ಪ್ರತಿ ವೃತ್ತಿಯವರೂ `ಯೋಗಿ’ಗಳಾದರೆ ಸುಖೀ ಸಮಾಜ ಸಾಧ್ಯ: ಡಾ. ಈಶ್ವರಪ್ಪ

ಹೆಚ್‌.ಕೆ. ಲಿಂಗರಾಜು ಅವರ `ಶಿಕ್ಷಣ ಯೋಗಿ’ ಅಭಿನಂದನಾ ಗ್ರಂಥ ಲೋಕಾರ್ಪಣೆ

ದಾವಣಗೆರೆ, ಫೆ.14- ನೇಗಿಲ ಯೋಗಿ, ಶಿಕ್ಷಣ ಯೋಗಿ ಎಂಬ ಎರಡು ವೃತ್ತಿಗಳ ಜನರು ಯೋಗಿಗಳಾದಂತೆ ಪ್ರತಿ ವೃತ್ತಿಯಲ್ಲೂ ನಿರತರಾದವರು ಯೋಗಿಗ ಳಾದರೆ ಸುಖೀ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಹಿರಿಯ ಸಾಹಿತಿ ಯೂ ಆದ ಜಾನಪದ ವಿದ್ವಾಂಸ ಡಾ. ಎಂ.ಜಿ. ಈಶ್ವರಪ್ಪ ಅಭಿಪ್ರಾಯಿಸಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಸೌಹಾರ್ದ ಪ್ರಕಾಶನದಿಂದ ಪ್ರಕಟಗೊಂಡ ಡಯಟ್ ಪ್ರಾಚಾರ್ಯ ಹೆಚ್.ಕೆ. ಲಿಂಗರಾಜು ಅವರ ಅಭಿನಂದನಾ ಗ್ರಂಥ `ಶಿಕ್ಷಣ ಯೋಗಿ’ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, `ನೇಗಿಲ ಯೋಗಿ’, `ಶಿಕ್ಷಣ ಯೋಗಿ’ಗಳು ಸಮಾಜಕ್ಕೆ ಮಾರ್ಗದರ್ಶಕ ರಾಗಿ, ಬೆಳಕಾಗಿ, ಉತ್ಕೃಷ್ಟ ಸಮಾಜ ನಿರ್ಮಿಸಬೇಕು ಎಂದು ಹೇಳಿದರು.

ಆತ್ಮಕಥನಗಳು, ಜೀವನ ಚರಿತ್ರೆಗಳು ಒಂದು ಬಗೆಯಾದರೆ, ನಮ್ಮ ಜೊತೆಗಿದ್ದು, ಸಮಾಜ ಮುಖಿಯಾಗಿ ಕಾರ್ಯ ಮಾಡಿದವರ ಬಗ್ಗೆ ಅಭಿಂದನಾ ಗ್ರಂಥ ಬರೆಯುವುದು ಮತ್ತೊಂದು ಬಗೆ. ಯಾವ ಕ್ಷೇತ್ರದಲ್ಲಿ ವ್ಯಕ್ತಿ ಕೆಲಸ ಮಾಡಿರುತ್ತಾರೋ ಆ ಕ್ಷೇತ್ರದಲ್ಲಿನ ಅವರ ಸಾಧನೆ ಬಗ್ಗೆ ಅಭಿಪ್ರಾಯಗಳನ್ನು ಸಂಗ್ರಹಿಸಿ ಅಭಿನಂದನಾ ಗ್ರಂಥ ಬರೆಯ ಲಾಗುತ್ತದೆ. ಇದೊಂದು ರೀತಿ ಆಕರ ಗ್ರಂಥಗಳಿದ್ದಂತೆ ಎಂದು ಬಣ್ಣಿಸಿದರು.

ಲಿಂಗರಾಜು ಅವರ ಬಗ್ಗೆ ಅಪಾರ ಗೌರವ ಇರುವುದಾಗಿ ಹೇಳಿದ ಈಶ್ವರಪ್ಪ ಅವರು, ಶಿಕ್ಷಕರಾಗಿ, ಮುಖ್ಯೋಪಾಧ್ಯಾಯ ರಾಗಿ ಕಾರ್ಯ ನಿರ್ವಹಿಸಿದ ಲಿಂಗರಾಜು, ನಂತರ ವಿಧಾನಸೌಧದಲ್ಲಿ ಸಚಿವರುಗಳ ಸಲಹೆಗಾರರಾಗಿ, ವಿಶೇಷ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ವಿಧಾನಸೌಧದಲ್ಲಿ ಕರ್ತವ್ಯ ನಿರ್ವಹಿಸಿ ಮರಳಿ ಬಂದ ಏಕೈಕ ವ್ಯಕ್ತಿ ಎಂದು ಪ್ರಶಂಸಿಸಿದರು.

ಯಾರು ಶಿಕ್ಷಕ ವೃತ್ತಿಯನ್ನು ಪ್ರೀತಿಸುವರೋ ಅವರು ವಿಧಾನಸೌಧ ಅಥವಾ ಪಾರ್ಲಿಮೆಂಟ್ ಗೆ ಹೋದರೂ ವಾಪಸ್ ಬರುತ್ತಾರೆ. ಏಕೆಂದರೆ ಶಾಲಾ ಕೊಠಡಿಗಳಲ್ಲಿ  ವಿದ್ಯಾರ್ಥಿಗಳ ಮುಖದ ಲ್ಲಿನ ನಗು ನೀಡುವ ಸಂತೋಷ ಶಿಕ್ಷಕರಾ ದವರಿಗೆ ಮತ್ತೆಲ್ಲೂ ಸಿಗುವುದಿಲ್ಲ ಎಂದರು.

ಲಿಂಗರಾಜು ಅವರು ಡಯಟ್ ಪ್ರಾಚಾರ್ಯರಾದ ಮೇಲೆ ಅಲ್ಲಿನ ಅಂತರಂಗ ಹಾಗೂ ಬಹಿರಂಗದ ಸ್ವರೂಪ ಗಳೂ ಬದಲಾಗಿದೆ. ಅಂತರಂಗದ ಸ್ವರೂಪ ಬದಲಾದಾಗ ನಮ್ಮ ವೃತ್ತಿಗೆ ಗೌರವ ಬರುತ್ತದೆ. ಅಂತಹ ಘನತೆ, ಗೌರವ ಕೊಟ್ಟ ಲಿಂಗರಾಜು ಗೌರವಕ್ಕೆ ಅರ್ಹರು. ಅವರ ಕೆಲಸಗಳು ಶಾಶ್ವತವಾಗಿ ಉಳಿಯುವಂತೆ ಹಿರಿಯ ಸಾಹಿತಿಯೂ ಆಗಿರುವ ಶಿಕ್ಷಕಿ ಶ್ರೀಮತಿ ಶಶಿಕಲಾ ಶಂಕರಮೂರ್ತಿ ಅವರು ಅಭಿನಂದನಾ ಗ್ರಂಥ ತಂದಿದ್ದಾರೆ. ಈ ಗ್ರಂಥವನ್ನು ಕೊಂಡು ಓದಿದರೆ ಪ್ರಕಾಶಕರಿಗೆ ಮತ್ತೊಂದಿಷ್ಟು ಕೆಲಸ ಮಾಡಲು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಹೇಳಿದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಹೆಚ್.ಎಸ್. ಮಂಜುನಾಥ ಕುರ್ಕಿ, ಗರ್ಭದಿಂದ ಗೋರಿಯವರಿಗೂ ಸಾಗುವ ಪಯಣ ಇತಿಹಾಸದಲ್ಲಿ ವಿಲೀನ ಆದಾಗ ಬದುಕಿಗೆ ಶ್ರೇಷ್ಠತೆ ಕಂಡುಕೊಳ್ಳಲು ಸಾಧ್ಯ ಎಂದರು.

ಆಸ್ತಿ, ಅಧಿಕಾರ, ಹಿಂಬಾಲಕರಿಂದ ವ್ಯಕ್ತಿಯ ಬಾಹ್ಯ ಸೌಂದರ್ಯ ಹೆಚ್ಚುತ್ತದೆ. ಆದರೆ ಅವುಗಳು ಆ ವ್ಯಕ್ತಿಯ ಅಂತರಂಗದ ಮೌಲ್ಯ ಕಾಪಾಡುವುದಿಲ್ಲ. ಅಧಿಕಾರ,ಆಸ್ತಿ ಕಳೆದಂತೆ ವ್ಯಕ್ತಿಯ ಮೌಲ್ಯವೂ ಕಳೆದುಹೋಗುತ್ತದೆ. ವಿನಯತೆ ಮೈಗೂಡಿಸಿಕೊಂಡು ಎಲ್ಲರನ್ನೂ ಗೌರವಿಸುವ ವ್ಯಕ್ತಿ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂದರು.

ಅಭಿನಂದನಾ ಗ್ರಂಥದ ಕುರಿತು ಮಾತನಾಡಿದ ಎಂ.ಎಂ. ಶಿಕ್ಷಣ ಮಹಾವಿದ್ಯಾಲಯದ ವಿಶ್ರಾಂತ ಪ್ರಾಂಶುಪಾಲ ಡಾ.ಹೆಚ್.ವಿ. ವಾಮದೇವಪ್ಪ, ಶಿಕ್ಷಣ ಯೋಗಿ ಗ್ರಂಥವು ಪ್ರತಿಯೊಬ್ಬ ಶಿಕ್ಷಕರಿಗೂ ಅಗತ್ಯವಾದ ಸಂಗ್ರಹ ಯೋಗ್ಯ ಎಂದು ಹೇಳಿದರು.

ಲಿಂಗರಾಜು ಅವರು ಸೃಜನ ಶೀಲ ಚಿಂತಕ, ಸಂಶೋಧನೆ ಮೂಲಕ ಸದಾ ಹೊಸತನ್ನು ಕಂಡು ಹಿಡಿದು ಅದನ್ನು ವೃತ್ತಿಯಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುವವರು. ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಅವರ ಬಗ್ಗೆ ಈ ಗ್ರಂಥದಲ್ಲಿ 124 ಜನರು ಬರೆದ ಲೇಖನಗಳನ್ನು ಸಂಗ್ರಹಿಸಿ, 8 ಭಾಗಗಳನ್ನಾಗಿ ವ್ಯವಸ್ಥೆಗೊಳಿಸಲಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಹೆಚ್.ಕೆ. ಲಿಂಗರಾಜು ಹಾಗೂ ಶ್ರೀಮತಿ ಟಿ.ಜಿ.ಲೀಲಾವತಿ ದಂಪತಿಗೆ ಅಭಿನಂದನೆ ಸಲ್ಲಿಸಲಾಯಿತು. ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಲಿಂಗರಾಜು ಅವರ ಸ್ನೇಹಿತರು, ಹಿತೈಷಿಗಳು ಅಭಿಂನಂದನಾ ಮಳೆಗೈದರು. ಸೌಹಾರ್ದ ಪ್ರಕಾಶನದ ಪ್ರಕಾಶಕಿ ಎ.ಸಿ. ಶಶಿಕಲಾ ಶಂಕರಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರೂ, ತರಳಬಾಳು ಜಗದ್ಗುರು ವಿದ್ಯಾಸಂಸ್ತೆ ಆಡಳಿತಾಧಿಕಾರಿಗಳೂ ಆದ ಪ್ರೊ.ಎಸ್.ಬಿ.ರಂಗನಾಥ್ ಅಧ್ಯಕ್ಷತೆ ವಹಿಸಿದ್ದರು. ದಾವಣಗೆರೆ ತಾಲ್ಲೂಕು ಕ.ಸಾ.ಪ. ಅಧ್ಯಕ್ಷ ಬಿ.ವಾಮದೇವಪ್ಪ, ಸಿದ್ಧಗಂಗಾ ವಿದ್ಯಾಸಂಸ್ಥೆ ಮುಖ್ಯಸ್ಥೆ ಜಸ್ಟಿನ್ ಡಿ.ಸೌಜ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಸ್.ಟಿ. ಶಾಂತಗಂಗಾಧರ್, ನೀಲಕಂಠಪ್ಪ, ಪಾಲಾಕ್ಷಪ್ಪ, ಪ್ರೊ.ಮುರಿಗೇಂದ್ರಪ್ಪ, ಬಸಂತಕುಮಾರ್ ಇತರರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಜಿಲ್ಲಾ ಮಟ್ಟದ ಕಥಾ ಸ್ಪರ್ಧೆ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. 

ಶ್ರೀ ಸಿದ್ಧಗಂಗಾ ಶಾಲಾ ಮಕ್ಕಳು ಆರಂಭದಲ್ಲಿ ನಾಡಗೀತೆ ಹಾಡಿ, ನಂತರ ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಸಂಗೀತ ಶಿಕ್ಷಕಿ ಐ.ಕೆ. ಉಮಾದೇವಿ ಪ್ರಾರ್ಥಿಸಿದರು. ಮುಖ್ಯ ಶಿಕ್ಷಕಿ ಕೆ.ಎಂ. ಗಿರಿಜಮ್ಮ ಸ್ವಾಗತಿಸಿದರು.  ಉಪನ್ಯಾಸಕಿ ಗೀತಾ ಬಸವರಾಜ್, ಲೋಲಾಕ್ಷಿ ನಿರೂಪಿಸಿದರು. ಶಿಕ್ಷಕಿ ಕಲ್ಪನಾ ವಂದಿಸಿದರು.

error: Content is protected !!