ದಾವಣಗೆರೆ, ಫೆ.15- ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟ ತಡೆಯುವಂತೆ ಹೈಕೋರ್ಟ್ ಆದೇಶ ನೀಡಿದ್ದು, ಅದನ್ನು ಪಾಲಿಸುವಂತೆ ಒತ್ತಾಯಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿಗಳ ಕಚೇರಿಗೆ ಸಂಘಟನೆಯ ಕಾರ್ಯಕರ್ತೆ ಪಿ.ಎಸ್. ಸುಧಾ ಅವರ ನೇತೃತ್ವದಲ್ಲಿ ತೆರಳಿದ ಕಾರ್ಯಕರ್ತೆಯರು, ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಅಕ್ರಮ ಮದ್ಯಕ್ಕೆ ಅನೇಕರು ಬಲಿಯಾಗಿದ್ದಾರೆ. ಮತ್ತೆ ಕೆಲವರು ದಿನದ 24 ಗಂಟೆಯೂ, ವರ್ಷದ 365 ದಿನವೂ ಮದ್ಯ ಸಿಗುವ ಕಾರಣಕ್ಕೆ ಅಕ್ರಮ ಮದ್ಯದ ದಾಸರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟ ತಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ರಾಜ್ಯಾದ್ಯಂತ ಅಕ್ರಮ ಮದ್ಯ ಮಾರಾಟ ಜೋರಾಗಿ ನಡೆಯುತ್ತಿದೆ. ಅಂಗಡಿ, ಕಿರಾಣಿ ಅಂಗಡಿ, ಸಣ್ಣ ಪುಟ್ಟ ಗೂಡಂಗಡಿ, ಮನೆಗಳಲ್ಲಿಯೂ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ದಿನದ 24 ಗಂಟೆಯೂ ಅಕ್ರಮ ಮದ್ಯ ಪೂರೈಕೆಯಾಗುತ್ತಿದ್ದು, ಅಸಂಖ್ಯಾತ ಕುಟುಂಬಗಳ ಸದಸ್ಯರು ಇದರಿಂದಾಗಿ ನೆಮ್ಮದಿಯನ್ನೇ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ರಾಜ್ಯದ ಹಳ್ಳಿ ಹಳ್ಳಿಗಳ ಗಲ್ಲಿ ಗಲ್ಲಿಗಳಲ್ಲಿ ಎಗ್ಗಿಲ್ಲದೇ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಈಗಾಗಲೇ ಸಾಕಷ್ಟು ಸಲ ಸಂಬಂಧಿಸಿದ ಅಬಕಾರಿ, ಪೊಲೀಸ್ ಇಲಾಖೆ ಅಧಿಕಾರಿಗಳ, ಆಯಾ ಜಿಲ್ಲಾಡಳಿತಗಳ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಘಟನೆಯ ಮಹಿಳೆಯರ ಹೋರಾಟವನ್ನು ಗಮನಿಸಿದ ಹೈಕೋರ್ಟ್, ತಕ್ಷಣವೇ ಅಕ್ರಮ ಮದ್ಯ ಮಾರಾಟ ನಿಲ್ಲಿಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದ್ದರೂ ಸಹ ಇಂದಿಗೂ ಹಳ್ಳಿ ಹಳ್ಳಿಗಳ ಗಲ್ಲಿ ಗಲ್ಲಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವುದು ಮಾತ್ರ ನಿಂತಿಲ್ಲ. ನ್ಯಾಯಾಲಯದ ಆದೇಶಕ್ಕೆ ಸರ್ಕಾರವಾಗಲೀ, ಅಧಿಕಾರಿ ವರ್ಗವಾಗಲೀ ಕಿವಿಗೊಡುತ್ತಿಲ್ಲ ಎಂದು ದೂರಿದರು.
ಹೈಕೋರ್ಟ್ ಆದೇಶವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಅಕ್ರಮ ಮದ್ಯ ಮಾರಾಟವನ್ನು ಇನ್ನು 15 ದಿನಗಳ ಒಳಗಾಗಿ ತಡೆಯಬೇಕು. ಅಕ್ರಮ ಮದ್ಯ ಮಾರಾಟಕ್ಕೆ ಸಂಪೂರ್ಣ ಕಡಿವಾಣ ಹಾಕದಿದ್ದರೆ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ತೀವ್ರ ಸ್ವರೂಪದ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ವೈ.ಆರ್. ಅಣ್ಣಪ್ಪ ಕಿತ್ತೂರು, ಸುಶೀಲಮ್ಮ, ನಾಗಮ್ಮ, ಶಾಂತಮ್ಮ, ನಿಂಗಪ್ಪ, ಶಾಂತಮ್ಮ, ಶಿಲ್ಪ ಕುರುಡಿ, ರಮೇಶ್, ನಾಗರತ್ನಮ್ಮ ಸೇರಿದಂತೆ ಇತರರು ಇದ್ದರು.