ಮಾಸ್ಕ್ ಹಾಕದವರಿಗೆ ಬೆಳಿಗ್ಗೆಯೇ ಶಾಕ್ !

ನಗರದಲ್ಲಿ ಬೆಳ್ಳಂ ಬೆಳಿಗ್ಗೆ ಡಿಸಿ-ಎಸ್ಪಿ ತಂಡದ ದಾಳಿ, ಮಾಸ್ಕ್ ಹಾಕದವರಿಗೆ ತರಾಟೆ, ದಂಡ ವಸೂಲಿ

ದಾವಣಗೆರೆ, ಏ. 18- ಇಂದು ಬೆಳ್ಳಂ ಬೆಳಿಗ್ಗೆ ಜನ ನಿಬಿಡ ಪ್ರದೇಶಗಳಾದ ತರಕಾರಿ ಮಾರುಕಟ್ಟೆ,  ಗಡಿಯಾರ ಕಂಬ, ಎಪಿಎಂಸಿ ಸೇರಿದಂತೆ ವಿವಿಧೆಡೆ ತೆರಳಿದ ಜಿಲ್ಲಾಧಿಕಾರಿ ಹಾಗೂ ಎಸ್ಪಿ ತಂಡವು ಮಾಸ್ಕ್ ಹಾಕದವರನ್ನು ತರಾಟೆಗೆ ತೆಗೆದುಕೊಂಡಿತು.

ಭಾನುವಾರವೂ ಆಗಿದ್ದರಿಂದ ಬೆಳಿಗ್ಗೆ ಮಾರುಕಟ್ಟೆ ಪ್ರದೇಶದಲ್ಲಿ ಜನ ಜಂಗುಳಿ ಹೆಚ್ಚಾಗಿತ್ತು. ಜಿಲ್ಲಾಧಿಕಾರಿಗಳ ದಿಢೀರ್ ದಾಳಿ ನಿರೀಕ್ಷಿಸದ ಜನತೆ ಅಧಿಕಾರಿಗಳ ದಂಡನ್ನು ಕಂಡು ಕೆಲಕಾಲ ದಂಗಾದರು.

ಮಾಸ್ಕ್ ಹಾಕದಿದ್ದವರಿಗೆ ಕ್ಲಾಸ್ ತೆಗೆದುಕೊಂಡ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಮಾಸ್ಕ್ ನೀಡಿ ದಂಡ ವಿಧಿಸಿದರು. ಎಸ್ಪಿ ಹನುಮಂತರಾಯ ಅವರೂ ಸಹ ಮಾಸ್ಕ್ ಧರಿಸುವಂತೆ ಹೇಳುತ್ತಿದ್ದರು. ಸಹನೆ ಕಳೆದುಕೊಂಡ ಎಸ್ಪಿ ತರಕಾರಿ ಮಾರುತ್ತಿದ್ದ ಒಬ್ಬರಿಗೆ ಕಪೋಳ ಮೋಕ್ಷ ಮಾಡಿದ ಘಟನೆಯೂ ನಡೆಯಿತು.

ಇತ್ತ ಅಧಿಕಾರಿಗಳು ದಂಡ ವಿಧಿಸುತ್ತಿದ್ದರೆ, ಅತ್ತ ಜನರು ಟವಲ್, ಸೀರೆಯ ಸೆರಗಿನಿಂದ ಮುಖ ಮುಚ್ಚಿಕೊಳ್ಳುತ್ತಿದ್ದರು. ಜೇಬಿನಲ್ಲಿ ಮಾಸ್ಕ್ ಇಟ್ಟುಕೊಂಡಿದ್ದವರು ಕೂಡಲೇ ತೆಗೆದು ಮುಖಕ್ಕೆ ಏರಿಸಿಕೊಳ್ಳುತ್ತಿದ್ದರು.

ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಈ ಹಿಂದೆ ಗ್ರೀನ್ ಜೋನ್‌ನಲ್ಲಿದ್ದ ದಾವಣಗೆರೆಯಲ್ಲಿ ಒಂದೆರಡು ಕೇಸ್ ಬಂದಾಗ ಜನತೆ  ಜಾಗರೂಕರಾಗಿ ಸಹಕಾರ ನೀಡುತ್ತಿದ್ದರು. ಆದರೆ ಇಂದು ಪ್ರತಿ ದಿನ ನೂರಕ್ಕೂ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗುತ್ತಿದ್ದರೂ ಭಯವೇ ಇಲ್ಲದೆ ಬೇಜವಾ ಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಅಸಮಾ ಧಾನ ವ್ಯಕ್ತಪಡಿಸಿದರು. ಜನರ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ. ನಿಯಮ ಉಲ್ಲಂಘನೆ ಮಾಡುವ ವರಿಗೆ ಕಾನೂನಾತ್ಮಕವಾದ ಕ್ರಮ ತೆಗೆದುಕೊಳ್ಳು ತ್ತೇವೆ. ಈಗ ಕೋವಿಡ್ ಕುರಿತು ಜನಸಾಮಾನ್ಯರು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಭಾರೀ ದಂಡ ತೆರಬೇ ಕಾಗುತ್ತದೆ ಎಂದು ಎಚ್ಚರಿಸಿದರು.

ನಿನ್ನೆಯ ವಿಡಿಯೋ ಕಾನ್ಫರೆನ್ಸ್ ನಲ್ಲಿ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದು ಅವರ ಸೂಚನೆಗಳನ್ನು ಕಾರ್ಯಗತಗೊಳಿಸಲಾಗುವುದು. ಈ ಹಿನ್ನೆಲೆಯಲ್ಲಿ ಇಂದು ಹೆಚ್ಚು ಜನಸಂದಣಿ ಇರುವ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹಾಗೂ ವಿವಿಧ ಸಮಾರಂಭಗಳಲ್ಲಿ ಎಷ್ಟು ಜನ ಸೇರಬೇಕು ಎಂಬ ಸೂಚನೆ ನೀಡಲಾಗಿದ್ದು ಎಲ್ಲರೂ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು. 

ಕರ್ತವ್ಯ ನಿರತ ವೈದ್ಯರುಗಳಿಗೆ ಒಂದು ವೇಳೆ ಪಾಸಿಟಿವ್ ಬಂದರೆ ಅಂತಹವರನ್ನು ಸರ್ಕಾರಿ ಗೆಸ್ಟ್ ಹೌಸ್‍ಗಳಲ್ಲಿ ಕ್ವಾರಂಟೈನ್ ಮಾಡಲು ಈಗಾಗಲೇ ಸರ್ಕಾರಿ ಗೆಸ್ಟ್ ಹೌಸ್‍ಗಳನ್ನು ನಮ್ಮ ಸುಪರ್ದಿಗೆ ತೆಗೆದುಕೊಳ್ಳಲಾಗಿದೆ. ಆಸ್ಪತ್ರೆಗಳಲ್ಲಿ ರೋಗಿಗಳನ್ನು ನೋಡಲು ಬರುವವರನ್ನು ನಿಯಂತ್ರಿಸಲು ಬ್ಯಾರಿಕೇಡ್ ಹಾಕಲಾಗಿದೆ. ಜಿಲ್ಲೆಯ ಆಸ್ಪತ್ರೆಗಳಲ್ಲಿ 1882 ಬೆಡ್‍ಗಳು ಸಿದ್ದವಿದ್ದು 159 ಬೆಡ್‍ಗಳು ಭರ್ತಿಯಾಗಿವೆ. ಹಿಂದಿನ ವರ್ಷ 933 ಹಾಸಿಗೆಗಳು ಸಾಕಾಗಿದ್ದವು. ಹಾಗಾಗಿ ಎಂತಹ ಪರಿಸ್ಥಿತಿ ಬಂದರೂ ನಿಭಾಯಿಸಲು ಜಿಲ್ಲಾಡಳಿತ ಸಿದ್ಧವಿದೆ ಎಂದರು.  

ಎಸ್ಪಿ ಹನುಮಂತರಾಯ ಮಾತನಾಡಿ, ಕೊರೊನಾ ಸೋಂಕು ತೀವ್ರಗೊಳ್ಳುತ್ತಿದ್ದರೂ ಜನರು ನಿರ್ಲಕ್ಷ್ಯಿಸುತ್ತಿದ್ದಾರೆ. ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಜನಸಂದಣಿ ಇರುವ ಸ್ಥಳಗಳಿಗೆ ತೆರಳಿ ಜಾಗೃತಿ ಮೂಡಿಸಿ ನಿಯಮ ಉಲ್ಲಂಘನೆ ಮಾಡುವವರಿಗೆ ಸ್ಥಳದಲ್ಲೇ ದಂಡ ವಿಧಿಸುತ್ತಿದ್ದೇವೆ. ಮದುವೆ ಸಮಾರಂಭ, ಕಲ್ಯಾಣ ಮಂಟಪ, ರಾಜಕೀಯ ಆಚರಣೆಗಳು ಸೇರಿದಂತೆ ಸಭೆ ಸಮಾರಂಭಗಳಲ್ಲಿ ಜನ ಸಂಖ್ಯೆ ಮಿತಿಗೊಳಿಸಿದ್ದೇವೆ. ಧಾರ್ಮಿಕ ಆಚರಣೆಗಳನ್ನು ನಿಷೇಧಿಸಿದ್ದೇವೆ. ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಹಾಗೂ ರೆಮ್‍ಡೆಸಿವಿರ್ ಸೂಜಿಮದ್ದನ್ನು ಕಾಳಸಂತೆಯಲ್ಲಿ ಮಾರುವುದು  ಕಂಡುಬಂದರೆ ಅಂತಹವರ ವಿರುದ್ಧ ಕಠಿಣ ಕ್ರಮ ತೆಗದುಕೊಳ್ಳಲಾಗುವುದು ಎಂದು ಎಚ್ಚರಿಸಿದರು. 

ಉಪ ವಿಭಾಗಾಧಿಕಾರಿ ಮಮತ ಹೊಸಗೌಡರ್, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ತಹಶೀಲ್ದಾರ್ ಗಿರೀಶ್ ಇದ್ದರು. 

error: Content is protected !!