ದಾವಣಗೆರೆ, ಫೆ.12 – ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನಿಂದ ಬರುವ ಮಾರ್ಚ್ 1 ಮತ್ತು 2 ರಂದು ಆಯೋಜಿಸಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಸಂವಿಧಾನ ನಿಯಮ ಬಾಹಿರವಾಗಿದ್ದು, ಕೂಡಲೇ ಇದನ್ನು ತಡೆ ಹಿಡಿಯುವಂತೆ ಸಮಾನ ಮನಸ್ಕ ಕನ್ನಡ ಸಾಹಿತ್ಯ ಪರಿಷತ್ ಆಜೀವ ಸದಸ್ಯರ ವೇದಿಕೆಯು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಶಿವಕುಮಾರ ಸ್ವಾಮಿ ಕುರ್ಕಿ, ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತವು ಬರುವ ಮಾರ್ಚ್ 3 ರಂದು ಕೊನೆಯಾಗಲಿದ್ದು, ಈಗಾಗಲೇ ರಾಜ್ಯ ಹಾಗೂ ಎಲ್ಲಾ ಜಿಲ್ಲಾ ಘಟಕಗಳಲ್ಲಿ ಅಧ್ಯಕ್ಷರ ಆಯ್ಕೆಗೆ ಮೇ 9 ರಂದು ಚುನಾವಣೆ ನಡೆಯಲಿದೆ. ಹೀಗಿದ್ದರೂ ಕೂಡ ಜಿಲ್ಲಾ ಕಸಾಪ ತರಾತುರಿಯಲ್ಲಿ ಸಮ್ಮೇಳನ ಹಮ್ಮಿಕೊಂಡು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುತ್ತಿದೆ ಎಂದು ಅವರು ಆಕ್ಷೇಪಿಸಿದ್ದಾರೆ.
ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಹೆಚ್.ಎಸ್. ಮಂಜುನಾಥ್ ಕುರ್ಕಿ, ತಾಲ್ಲೂಕು ಘಟಕದ ಅಧ್ಯಕ್ಷ ಬಿ. ವಾಮದೇವಪ್ಪ, ಹರಿಹರ ಘಟಕದ ಅಧ್ಯಕ್ಷ ರೇವಣಸಿದ್ದಪ್ಪ ಅಂಗಡಿ ಈ ಮೂವರು ಮತ್ತೊಂದು ಬಾರಿಗೆ ಸ್ಪರ್ಧಿಸಲು ಚುನಾವಣಾ ಕಣಕ್ಕಿಳಿದಿದ್ದು, ಈಗಾಗಲೇ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ. ಈಗ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಸಮಿತಿಗಳಿಗೆ ಸ್ಥಾನಮಾನ, ಗೋಷ್ಠಿಗಳಿಗೆ ನೇಮಿಸಿಕೊಳ್ಳುವ ಆಮಿಷ ತೋರಿ ಮತ ಸೆಳೆಯಲು ಸಂಚು ರೂಪಿಸಿದ್ದಾರೆ. ಮೇಲ್ನೋಟಕ್ಕೆ ಸ್ವಾರ್ಥ ಸಾಧನೆಗಾಗಿ ಸಮ್ಮೇಳನ ಏರ್ಪಡಿಸಿರುವುದು ಸ್ಪಷ್ಟವಾಗಿದೆ ಎಂದು ಶಿವಕುಮಾರ ಸ್ವಾಮಿ ಆರೋಪಿಸಿದ್ದಾರೆ.
ಇದು ಕೇಂದ್ರ ಚುನಾವಣಾ ನೀತಿ ಸಂಹಿತೆಗೆ ಮಾಡುವ ಅಪವಾದವಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ತಿಗೆ ಮಾಡುವ ಅಪಚಾರವಾಗಿದೆ. ಸಂವಿಧಾನದ ರೀತಿ ನಿಯಮಗಳಿಗೆ ವಿರುದ್ಧವಾಗಿರುವ ಇವರ ನಡೆಯು ಕಸಾಪದ ಆಜೀವ ಸದಸ್ಯರಿಗೆ ಮಾಡುವ ದ್ರೋಹವಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
ಕೂಡಲೇ ಗಂಭೀರವಾಗಿ ಪರಿಶೀಲನೆ ನಡೆಸಿ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಡೆಹಿಡಿ ಯುವ ಮೂಲಕ ಯಾವುದೇ ಲೋಪವಿಲ್ಲದೇ ನ್ಯಾಯಯುತವಾಗಿ ಚುನಾವಣೆ ನಡೆಸಲು ಅನುವು ಮಾಡಿಕೊಡುವಂತೆ ಅವರು ಜಿಲ್ಲಾ ಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ, ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಕೋರಿದ್ದಾರೆ.