ದಿಶಾ ಸಭೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ
ದಾವಣಗೆರೆ ಏ. 16- ಇಡೀ ಜಿಲ್ಲೆಗೆ ಉದ್ಯೋಗ ಖಾತ್ರಿ ಯೋಜನೆಯಡಿ ಅಡಿಕೆ ತೋಟ ನಿರ್ವಹಣೆಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಅನುಮತಿ ಕೊಡಿಸಲು ಪ್ರಯತ್ನಿಸಲಾಗು ವುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದ್ದಾರೆ.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಬಗ್ಗೆ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇದಕ್ಕೂ ಮುನ್ನ ಜಿ.ಪಂ. ಉಪ ಕಾರ್ಯದರ್ಶಿ ಆನಂದ್, ಉದ್ಯೋಗ ಖಾತ್ರಿ ಯೋಜನೆಯಡಿ ಕಳೆದ ವರ್ಷ 131.75 ಕೋಟಿ ರೂ. ಗಳ ವೆಚ್ಚದಲ್ಲಿ 33.51 ಲಕ್ಷ ಮಾನ ವದಿನಗಳನ್ನು ಸೃಜಿಸಿ ಕೂಲಿಕಾರರಿಗೆ ಉದ್ಯೋಗ ನೀಡಲಾಗಿದೆ. ವಿವಿಧ ತೋಟಗಾರಿಕೆ ಬೆಳೆಗಳಿಗೆ ನರೇಗಾದಡಿ ಕೆಲಸ ಮಾಡಿಕೊಳ್ಳಲು ಅವಕಾಶ ನೀಡಿದಂತೆಯೇ, ಜಿಲ್ಲೆಯ ಹೊನ್ನಾಳಿ ಮತ್ತು ಚನ್ನಗಿರಿ ತಾಲ್ಲೂಕಿಗೆ ಮಾತ್ರ ಅಡಿಕೆ ಬೆಳೆಗೂ ಅವಕಾಶವನ್ನು ಸರ್ಕಾರ ಕಳೆದ ವರ್ಷ ನೀಡಿದೆ.
ಮಲೆನಾಡು ಅಭಿವೃದ್ಧಿ ಮಂಡಳಿ ವ್ಯಾಪ್ತಿಗೆ ಒಳಪಡುವ ತಾಲ್ಲೂಕುಗಳಿಗೆ ಮಾತ್ರ ಅಡಿಕೆ ಬೆಳೆ ಸೇರ್ಪಡೆಗೆ ಅವಕಾಶವಿದೆ ಎಂಬ ಕಾರಣ ನೀಡಿ, ಇಡೀ ಜಿಲ್ಲೆಗೆ ವಿಸ್ತರಣೆ ಮಾಡುವಂತೆ ಕೋರಿದ ಪ್ರಸ್ತಾವನೆ ತಿರಸ್ಕತಗೊಂಡಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ಜಿಲ್ಲೆಯ ದಾವಣಗೆರೆ ಮತ್ತು ಹರಿಹರ ತಾಲ್ಲೂಕು ಅಲ್ಲದೆ ಜಗಳೂರು ತಾಲ್ಲೂಕಿನಲ್ಲಿಯೂ ಅಡಿಕೆ ಬೆಳೆಗಾರರು ಹೆಚ್ಚಾಗಿದ್ದಾರೆ. ಆದ್ದರಿಂದ ಸರ್ಕಾರದ ಮಟ್ಟದಲ್ಲಿ ಚರ್ಚಿಸುವುದಾಗಿ ಹೇಳಿದರು.
ನೀರಿನ ಸದ್ಬಳಕೆ ಹಾಗೂ ಸಮಗ್ರ ನಿರ್ವಹಣೆ ನಿಟ್ಟಿನಲ್ಲಿ ಮಳೆ ನೀರನ್ನು ಹಿಡಿದಿಟ್ಟುಕೊಂಡು, ಅಂತರ್ಜಲ ವೃದ್ಧಿಸಲು ಸರ್ಕಾರ ರೂಪಿಸಿರುವ ಜಲಶಕ್ತಿ ಅಭಿಯಾನದಡಿ ಕೈಗೊಳ್ಳಬೇಕಾದ ಎಲ್ಲ ಕಾಮಗಾರಿಗಳನ್ನು ಮಳೆಗಾಲ ಆರಂಭವಾಗು ವುದರ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಉದ್ಯೋಗ ಖಾತ್ರಿ ಯೋಜನೆಯಡಿ 100 ದಿನಗಳ ಒಳಗಾಗಿ ಈ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಿದ್ದು, ಮಳೆಗಾಲ ಪ್ರಾರಂಭವಾಗುವುದರ ಒಳಗಾಗಿ ಈ ಎಲ್ಲ ಕಾಮಗಾರಿಗಳನ್ನು ಕೈಗೊಂಡರೆ, ಮಳೆ ನೀರು ಸಂಗ್ರಹಣೆಗೊಂಡು ಅಂತರ್ಜಲ ಅಭಿವೃದ್ಧಿಯಾಗುವುದರ ಜೊತೆಗೆ ಜಿಲ್ಲೆಯ ಹಸಿರೀಕರಣಕ್ಕೂ ನೆರವಾಗಲಿದೆ. ಅಲ್ಲದೆ ಉದ್ಯೋಗಖಾತ್ರಿ ಯೋಜನೆಯಡಿ ಉದ್ಯೋಗ ಸೃಷ್ಟಿಯಾಗಿ ಕೂಲಿಕಾರರಿಗೆ ನೆರವಾಗಲಿದೆ ಎಂದರು.
ಹಂದಿ ಸ್ಥಳಾಂತರಕ್ಕೆ ಹೆಬ್ಬಾಳು ಬಳಿ 7 ಎಕರೆ ಜಾಗ: ಡಿಸಿ
ನಗರದಲ್ಲಿರುವ ಹಂದಿಗಳನ್ನು ಸ್ಥಳಾಂತರಿಸಲು ಹೆಬ್ಬಾಳ ಬಳಿ 7 ಎಕರೆ ಜಾಗ ಗುರುತಿಸಲಾಗಿದ್ದು, ಹಂದಿ ಮಾಲೀಕರ ಸಂಘದವರು ಈಗಾಗಲೇ ಜಾಗ ನೋಡಿ ಕೊಂಡು ಹೋಗಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸಭೆಯಲ್ಲಿ ತಿಳಿಸಿದರು. ಜಾಗದ ಸುತ್ತಲು ಕಾಂಪೌಂಡ್ ಕಟ್ಟಲು ಕ್ರಿಯಾ ಯೋಜನೆ ತಯಾರಿಸಲು ಮಹಾನಗರ ಪಾಲಿಕೆ ಎಂಜಿನಿಯರ್ಗಳಿಗೆ ಸೂಚಿಸಲಾಗಿದೆ. ನಗರದಲ್ಲಿನ ಹಸಿ ತ್ಯಾಜ್ಯವನ್ನು ಹಂದಿಗಳಿಗಾಗಿ ಕಳುಹಿಸಲು ವಾಹನ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಸಂಸದ ಸಿದ್ದೇಶ್ವರ್ ಅವರು ನಾಡಿದ್ದು ಕಾಂಪೌಂಡ್ ಗೋಡೆಗೆ ಎಸ್ಟಿಮೇಟ್ ತಯಾರಿಸಿ, ನಮಗೂ ಹಾಗೂ ಜಿಲ್ಲಾಧಿಕಾರಿಗಳಿಗೂ ಕಳುಹಿಸುವಂತೆ ಪಾಲಿಕೆ ಎಂಜಿನಿಯರ್ಗೆ ಸೂಚಿಸಿದರು.
ಒಣ ಕಸ ವಾರಕ್ಕೆ 3 ಬಾರಿಯಾದರೂ ಸಂಗ್ರಹಿಸಲು ಮನವಿ
ಹಸಿ ಕಸ ಹಾಗೂ ಒಣ ಕಸ ವಿಂಗಡಿಸಿ ಸಂಗ್ರಹಿಸಲಾಗುತ್ತಿದೆ. ಪ್ರತಿ ದಿನ ಹಸಿ ಕಸವನ್ನೂ ಹಾಗೂ ವಾರಕ್ಕೊಮ್ಮೆ ಮಾತ್ರ ಒಣ ಕಸವನ್ನು ಸಂಗ್ರಹಿಸಲಾಗುತ್ತಿದೆ. ವಾರಪೂರ್ತಿ ಒಣ ಕಸವನ್ನು ಮನೆಗಳಲ್ಲಿ ಸಂಗ್ರಹಿಸಿಡುವುದು ಕಷ್ಟವಾಗುತ್ತದೆ. ಆದ್ದರಿಂದ ಕನಿಷ್ಟ ವಾರಕ್ಕೆ ಮೂರು ಬಾರಿಯಾದರೂ ಒಣ ಕಸ ತೆಗೆದುಕೊಂಡು ಹೋಗುವಂತೆ ಕ್ರಮ ಕೈಗೊಳ್ಳಬೇಕೆಂದು ದಿಶಾ ಸಮಿತಿ ಸದಸ್ಯ ಬಸವರಾಜ್ ಮನವಿ ಮಾಡಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಗಾಗಿ ಹೊಸದಾಗಿ 2.80 ಕೋಟಿ ರೂ. ಗಳ ವೆಚ್ಚದಲ್ಲಿ 13 ಆಟೋಟಿಪ್ಪರ್, ಬ್ಯಾಟರಿ ಚಾಲಿತ 13 ಆಟೋಟಿಪ್ಪರ್, 2 ಟ್ರ್ಯಾಕ್ಟರ್, 2 ಟಿಪ್ಪರ್ಟ್ರಕ್, 2 ಸ್ಕಿಡ್ ಸ್ಟೀರ್ ಲೋಡರ್ಗಳನ್ನು ಖರೀದಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ಎಲ್ಲ ವಾಹನಗಳು ಸರಬರಾಜಾದಲ್ಲಿ, ನಗರ ವ್ಯಾಪ್ತಿಯಲ್ಲಿ ಮನೆ ಮನೆಗಳಿಂದ ನಿತ್ಯವೂ ಹಸಿಕಸ ಹಾಗೂ ವಾರಕ್ಕೆ 2 ದಿನ ಒಣಕಸ ಸಂಗ್ರಹಿಸುವ ಕಾರ್ಯ ಜಾರಿಗೆ ತರಲಾಗುವುದು ಎಂದರು.
ಇದೇ ಯೋಜನೆಗಳಡಿ ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳ ಆವರಣದಲ್ಲಿರುವ ಬೋರ್‍ವೆಲ್‍ಗಳಿಗೆ ಇಂಗುಗುಂಡಿ ನಿರ್ಮಿಸುವಂತೆಯೂ ಸಂಸದರು ಸೂಚಿಸಿದರು. ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ಜಲಶಕ್ತಿ ಅಭಿಯಾನದಡಿ ಒಂದು ಸಾವಿರಕ್ಕೂ ಹೆಚ್ಚು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಸದ್ಯ 547 ಕಾಮಗಾರಿಗಳಿಗೆ ಕ್ರಿಯಾ ಯೋಜನೆ ರೂಪಿಸಿದ್ದು, 135 ಕಾಮಗಾರಿಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಬಾಕಿ ಕಾಮಗಾರಿಗಳಿಗೆ ಏಪ್ರಿಲ್ 22 ರ ಒಳಗಾಗಿ ಕ್ರಿಯಾ ಯೋಜನೆ ರೂಪಿಸಿ, ಅನುಮೋದನೆ ನೀಡಲಾಗುವುದು ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳನ್ನು ಮಂಜೂರು ಮಾಡಲು ಕೆಲವು ಮಧ್ಯವರ್ತಿಗಳು ಫಲಾನುಭವಿಗಳಿಂದ ಕನಿಷ್ಟ 25 ಸಾವಿರ ರೂ. ಹಣಕ್ಕಾಗಿ ಬೇಡಿಕೆ ಇಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಈ ಕುರಿತು ದೂರುಗಳು ಬಂದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಸಂಸದರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾ, ಅಧಿಕಾರಿಗಳು ಫಲಾನುಭವಿಗಳನ್ನು ಭೇಟಿ ಮಾಡಿ ಅಭಿಪ್ರಾಯ ಪಡೆದು ವರದಿ ನೀಡುವಂತೆ ಸೂಚಿಸಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ ಮಾತನಾಡಿ, ಪ್ರಧಾನಮಂತ್ರಿ ಆವಾಸ್ ನಗರ ಯೋಜನೆಯಡಿ ಇದುವರೆಗೂ ಮನೆಗಳ ನಿರ್ಮಾಣ ಪ್ರಾರಂಭಿಸದ 1346 ಫಲಾನುಭವಿಗಳ ಮನೆ ಮಂಜೂರಾತಿಯನ್ನು ರದ್ದುಪಡಿಸಿ ರಾಜೀವ್‍ಗಾಂಧಿ ವಸತಿ ನಿಗಮ ಆದೇಶ ಹೊರಡಿಸಿದೆ. ಈ ಆದೇಶವನ್ನು ಹಿಂಪಡೆಯುವಂತೆ ಕೋರಿ ಸಲ್ಲಿಸಿದ ಪ್ರಸ್ತಾವನೆ ಈಗಾಗಲೇ ತಿರಸ್ಕೃತಗೊಂಡಿದೆ ಎಂದಾಗ, ಸಂಸದರು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಚರ್ಚಿಸಿ ರದ್ದಾದ ಆದೇಶ ಹಿಂಪಡೆಯುವಂತೆ ಹೇಳಿದರು.
ಮಾಯಕೊಂಡ ಕ್ಷೇತ್ರದ ಶಾಸಕ ಪ್ರೊ. ಲಿಂಗಣ್ಣ, ಜಿ.ಪಂ. ಅಧ್ಯಕ್ಷೆ ಶಾಂತಕುಮಾರಿ, ದಿಶಾ ಸಮಿತಿ ಸದಸ್ಯರುಗಳು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.