ಕೋವಿಡ್ ನಿರ್ವಹಣೆಯಲ್ಲಿ ಬಿಜೆಪಿ ವಿಫಲ

ಜಿಲ್ಲಾ ಕಾಂಗ್ರೆಸ್ ನ ಸೈಕಲ್ ಜಾಥಾದಲ್ಲಿ ಮಾಜಿ ಕೇಂದ್ರ ಸಚಿವ ಮುನಿಯಪ್ಪ

ದಾವಣಗೆರೆ, ಜು.7- ಕೊವೀಡ್ ನಿರ್ವಹಣೆ ಯನ್ನು ನಿಭಾಯಿಸುವುದು ಸೇರಿದಂತೆ ದೇಶದಲ್ಲಿ ಬಿಜೆಪಿ ಸರ್ಕಾರ ಎಲ್ಲಾ ವಿಷಯಗಳಲ್ಲೂ ವಿಫಲ ವಾಗಿದೆ ಎಂದು ಮಾಜಿ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ ಕಿಡಿಕಾರಿದರು.

ಇಂಧನ, ಅಗತ್ಯ ವಸ್ತುಗಳ ಬೆಲೆಗಳನ್ನು ಏರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ನಿಂದ ಸ್ಥಳೀಯ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಬಳಿ ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಇಂದು ಹಮ್ಮಿಕೊಂಡಿದ್ದ ಬೈಸಿಸೈಕಲ್ ಜಾಥಾಕ್ಕೆ ಸೈಕಲ್ ಚಲಾಯಿಸುವ ಮುಖೇನ ಚಾಲನೆ ನೀಡಿ ಅವರು ಮಾತನಾಡಿದರು.

ಕೇಂದ್ರವು ಪ್ರತಿ ದಿನ ಇಂಧನಗಳ ಬೆಲೆ ಏರಿಸುವ ಮೂಲಕ ಜನಸಾಮಾನ್ಯರ ಬದುಕನ್ನು ಸಂಕಷ್ಟಕ್ಕೆ ನೂಕಿದೆ. ದೇಶದ ಜನತೆ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳ ವಿರುದ್ದ ಜಾಥಾಗಳ ಮೂಲಕ ಜನರಿಗೆ ತಿಳಿಸಲಾಗುತ್ತಿದೆ ಎಂದರು.

ಕೊರೊನಾದಂತಹ ಸಂಕಷ್ಟದ ಇಂದಿನ ದಿನಮಾನಗಳಲ್ಲಿ ರೈತ ಉತ್ತಿ, ಬಿತ್ತಿ ಬೆಳೆಯಬೇಕಾದರೆ ಟ್ರ್ಯಾಕ್ಟರ್, ಪವರ್ ಟ್ರಿಲ್ಲರ್ ಸೇರಿದಂತೆ ಕೃಷಿ ಪರಿಕರಗಳು ಅಗತ್ಯವಾಗಿ ಬೇಕಾಗಿವೆ. ಸರ್ಕಾರ ಅವುಗಳ ಬೆಲೆಯನ್ನು ದುಪ್ಪಟ್ಟು ಮಾಡಿದೆ. ಇದಲ್ಲದೇ ಕೃಷಿ ಪರಿಕರಗಳಿಗೆ ಬೇಕಾಗುವ ಇಂಧನ ಬೆಲೆ ಏರಿಕೆ ಮಾಡಿರುವ ಕಾರಣ ಆರ್ಥಿಕ ನಷ್ಟ ಅನುಭವಿಸಿರುವ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ದೂರಿದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕರಾಳ ಕೃಷಿ ಕಾಯ್ದೆಯಿಂದ ರೈತರು ನೆಮ್ಮದಿ ಕಳೆದುಕೊಂಡು, ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ತೈಲ ಬೆಲೆ ಏರಿಕೆಯಿಂದಾಗಿ ದಿನಸಿ ಬೆಲೆ ಹೆಚ್ಚಳವಾಗಿ ಬಡವರು, ಕೂಲಿ ಕಾರ್ಮಿಕರು ಹಾಗೂ ಜನಸಾಮಾನ್ಯರು ಬದುಕುವುದು ಕಷ್ಟವಾಗಿದೆ. ದಿನಸಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ತುತ್ತು ಅನ್ನಕ್ಕಾಗಿ ಪರದಾಡುತ್ತಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇತ್ತ ತಿರುಗಿ ನೋಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೋವಿಡ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಲಾಕ್‍ಡೌನ್ ಮಾಡಿದ ಪರಿಣಾಮ ಕಾರ್ಖಾನೆಗಳು ಮುಚ್ಚಿ ಕಾರ್ಮಿಕರು ಬೀದಿ ಪಾಲಾಗಿದ್ದಾರೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಪ್ರಧಾನಿ ಮೋದಿಯವರು ಹೇಳಿದ್ದರು. 7 ವರ್ಷದಲ್ಲಿ 14 ಉದ್ಯೋಗ ಸೃಷ್ಟಿ ಮಾಡಬೇಕಿತ್ತು. ಆದರೆ ಪ್ರಧಾನಿ ಮೋದಿಯವರು ಆ ಕೆಲಸ ಮಾಡಲಿಲ್ಲ. ಇದರಿಂದಾಗಿ ಉನ್ನತ ಶಿಕ್ಷಣ ಪಡೆದ ವಿದ್ಯಾವಂತ ಯುವಕರು ಇಂದು ನಿರುದ್ಯೋಗಿಗಳಾಗಿ ಬೀದಿಗಳಲ್ಲಿ ಪದವಿ ಸರ್ಟಿಫಿಕೆಟ್ ಹಿಡಿದುಕೊಂಡು ಭೀಕ್ಷೆ ಬೇಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಾಮರಾಜನಗರದಲ್ಲಿ ಆಮ್ಲಜನಕ ಕೊರತೆಯಿಂದ ಕೇವಲ ಮೂರು ಜನ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದರು. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭೇಟಿ ನೀಡಿದಾಗ ಆಸ್ಪತ್ರೆಯಲ್ಲಿ 36 ಜನ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಈ ರೀತಿ ಎಲ್ಲಾ ವಿಷಯಗಳಲ್ಲೂ ಸರ್ಕಾರ ತಪ್ಪು ಮಾಹಿತಿ ಕೊಡುತ್ತಿದೆ. ಆ ಕಾರಣಕ್ಕಾಗಿ ಜು.30ರೊಳಗೆ ನಮ್ಮ ಕಾರ್ಯಕರ್ತರು ಮನೆ ಮನೆಗೆ ಹೋಗಿ ಕೋವಿಡ್ ಸಂದರ್ಭದಲ್ಲಿ ಅವರ ಪರಿಸ್ಥಿತಿ ಹೇಗಿತ್ತು, ಸರ್ಕಾರ ಯಾವ ರೀತಿ ಸ್ಪಂದಿಸಿತು ಎಂಬ ಬಗ್ಗೆ ಮಾಹಿತಿ ಪಡೆದು ಕೆಪಿಸಿಸಿಗೆ ಕಳುಹಿಸುತ್ತಾರೆ. ಅದನ್ನು ಕೆಪಿಸಿಸಿ ರಾಜ್ಯ ಸರ್ಕಾರದ ಗಮನಕ್ಕೆ ತರಲಿದೆ ಎಂದು ಮುನಿಯಪ್ಪ ತಿಳಿಸಿದರು.

ಮಾಜಿ ಸಚಿವ  ಶಾಮನೂರು ಮಲ್ಲಿಕಾರ್ಜುನ್‌ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದಾದ ಮೇಲೆ ಸಾಕಷ್ಟು ದುರಂತಗಳಾಗಿವೆ. ತೈಲ ಬೆಲೆ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗಿದೆ. ಇದಕ್ಕೆ ಬಿಜೆಪಿಯ ಜನ ವಿರೋಧಿ ನೀತಿಯೇ ಕಾರಣ. ಬೆಲೆಯನ್ನು ಹತೋಟಿಯಲ್ಲಿಡಲು ಕಾಂಗ್ರೆಸ್‌ಗೆ ಮಾತ್ರ ಸಾಧ್ಯವಿದ್ದು, ಈ ಪಕ್ಷದ ಅಗತ್ಯವಿದೆ. ಕಾಂಗ್ರೆಸ್ ಬಡವರಿಗಾಗಿ ಹಲವು ಯೋಜನೆಗಳನ್ನು ತಂದಿದೆ ಎಂದು ಹೇಳಿದರು.

ಕಾಂಗ್ರೆಸ್‍ನಲ್ಲಿ ಒಗ್ಗಟ್ಟು ಇದೆ. ಅದನ್ನು ಕಾಪಾಡಿಕೊಂಡು ಕೊರೊನಾ, ಬ್ಲ್ಯಾಕ್ ಫಂಗಸ್‌ನಿಂದ ಸಂಕಷ್ಟಕ್ಕೆ ತುತ್ತಾದವರಿಗೆ ಸ್ಪಂದಿಸಿ ಜನರ ಪ್ರಾಣ ಉಳಿಸುವ ಜನಪರ ಕೆಲಸವನ್ನು ಪಕ್ಷದ ನಾವೆಲ್ಲರೂ ಒಟ್ಟಾಗಿ ಮಾಡೋಣ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ, ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಅನಿತಾಬಾಯಿ ಮಾಲತೇಶ್ ಜಾಧವ್, ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್, ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಪಾಲಿಕೆ ಸದಸ್ಯರಾದ ಚಮನ್‍ಸಾಬ್, ಅಬ್ದುಲ್ ಲತೀಫ್, ಗಡಿಗುಡಾಳ್ ಮಂಜುನಾಥ್, ವಿನಾಯಕ ಪೈಲ್ವಾನ್, ಜೆ.ಡಿ. ಪ್ರಕಾಶ್, ಸುಧಾ ಇಟ್ಟಿಗುಡಿ ಮಂಜುನಾಥ್, ಮುಖಂಡರುಗಳಾದ ಮಾಲತೇಶ್ ರಾವ್ ಜಾಧವ್, ಅಯೂಬ್ ಪೈಲ್ವಾನ್, ಸೀಮೆಎಣ್ಣೆ ಮಲ್ಲೇಶ್, ಗುರಪ್ಪ ನಾಯ್ಡು, ಸುಂದರೇಶ್, ಅಮೃತೇಶ್, ಶುಭಮಂಗಳ ಸೇರಿದಂತೆ ಇತರರು ಇದ್ದರು.

error: Content is protected !!