ಬಸ್ ದರ ಹೆಚ್ಚಳ ಖಂಡಿಸಿ ಎಸ್‌ಯುಸಿಐ ಪ್ರತಿಭಟನೆ

ದಾವಣಗೆರೆ, ಜು.6- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ದಾವಣಗೆರೆ ವಿಭಾಗ ಹೆಚ್ಚಿಸಿರುವ ಪ್ರಯಾಣ ದರವನ್ನು ಹಿಂಪಡೆಯು ವಂತೆ ಒತ್ತಾಯಿಸಿ, ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದಿಂದ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.

ಎಸ್‍ಯುಸಿಐ ಮುಖಂಡ ಮಂಜುನಾಥ್ ಕೈದಾಳೆ ಮಾತನಾಡಿ, ಕೋವಿಡ್-19 ಸಾಂಕ್ರಾಮಿಕ ರೋಗ, ಕಳೆದ ಎರಡು ವರ್ಗಗಳಿಂದ ದೇಶವನ್ನು ತಲ್ಲಣಗೊಳಿಸಿದೆ. ಜನಜೀವನ ದುಸ್ತರ ಆಗಿರುವ ಸಂದರ್ಭದಲ್ಲಿ ಆಡಳಿತ ಪಕ್ಷಗಳು ಶ್ರೀಸಾಮಾನ್ಯರ ಕಷ್ಟಕ್ಕೆ ಸ್ಪಂದಿಸದೇ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಗಾಯದ ಮೇಲೆ ಬರೆ ಎಳೆದಿದೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಹಾಗೂ ಕೆಎಸ್‍ಆರ್‍ಟಿಸಿ ವಿಭಾಗಾಧಿಕಾರಿ ಜಿಲ್ಲೆಯ ಪ್ರತಿ ತಾಲ್ಲೂಕು ಹೆದ್ದಾರಿ ಮಾರ್ಗಗಳ ಕೆಎಸ್‍ಆರ್‍ಟಿಸಿ ಬಸ್ ಪ್ರಯಾಣ ದರ ಹತ್ತು ರೂ. ಹೆಚ್ಚಿಸಿರುವುದು ಅತ್ಯಂತ ಖಂಡನೀಯ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಒಂದು ಸೇವಾ ವಲಯವಾಗಿದ್ದು, ಜನಸಾಮಾನ್ಯರಿಗೆ ಉಚಿತ ಸೇವೆ ನೀಡಬೇಕಾ ಗಿತ್ತು. ಆದರೆ, ಸಂಸ್ಥೆಯು ಹಾಗೂ ಸರ್ಕಾರ  ಲಾಭ-ನಷ್ಟದ ಲೆಕ್ಕಾಚಾರದಲ್ಲಿ, ಇಂಧನ ದರ ಹೆಚ್ಚಾಗಿದೆ ಎಂಬ ನೆಪ ಹೇಳಿ ಪ್ರಯಾಣ ದರ ಹೆಚ್ಚಿಸಿರುವುದು ಜನರಿಗೆ ಮಾಡಿದ ದ್ರೋಹ ವಾಗಿದೆ. ತಕ್ಷಣವೇ ಹೆಚ್ಚಿಸಿರುವ ದರವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಸುನೀತ್ ಕುಮಾರ್, ಮಂಜು ನಾಥ್ ಕುಕ್ಕುವಾಡ, ತಿಪ್ಪೇಸ್ವಾಮಿ ಅಣಬೇರು, ಮಧು ತೊಗಲೇರಿ, ಭಾರತಿ, ಪರಶುರಾಮ್, ನಾಗಜ್ಯೋತಿ, ಪೂಜಾ, ಕಾವ್ಯ, ನಾಗಸ್ಮಿತ, ಪುಷ್ಪ, ಗುರು, ಮಮತ, ಅನಿಲ್, ಬಸವರಾಜ್ ಬಾವಿಹಾಳ್, ಲಕ್ಷ್ಮಣ್ ಮಾಯಕೊಂಡ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!