ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಆಗ್ರಹಿಸಿ ಸಾರಿಗೆ ನೌಕರರಿಂದ ಎಸ್ಸೆಸ್‌ಗೆ ಮನವಿ

ದಾವಣಗೆರೆ, ಏ.16- 6ನೇ ವೇತನ ಆಯೋಗ ಜಾರಿ ವಿಚಾರವಾಗಿ ನೌಕರರ ಪರವಾಗಿ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರಿಗೆ ಮನವಿ ಮಾಡಿದರು.

ಎಸ್ಸೆಸ್ ಅವರ ನಿವಾಸಕ್ಕೆ ತೆರಳಿದ ನೌಕರರು, ಬೇಡಿಕೆಗಳುಳ್ಳ ಮನವಿ ಪತ್ರ ಸಲ್ಲಿಸಿದರು.

ಕಳೆದ ಡಿಸೆಂಬರ್ ತಿಂಗಳಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಿ ಸರ್ಕಾರಿ ನೌಕರರಿಗಿರುವ ಎಲ್ಲಾ ಸವಲತ್ತುಗಳನ್ನು ಸಾರಿಗೆ ನೌಕರರಿಗೂ ನೀಡುವಂತೆ ಒತ್ತಾಯಿಸಿ ನಡೆಸಿದ ಮುಷ್ಕರದ ಸಂದರ್ಭದಲ್ಲಿ ಫೆ. 13, 2020 ರಂದು ಸಂಧಾನ ಸಭೆಯಲ್ಲಿ ಸರ್ಕಾರಿ ನೌಕರಿ ಒಂದನ್ನು ಹೊರತು ಪಡಿಸಿ 6ನೇ ವೇತನ ಆಯೋಗ ಜಾರಿಗೊಳಿಸುವುದೂ ಸೇರಿದಂತೆ ಉಳಿದ 9 ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಲಿಖಿತ ಭರವಸೆ ನೀಡಿತ್ತು. ಆ ಪ್ರಕಾರವಾಗಿ ಸರ್ಕಾರ 3 ತಿಂಗಳ ಕಾಲಾವಕಾಶವನ್ನು ಕೇಳಿತ್ತು. ಆದರೆ ಕಾಲಾವಕಾಶದಲ್ಲಿ ಯಾವುದೇ ಬೇಡಿಕೆಗಳನ್ನು ಈಡೇರಿಸದೆ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಶಾಸಕ ಎಸ್ಸೆಸ್ ಬಳಿ ನೌಕರರು ಅಳಲಿಟ್ಟರು.

22 ದಿನಗಳ ಕಾಲಾವಕಾಶವನ್ನೂ ನೀಡಿದ್ದೆವು. ಅದ್ಯಾವುದನ್ನೂ ಲೆಕ್ಕಿಸದ ಸರ್ಕಾರದ ನಿರ್ಲಕ್ಷ ಧೋರಣೆ ಖಂಡಿಸಿ ಏ.7,2021 ರಿಂದ ಅನಿರ್ದಿಷ್ಟಾವಧಿ ಮುಷ್ಕರವನ್ನು ಕೈಗೊಂಡು ಆ ಮುಷ್ಕರವು ಯಶಸ್ವಿಯಾಗಿ 9 ದಿನಗಳನ್ನು ಪೂರೈಸಿ 10 ನೇ ದಿನಕ್ಕೆ ಕಾಲಿಟ್ಟಿದೆ. ಆದರೂ ಸರ್ಕಾರ ಸಾರಿಗೆ ನೌಕರರ ಜೊತೆ ಮಾತುಕತೆ ನಡೆಸಿ ಸೌಹಾರ್ದಯುತ 6ನೇ ವೇತನ ಆಯೋಗ ಜಾರಿ ಮಾಡಲು ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿಲ್ಲ. ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಲ್ಲಿ ತಾವು ಪ್ರಮುಖ ಪಾತ್ರ ವಹಿಸಬೇಕೆಂದು ಕೋರಿದರು.

ಈ ಸಂದರ್ಭದಲ್ಲಿ ನೌಕರರಾದ ಅಂಜಿನಪ್ಪ, ಓಂಕಾರ್, ದಾದಾಪೀರ್, ಹಾಲೇಶ್, ಏಳುಕೋಟಿ ಸೇರಿದಂತೆ ಇತರರು ಇದ್ದರು.

error: Content is protected !!