ಭತ್ತ ಬಿಟ್ಟು ಅಡಿಕೆಯತ್ತ ವಾಲಿದ ರೈತರು

ದಾವಣಗೆರೆ ತಾಲ್ಲೂಕಿನಲ್ಲಿ 2 ಸಾವಿರ ಹೆಕ್ಟೇರ್ ಭತ್ತದ ಪ್ರದೇಶದಲ್ಲಿ ಅಡಿಕೆ

ತಾ.ಪಂ. ಕೆಡಿಪಿ ಸಭೆಯಲ್ಲಿ ಸಹಾಯಕ ಕೃಷಿ ನಿರ್ದೇಶಕ ರೇವಣಸಿದ್ದನಗೌಡ

ದಾವಣಗೆರೆ, ಫೆ.15- ಈ ಬಾರಿ  ಅಡಿಕೆ ಬೆಳೆಯಲು ಹೆಚ್ಚಿನ ರೈತರು ಉತ್ಸುಕರಾಗಿರುವು ದರಿಂದ ದಾವಣಗೆರೆ ತಾಲ್ಲೂಕೊಂದರಲ್ಲಿಯೇ ಸುಮಾರು 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ ಕಡಿಮೆಯಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ರೇವಣಸಿದ್ದನಗೌಡ ತಿಳಿಸಿದರು.

ತಾಲ್ಲೂಕು ಪಂಚಾಯ್ತಿ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕಳೆದ ಒಂದೆರಡು ವರ್ಷಗಳಿಂದ ಭತ್ತದ ದರ ಕಡಿಮೆಯಾಗಿರುವುದರಿಂದ ದಾವಣಗೆರೆ ಕಸಬಾ, ಬೇತೂರು ಭಾಗಗಳಲ್ಲಿ  ನೀರು ಸಮರ್ಪಕವಾಗಿ ಸಿಗುವ ಪ್ರದೇಶಗಳಲ್ಲಿ ರೈತರು ಅಡಿಕೆ ಬೆಳೆಯಲು ಮುಂದಾಗಿದ್ದಾರೆ.  ಆದರೆ ಮುಂದಿನ ದಿನಗಳಲ್ಲಿ ಅಡಿಕೆ ದರ ಇಳಿಕೆಯಾದರೆ ರೈತರು ಆರ್ಥಿಕ ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂದೂ ಸಹ ಎಚ್ಚರಿಸಿದರು.

ಅನೇಕ ಕಡೆ ಕಪ್ಪು ಭೂಮಿಯಲ್ಲಿ ಅಡಿಕೆ ಬೆಳೆಯಲು ರೈತರು ಮುಂದಾಗಿದ್ದಾರೆ. ಆದರೆ ಸೂಕ್ತ ತಜ್ಞರ ಸಲಹೆ ಪಡೆದು ವೈಜ್ಞಾನಿಕವಾಗಿ ಅಡಿಕೆ ನಿರ್ವಹಣೆ ಮಾಡಬೇಕು. ಇಲ್ಲದಿದ್ದರೆ ಇಳುವರಿ ಕಡಿಮೆಯಾಗಿ ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ಅಡಿಕೆ ಬೆಳೆಯುವ ರೈತರಿಗೆ ವಿಶೇಷ ತರಬೇತಿ ಅಗತ್ಯವಿದೆ ಎಂದು ಅಭಿಪ್ರಾಯಿಸಿದರು.

ಮೆಕ್ಕೆಜೋಳದ ಜೊತೆಗೆ ರೈತರು ಶೇ.50ರಷ್ಟು ಭಾಗದಲ್ಲಿ ರಾಗಿಯನ್ನೂ ಬೆಳೆಯಲು ಮುಂದಾಗಬೇಕು. ಸರ್ಕಾರ ಉತ್ತರ ಕರ್ನಾಟಕ ಭಾಗದಲ್ಲಿ ಪಡಿತರ ಜೊತೆ ರಾಗಿ ನೀಡುವುದಾಗಿ  ಹೇಳಿದೆ. ಇದರಿಂದ ಬೆಲೆ ಕಡಿಮೆಯಾಗದು. ಜೊತೆಗೆ ರಾಗಿಯ ಹುಲ್ಲನ್ನು ದನ-ಕರುಗಳ ಮೇವಿಗೂ ಬಳಕೆ ಮಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.

ಧರ್ಮಸ್ಥಳ ಸಂಸ್ಥೆ ಸಹಯೋಗದಲ್ಲಿ ಈ ಬಾರಿ ಶೇ.30ರಷ್ಟು ಯಾಂತ್ರೀಕೃತ ಭತ್ತದ ನಾಟಿ ಮಾಡಲಾಗಿದೆ. ಇಲಾಖೆಯಿಂದಲೂ ತರಬೇತಿ ನೀಡಲಾಗುತ್ತಿದೆ ಎಂದರು.

ಮುಂಗಾರು ಹಂಗಾಮಿನಲ್ಲಿ ಬೆಳೆದ ರಾಗಿಗೆ ಖರೀದಿ ಕೇಂದ್ರ ಆರಂಭಿಸಲಾಗಿದ್ದು 151 ರೈತರು 5295 ಕ್ವಿಂಟಾಲ್ ರಾಗಿ ಮಾರಾಟ ಮಾಡಲು ಹೆಸರು ನೋಂದಾಯಿಸಿಕೊಂಡಿದ್ದಾರೆ. 16690 ಕ್ವಿಂ.ಭತ್ತ ಮಾರಾಟ ಮಾಡಲು 240 ರೈತರು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದರು.

ಖರೀದಿ ಕೇಂದ್ರದಲ್ಲಿ ಹೆಸರು ನೋಂದಾಯಿಸಲು ಆಧಾರ್, ಪಹಣಿ ಹಾಗೂ ಬ್ಯಾಂಕ್ ಪಾಸ್ ಪುಸ್ತಕದ ಜೊತೆ ಫ್ರೂಟ್ ತಂತ್ರಾಂಶದಲ್ಲಿ ಹೆಸರು ನೋಂದಣಿಯಾಗಿರುವುದು ಕಡ್ಡಾಯವಾಗಿದೆ ಎಂದರು.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಾತನಾಡುತ್ತಾ, ಮೆಟ್ರಿಕ್ ಪೂರ್ವ ಹಾಗೂ  ಮೆಟ್ರಿಕ್ ನಂತರದ ಹಾಸ್ಟೆಲ್‌ಗಳು ಆರಂಭವಾಗಿವೆ. ಮೆಟ್ರಿಕ್ ನಂತರದ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಸರ್ಕಾರದ ಮಾರ್ಗಸೂಚಿ ಪ್ರಕಾರ ನೋಂದಣಿ ಮಾಡಿಕೊಳ್ಳಲಾಗುತ್ತಿದೆ ಎಂದರು. ವಿದ್ಯಾರ್ಥಿ ವೇತನ ನೀಡಲು ಅನುದಾನದ ಕೊರತೆ ಇದ್ದು, ಈ ತಿಂಗಳು ಸಿಗುವ ಸಾಧ್ಯತೆ ಇದೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಮಾತನಾಡಿ, ತಾಲ್ಲೂಕಿನಲ್ಲಿ 503 ಅಂಗನವಾಡಿ ಕೇಂದ್ರಗಳಿದ್ದು, ರೊಟೇಷನ್‌ ಆಧಾರದಲ್ಲಿ 5 ಮಕ್ಕಳಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ ಎಂದರು. ಉಪಾಧ್ಯಕ್ಷೆ ಮೀನಾ ಟಿ.ಶ್ರೀನಿವಾಸ್, ಅಂಗನವಾಡಿಗಳಲ್ಲಿ ಮಕ್ಕಳಿಗೆ ಬಿಸಿ ನೀರು ಕೊಡಲು ಕ್ರಮ ಕೈಗೊಳ್ಳುವಂತೆ ಹೇಳಿದರು.

35 ಅಪೌಷ್ಠಿಕ ಮಕ್ಕಳು : ತಾಲ್ಲೂಕಿನಲ್ಲಿ 35 ಅಪೌಷ್ಠಿಕತೆ ಇರುವ ಮಕ್ಕಳನ್ನು ಗುರುತಿಸಲಾಗಿದೆ.  ಪ್ರತಿ ಮಗುವಿನ  ಚಿಕಿತ್ಸೆಗೆ ಸರ್ಕಾರ  2 ಸಾವಿರ ಹಣ ನೀಡುತ್ತಿದೆ. ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡುವ ಜೊತೆಗೆ, ಪ್ರತಿ ಮೂರು ತಿಂಗಳಿಗೊಮ್ಮೆ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದರು.

ತಾಲ್ಲೂಕಿನಲ್ಲಿ ಶೇ.101ರಷ್ಟು ಪಲ್ಸ್ ಪೋಲಿಯೋ ಲಸಿಕೆ ನೀಡಿ ಗುರಿ ಸಾಧಿಸಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಹೇಳಿದರು. ಜನವರಿ 30 ರಿಂದ ಫೆಬ್ರವರಿ 30ರವರೆಗೆ ಆಶಾ  ಹಾಗೂ ಆರೋಗ್ಯ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಕುಷ್ಠರೋಗ ಗುಣಲಕ್ಷಣ ಇರುವವರನ್ನು ತಪಾಸಣೆ  ಮಾಡಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಅಪೌಷ್ಠಿಕತೆ ಇರುವ ಮಕ್ಕಳಿಗೆ ಜಿಲ್ಲಾಸ್ಪತ್ರೆಯಲ್ಲಿನ ಎನ್‌ಆರ್‌ಸಿ ಕೇಂದ್ರದಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ತಾಯಂದಿರಿಗೆ ಶೇಂಗಾ, ಬೆಲ್ಲ, ಕಡಲೆ ಮಿಶ್ರಣವುಳ್ಳ ದಾವಣಗೆರೆ ಮಿಕ್ಸ್ ಎಂಬ ಪ್ರೋಟೀನ್ ಯುಕ್ತ ಆಹಾರ ನೀಡಲಾಗುವುದು ಎಂದರು.

ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಮಾತನಾಡಿ, ಈ ಬಾರಿ ಎಪ್ರಿಲ್-ಮೇ ತಿಂಗಳ ಬೇಸಿಗೆ ರಜೆ ನೀಡದಂತೆ 9 ಹಾಗೂ 10ನೇ ತರಗತಿ ಮಕ್ಕಳ ಸಿಲೆಬಸ್ ಪೂರ್ಣಗೊಳಿಸಲು ಸರ್ಕಾರ ಸೂಚಿಸಿದೆ ಎಂದರು.

error: Content is protected !!