ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದ ಶಾಸಕ ಎಸ್. ರಾಮಪ್ಪ ವಿಶ್ವಾಸ
ಹರಿಹರ, ಜು.6- ಹರಿಹರ ನಗರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಿಸುವಂತೆ ಸರ್ಕಾರದ ಗಮನವನ್ನು ಸೆಳೆಯುವುದಕ್ಕೆ ಒಗ್ಗಟ್ಟಿನಿಂದ ಹೋರಾಟ ಮಾಡಿದರೆ ಫಲ ಖಂಡಿತವಾಗಿ ದೊರೆಯುತ್ತದೆ ಎಂದು ಶಾಸಕ ಎಸ್. ರಾಮಪ್ಪ ಹೇಳಿದರು.
ನಗರದ ಗಾಂಧಿ ವೃತ್ತದಲ್ಲಿ ಹರಿಹರ ನಗರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವಂತೆ ಸರ್ಕಾರದ ಗಮನವನ್ನು ಸೆಳೆಯಲು ನಾಗರಿಕ ಹೋರಾಟ ಸಮಿತಿ ವತಿಯಿಂದ §ನಮ್ಮ ನಗರ ನಮ್ಮ ಧ್ವನಿ¬ ಎಂಬ ಘೋಷಣೆಯೊಂದಿಗೆ ಸಹಿ ಸಂಗ್ರಹ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಗರದಲ್ಲಿ ಇಲ್ಲಿಯವರೆಗೂ ಯಾವುದೇ ದೊಡ್ಡ ಪ್ರಮಾಣದ ಶೈಕ್ಷಣಿಕ ಸಂಸ್ಥೆಗಳ ಸೌಲಭ್ಯಗಳು ಇಲ್ಲದೇ ಇರುವುದರಿಂದ ದಾವಣಗೆರೆಗೆ ಹೋಗುವಂತಹ ಪರಿಸ್ಥಿತಿ ಬಂದಿದೆ. ಈಗ ರಾಜ್ಯ ಸರ್ಕಾರ ರಾಜ್ಯದ ಆರು ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಮುಂದಾಗಿದ್ದು, ಹರಿಹರದಲ್ಲಿ ಆರಂಭಿಸಿದರೆ ಇಲ್ಲಿನ ಜನತೆಗೆ ಹೆಚ್ಚು ಅನುಕೂಲ ಆಗಲಿದೆ. ಅಕ್ಕ ಪಕ್ಕದ ಹೊನ್ನಾಳಿ, ಹರಪನಹಳ್ಳಿ, ರಾಣೇಬೆನ್ನೂರು ಸೇರಿದಂತೆ ಇತರೆ ತಾಲ್ಲೂಕಿನ ಜನತೆಗೂ ಅನುಕೂಲವಾಗಲಿದೆ.
ಒಂದು ವೇಳೆ ಹರಿಹರ ನಗರದಲ್ಲಿ ಮಾಡುವುದಕ್ಕೆ ಸರ್ಕಾರ ಮೀನಾ ಮೇಷ ಎಣಿಸಿದರೆ ತಾಲ್ಲೂಕಿನ ಜನರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಭೇಟಿ ಮಾಡಿ, ಅವರಿಗೆ ಮನವಿಯನ್ನು ನೀಡೋಣ. ಸದ್ಯದಲ್ಲೇ ವಿಧಾನಸಭೆ ಅಧಿವೇಶನ ಕರೆಯಲಿದ್ದು, ಈ ಸಂಬಂಧ ಒತ್ತಡ ಹೇರುವೆ. ಈ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದರು.
ಸಮಾಜ ಸೇವಕ ಎನ್.ಹೆಚ್. ಶ್ರೀನಿವಾಸ್ ನಂದಿಗಾವಿ ಮಾತನಾಡಿ, ಹರಿಹರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭ ಮಾಡುವುದರಿಂದ ಇಲ್ಲಿನ ಸುತ್ತಮುತ್ತಲಿನ ಪ್ರದೇಶದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ.
ಸರ್ಕಾರ ಕೇಳುವ ಮಾನದಂಡಗಳನ್ನು ಒದಗಿಸಲು ಇಲ್ಲಿನ ಜನರು ಸಿದ್ಧರಿದ್ದು, ಆಸ್ಪತ್ರೆಯ ಆವರಣದ ಹಿಂಬದಿಯಲ್ಲಿ ಇಪ್ಪತ್ತೆರಡು ಎಕರೆ ವಿಶಾಲವಾದ ಸರ್ಕಾರಿ ಜಮೀನು ಸೇರಿದಂತೆ ಎಲ್ಲಾ ರೀತಿಯಿಂದ ಸೂಕ್ತವಾಗಿರುತ್ತದೆ.
ಮೊದಲ ಹಂತವಾಗಿ ಸಹಿ ಅಭಿಯಾನದ ಮೂಲಕ ಹೋರಾಟಕ್ಕೆ ಚಾಲನೆ ನೀಡಲಾಗಿದೆ. ಇನ್ನೂ 5 ದಿನಗಳವರೆಗೆ ಸಹಿ ಮಾಡಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ನಗರ ಮತ್ತು ಸುತ್ತಮುತ್ತಲಿನ ಪ್ರದೇಶದ ನಾಗರಿಕರು ಸ್ವಯಂ ಪ್ರೇರಿತರಾಗಿ ಸಹಿ ಮಾಡುವ ಮೂಲಕ ಮೆಡಿಕಲ್ ಕಾಲೇಜ್ ಹೋರಾಟಕ್ಕೆ ಬೆಂಬಲವನ್ನು ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅಂಗಡಿ ರೇವಣಸಿದ್ದಪ್ಪ, ಮಾಜಿ ದೂಡ ಸದಸ್ಯ ಹೆಚ್. ನಿಜಗುಣ, ಕಾರ್ಮಿಕ ಮುಖಂಡ ಹೆಚ್.ಕೆ. ಕೊಟ್ರಪ್ಪ, ಕಾಂಗ್ರೆಸ್ ಮುಖಂಡ ಜಿ.ಹೆಚ್. ಮರಿಯೋಜಿರಾವ್, ಸಿ.ಎನ್. ಹುಲುಗೇಶ್, ನಗರಸಭೆ ಮಾಜಿ ಸದಸ್ಯ ಹಂಚಿನ ನಾಗಪ್ಪ, ಪತ್ರಕರ್ತ ಎಂ. ಚಿದಾನಂದ ಕಂಚಿಕೇರಿ, ಆರ್ ರಾಘವೇಂದ್ರ, ಟಿ. ಇನಾಯತ್, ಶೇಖರ್ ಗೌಡ, ಹೆಚ್.ಸಿ. ಕೀರ್ತಿಕುಮಾರ್, ಚಂದ್ರಶೇಖರ್, ಪರಸ್ಪರ ಬಳಗದ ರಿಯಾಜ್ ಆಹ್ಮದ್, ಬಿ.ಬಿ. ರೇವಣ್ಣನಾಯ್ಕ್, ಕೊಟ್ರೇಶ್ ಭಾನುವಳ್ಳಿ, ಎಕ್ಕೇಗೊಂದಿ ರುದ್ರೇಗೌಡ, ಕಲೀಂ ಬಾಷಾ, ಯೋಗೇಶ್ ಪಾಟೀಲ್, ಜಿ.ವಿ. ಪ್ರವೀಣ್, ಸುಚೇತ್, ಕಿರಣ್ ಬೊಂಗಾಳೆ, ರಾಘವೇಂದ್ರ ಬೊಂಗಾಳೆ, ಜ್ಞಾನೇಶ್ವರ್ ಬೊಂಗಾಳೆ, ಭೋಜರಾಜ್ ಹೋವಳೆ, ಜಯರಾಮ್ ಶೆಟ್ಟಿ, ಜಿ.ಕೆ. ಮಲ್ಲಿಕಾರ್ಜುನ್, ಬಸವರಾಜಪ್ಪ, ಬಾಷಾ , ಜಿ. ಮುನೀಂದ್ರ ಇನ್ನಿತರರು ಹಾಜರಿದ್ದರು.