ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ
ಹರಿಹರ, ಜು.8- ನಗರದಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಮೊದಲ ಹಂತವಾಗಿ ಸಹಿ ಸಂಗ್ರಹ ಅಭಿಯಾನದ ಹೋರಾಟ ಮಾಡುತ್ತಿರುವುದಕ್ಕೆ ಬಿಜೆಪಿಯಿಂದ ಬೆಂಬಲ ನೀಡುವುದರೊಂದಿಗೆ ಸಂಪೂರ್ಣ ಸಹಕಾರ ಇರುತ್ತದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ತಿಳಿಸಿದ್ದಾರೆ.
ಇಲ್ಲಿನ ಗಾಂಧಿ ವೃತ್ತದಲ್ಲಿ ನಗರದಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭ ಮಾಡುವಂತೆ ಹಮ್ಮಿಕೊಂಡಿರುವ ಸಹಿ ಸಂಗ್ರಹ ಅಭಿಯಾನದಲ್ಲಿ ಅವರು ಪಾಲ್ಗೊಂಡು ಮಾಧ್ಯಮದವರೊಂದಿಗೆ ಮಾತನಾಡಿದರು.
ಸಹಸ್ರಾರು ಜನತೆಗೆ ಅನ್ನವನ್ನು ನೀಡುತ್ತಿದ್ದ ಮೈಸೂರು ಕಿರ್ಲೋಸ್ಕರ್ ಕಂಪನಿಯು ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದ್ದರಿಂದ ಇಲ್ಲಿನ ಜನತೆ ಆರ್ಥಿಕವಾಗಿ ಸಾಕಷ್ಟು ತೊಂದರೆ ಅನುಭವಿಸಿದರು. ಹರಿಹರ ನಗರವು ಭೌಗೋಳಿಕವಾಗಿ ಎಲ್ಲಾ ರೀತಿಯಲ್ಲಿ ಮೆಡಿಕಲ್ ಕಾಲೇಜು ಪ್ರಾರಂಭಿಸಲು ಸೂಕ್ತವಾಗಿದೆ. ನಾಳೆ ದಿನಾಂಕ 9 ರಂದು ದಾವಣಗೆರೆಗೆ ವೈದ್ಯಕೀಯ ಸಚಿವ ಸುಧಾಕರ್ ಆಗಮಿಸಲಿದ್ದು, ಅವರ ಗಮನಕ್ಕೆ ತರಲಾಗುವುದು ಎಂದು ಅವರು ಹೇಳಿದರು.
ಹರಿಹರ ತಾಲ್ಲೂಕಿನ ಜಿ.ಪಂ. ಮತ್ತು ತಾ.ಪಂ. ಸದಸ್ಯರ ಚುನಾವಣೆ ಮೀಸಲಾತಿ ವಿಚಾರದಲ್ಲಿ ರಾಜ್ಯ ಚುನಾವಣಾ ಆಯೋಗ ಎಲ್ಲಾ ವರ್ಗದವರ ಮಾನದಂಡಗಳನ್ನು ನೋಡಿ ಮೀಸಲಾತಿ ಪಟ್ಟಿಯನ್ನು ಸಿದ್ಧತೆ ಮಾಡಿರುತ್ತದೆ. ಶಾಸಕ ಎಸ್. ರಾಮಪ್ಪ ಪಟ್ಟಿಯಲ್ಲಿ ದೋಷವಿದೆ ಎಂದು ಹೇಳಿದ್ದಾರೆ. ಅವರು ಅದನ್ನು ಪಕ್ಷದ ವತಿಯಿಂದ ಸಿದ್ಧತೆ ಮಾಡಿದ್ದಾರೆ ಎಂದು ಭಾವಿಸಿರಬಹುದು. ಯಾವ ಇಲಾಖೆಯಲ್ಲಿ ಪಟ್ಟಿ ಸಿದ್ದತೆ ಮಾಡುತ್ತಾರೆ ಎನ್ನುವುದನ್ನು ಮೊದಲು ಅರಿತುಕೊಂಡು ಮಾತನಾಡಲಿ ಎಂದು ವೀರೇಶ್ ಅವರು ಹೇಳಿದರು.
ಈ ಸಂದರ್ಭದಲ್ಲಿ ಸಹಿ ಸಂಗ್ರಹ ಅಭಿಯಾನದ ಎನ್.ಹೆಚ್. ಶ್ರೀನಿವಾಸ್ ನಂದಿಗಾವಿ, ಮಾಜಿ ದೂಡಾ ಸದಸ್ಯ ಹೆಚ್. ನಿಜಗುಣ, ಕಾರ್ಮಿಕ ಮುಖಂಡ ಹೆಚ್. ಕೆ. ಕೊಟ್ರಪ್ಪ, ತಪೋವನ ಮಾಲೀಕ ಶಶಿಕುಮಾರ್, ನಗರಸಭೆ ಸದಸ್ಯ ವಿಜಯಕುಮಾರ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್, ಉಪಾಧ್ಯಕ್ಷ ತುಳಜಪ್ಪ ಭೂತೆ, ರಾಘವೇಂದ್ರ, ರೂಪಾ ಕಾಟ್ವೆ, ಪ್ರಮೀಳಾ ನಲ್ಲೂರು, ಸುಧಾ ಸಾಳಂಕಿ, ರಶ್ಮಿ, ಶಾಂತಾಬಾಯಿ, ಕೆ.ಜಿ. ಕೃಷ್ಣ, ಗಿರೀಶ್, ಶ್ರೀಧರ್, ಆದಿತ್ಯ, ಬೆಣ್ಣೆ ವಿಜಯಕುಮಾರ್, ರುದ್ರೇಗೌಡ, ನಾಗೇಂದ್ರಪ್ಪ ಇನ್ನಿತರರಿದ್ದರು.