ್ಮ್ಸ್ ಇನಿಶಿಯೇಟಿವ್ ಪ್ರೈ. ಲಿಮಿಟೆಡ್ ಇವುಗಳು ಜಂಟಿಯಾಗಿ 48 ಆಕ್ಸಿಜನ್ ಕಾನ್ಸಂಟ್ರೇಟರ್‍ಗಳನ್ನು ಕೊಡುಗೆಯಾಗಿ ನೀಡುವ ಮುಖೇನ ಸಮಾಜಮುಖಿ ಕಾಳಜಿ ಮೆರೆಯಲಾಯಿತು.

ಸಿ.ಜಿ. ಆಸ್ಪತ್ರೆಯ ಆವರಣದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸಮ್ಮುಖದಲ್ಲಿ ಸಂಸ್ಥೆಗಳ ಮುಖ್ಯಸ್ಥರು ಕಾನ್ಸಂಟ್ರೇಟರ್‍ಗಳನ್ನು ಇಂದು ಹಸ್ತಾಂತರ ಮಾಡಲಾಯಿತು. 

ಈ ವೇಳೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಕೊರೊನಾ ಸಂಕಷ್ಟದ ಸಮಯದಲ್ಲಿ ಸೋಂಕಿತರಿಗೆ ಆಮ್ಲಜನಕದ ಅವಶ್ಯಕತೆ ತುರ್ತಾಗಿರಲಿದ್ದು, ಅವಶ್ಯಕತೆಯಿರುವ ರೋಗಿಗಳಿಗೆ ಆಕ್ಸಿಜನ್ ಸಂಗ್ರಹಿಸಿ ನೀಡಲು ಕಾನ್ಸಂಟ್ರೇಟರ್‌ಗಳು ಉಪಯುಕ್ತವಾಗಲಿವೆ ಎಂದು ಸಂಸ್ಥೆಯ ಸೇವಾ ಕಾರ್ಯವನ್ನು ಶ್ಲ್ಯಾಘಿಸಿದರು.

ಇಂತಹ ಅವಶ್ಯಕ ವೈದ್ಯಕೀಯ ಪರಿಕರಗಳನ್ನು ಈ ಸಂಸ್ಥೆಗಳು ಸರ್ಕಾರಿ ಆಸ್ಪತ್ರೆಗಳಿಗೆ ಕೊಡುವ ಮೂಲಕ ಅವುಗಳ ಸಾಮಾಜಿಕ ಜವಾಬ್ದಾರಿಯನ್ನು ಎತ್ತಿ ತೋರಿಸಿದೆ. ಇನ್ನೂ ಸಂಘ, ಸಂಸ್ಥೆಗಳು ಹೀಗೆ ಜನಾವಶ್ಯಕ‌ ಪರಿಕರಗಳನ್ನು ನೀಡಿದಲ್ಲಿ ಮೂರನೆ ಅಲೆಯನ್ನು ಮತ್ತಷ್ಟು ಪ್ರಬಲವಾಗಿ ಎದುರಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ರೂಟ್ಸ್ ರಿಫಾರ್ಮ್ಸ್ ಇನಿಶಿಯೇಟಿವ್ ಸಂಸ್ಥಾಪಕರಾದ ಅರುಣಾ ಸಂಪಿಗೆ ಕಂದಗಲ್ಲು ಮಾತನಾಡಿ, ಗ್ರಾಮೀಣ ಭಾಗದ ಮಹಿಳೆಯರನ್ನು ಸಾಮಾಜಿಕ ಹಾಗೂ ಆರ್ಥಿಕವಾಗಿ ಸಬಲೀಕರಣಗೊಳಿಸುವುದು, ಮಹಿಳೆಯರಲ್ಲಿ ಆರ್ಥಿಕ ಸಾಕ್ಷರತೆಯ ಅರಿವು ಮೂಡಿಸುವ ಕಾರ್ಯ ಸೇರಿದಂತೆ, ನಮ್ಮ ಸಂಸ್ಥೆಯಿಂದ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದೇವೆ. ಸಂಸ್ಥೆಯ ಅಭಿಲಾಷೆಯಂತೆ ಸಿ.ಜಿ. ಜಿಲ್ಲಾಸ್ಪತ್ರೆಗೆ ಎಂಟು, ಉಳಿದ ಐದು ತಾಲ್ಲೂಕುಗಳಲ್ಲಿನ ಆರೋಗ್ಯ ಕೇಂದ್ರ ಗಳಿಗೂ ತಲಾ 8 ಆಕ್ಸಿಜನ್ ಕಾನ್ಸಂಟ್ರೇಟರ್‍ಗಳನ್ನು ನೀಡಲಾಗಿದೆ ಎಂದು ತಿಳಿಸಿದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಸಂಸ್ಥೆಯ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಡಿಹೆಚ್‌ಒ ಡಾ. ಎಲ್. ನಾಗರಾಜ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ, ರೂಟ್ಸ್ ರಿಫಾರ್ಮ್ಸ್ ಇನಿಶಿಯೇಟಿವ್‍ನ ವಿಭಾಗೀಯ ವ್ಯವಸ್ಥಾಪಕ ಸುರೇಶ್ ನೆರ್ತಿ, ಕಂದಗಲ್ಲು ಗ್ರಾಮ ಪಂಚಾಯ್ತಿ ಸದಸ್ಯ ರಾಜೇಶ್ ಗೌಡ್ರು ಸೇರಿದಂತೆ, ಇತರರು ಇದ್ದರು. 

error: Content is protected !!