`ಜಾಧವ್ – ಜಾಧವ್ ಒಂದಾಗಬೇಕು

ದಾವಣಗೆರೆ,ಫೆ.14- `ನನಗೆ ಸನ್ಮಾನ ಬೇಡ ; ನೀವು ಜಾಧವ್ – ಜಾಧವ್ ಒಂದಾಗಬೇಕು ; ಈ ಮೂಲಕ ಇಬ್ಬರೂ ಸೇರಿ ಸಮಾಜವನ್ನು ಮುನ್ನಡೆಸಿಕೊಂಡು ಹೋಗಬೇಕು. ಬನ್ನಿ, ನಾನು ನಿಮ್ಮಿಬ್ಬರನ್ನೂ ಜೊತೆಗೆ ನಿಲ್ಲಿಸಿ ಹಾರ ಹಾಕುತ್ತೇನೆ.’

– ಇದು, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು, ಮರಾಠ ಸಮಾಜದ ಮುಖಂಡರುಗಳಾದ ದೂಡಾ ಮಾಜಿ ಅಧ್ಯಕ್ಷರೂ ಆಗಿರುವ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಮತ್ತು ದೂಡಾ ಮಾಜಿ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್ ಮುಖಂಡ ಮಾಲತೇಶರಾವ್ ಡಿ. ಜಾಧವ್ ಅವರಿಬ್ಬರಿಗೆ ಹೇಳಿದ  ಕಿವಿಮಾತಿದು.

ಇದೇ ದಿನಾಂಕ 19ರಂದು ನಡೆಯಲಿರುವ ಶಿವಾಜಿ ಮಹಾರಾಜರ ಜಯಂತ್ಯೋತ್ಸವದ ಅಂಗವಾಗಿ ನಗರದ ಶ್ರೀ ಕೃಷ್ಣಭವಾನಿ ಕಲ್ಯಾಣ ಮಂಟಪದಲ್ಲಿ ಏರ್ಪಾಡಾಗಿ ಯೋಗಾಸನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಜಿಲ್ಲಾಧಿಕಾರಿಗಳು ಕಳಕಳಯಿಂದ ಈ  ಮಾತನ್ನು ಹೇಳಿದರು.

ಸಮಾರಂಭದ ಗೌರವಾನ್ವಿತ ಅತಿಥಿಯಾಗಿದ್ದ ಜಿಲ್ಲಾಧಿಕಾರಿ ಬೀಳಗಿ ಅವರಿಗೆ ಸನ್ಮಾನ ಎಂದು ಕಾರ್ಯಕ್ರಮದ ನಿರೂಪಕರು ಹೇಳುತ್ತಿದ್ದಂತೆ ಡಿಸಿ ಎದ್ದು ನಿಂತರು. `ನನಗೆ ಸನ್ಮಾನ ಬೇಡ ; ನೀವಿಬ್ಬರೂ ಜೊತೆಯಾಗಿರಬೇಕು’ ಎಂದೇಳಿದರಲ್ಲದೇ, ಅವರಿಬ್ಬರನ್ನೂ ಹತ್ತಿರಕ್ಕೆ ಕರೆದು ಜೊತೆಗೆ ನಿಲ್ಲಿಸಿಕೊಂಡರು. ಈ ವೇಳೆಗೆ ಕ್ಷತ್ರೀಯ ಮರಾಠ ವಿದ್ಯಾವರ್ಧಕ ಸಂಘದ  ನಿರ್ದೇಶಕರಲ್ಲೊಬ್ಬರಾದ ಕೆ.ಎನ್.ಮಂಜೋಜಿರಾವ್ ಗಾಯಕವಾಡ್  ತಂದುಕೊಟ್ಟ ಹಾರಗಳನ್ನು ಪಡೆದ ಜಿಲ್ಲಾಧಿಕಾರಿಗಳು,  ಅವರಿಬ್ಬರಿಗೂ ಹಾರ ಹಾಕಿ ಹೆಗಲ ಮೇಲೆ ಕೈ ಹಾಕಿ ಫೋಟೋಗೆ ಫೋಸ್ ನೀಡಿದಾಗ, ಪ್ರೇಕ್ಷಕರಾಗಿದ್ದ ಸಮಾಜ ಬಾಂಧವರು ಚಪ್ಪಾಳೆಗಳ ಸುರಿಮಳೆಗೈದರು.

ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳ ನಡುವೆ ಕಳೆದ ಚುನಾವಣೆಗಳ ಸಂದರ್ಭದಲ್ಲಿ ನಡೆದ ರಾಜಕೀಯ ಘಟನೆಗಳ ಹಿನ್ನೆಲೆಯಲ್ಲಿ ಕೆಲ ದಿನಗಳಿಂದ  ದೂರವಾಗಿದ್ದ ಮಾಲತೇಶರಾವ್ ಜಾಧವ್ ಮತ್ತು ಯಶವಂತರಾವ್ ಜಾಧವ್ ನಡುವಿನ ವೈಮನಸ್ಸುಗಳನ್ನು ದೂರ ಮಾಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅವರಿ ಬ್ಬರಿಗೂ ಹಿತನುಡಿಗಳನ್ನು ಹೇಳಿ ಹಾರ ಹಾಕುವುದರ ಮೂಲಕ ಒಂದಗೂಡಿಸುವ ಪ್ರಯತ್ನವನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾಡಿದರು.

error: Content is protected !!