ಮಲೇಬೆನ್ನೂರು, ಜು.7- ಹರಿಹರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವಂತೆ ಒತ್ತಾಯಿಸಿ, ಮಲೇಬೆನ್ನೂರಿನಲ್ಲೂ ಇದೇ ದಿನಾಂಕ 11ರ ಭಾನುವಾರ ಬೆಳಿಗ್ಗೆ 10 ಕ್ಕೆ ಸಹಿ ಸಂಗ್ರಹ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಪಿಎಂಸಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಅಬೀದ್ ಅಲಿ, ಸಮಾಜ ಸೇವಕ ನಂದಿಗಾವಿ ಶ್ರೀನಿವಾಸ್ ತಿಳಿಸಿದ್ದಾರೆ.
ಹರಿಹರ ನಗರದಲ್ಲಿ ಈಗಾಗಲೇ ನಡೆಯುತ್ತಿರುವ ಸಹಿ ಸಂಗ್ರಹ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಹಿ ಮಾಡಿದ ನಂತರ ಅವರು ಈ ವಿಷಯ ತಿಳಿಸಿದರು. ತಾಲ್ಲೂಕಿನ ಎಲ್ಲಾ ಹಳ್ಳಿಗಳಲ್ಲಿ ಸಂಚಾರಿ ವಾಹನದ ಮೂಲಕ ಸಹಿ ಸಂಗ್ರಹ ಮಾಡುವ ಉದ್ದೇಶ ಇದೆ ಎಂದು ನಂದಿಗಾವಿ ಶ್ರೀನಿವಾಸ್ ಹೇಳಿದರು. ಹರಿಹರ ತಾಲ್ಲೂಕು ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಕುಂಬಳೂರು ವಾಸು, ಪತ್ರಕರ್ತ ಜಿಗಳಿ ಪ್ರಕಾಶ್, ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ. ಉಮ್ಮಣ್ಣ ಹಾಗು ಇನ್ನಿತರರು ಹಾಜರಿದ್ದರು.