ದಾವಣಗೆರೆ, ಫೆ.12- ನಗರದ ಬಾಪೂಜಿ ಆಸ್ಪತ್ರೆಯಲ್ಲಿ ಇದೀಗ ನಾಲ್ಕು ಬಗೆಯ ಅತ್ಯಾಧುನಿಕ ಲೇಸರ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಎಂದು ಜ.ಜ.ಮು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್.ಬಿ. ಮುರುಗೇಶ್ ಅವರು ಇಂದಿಲ್ಲಿ ಸುದ್ಧಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಡ ರೋಗಿಗಳಿಗೆ ಮತ್ತು ಮಧ್ಯಮ ವರ್ಗದವರಿಗೆ ಅನುಕೂಲ ವಾಗುವಂತೆ, ಕೈಗೆಟಕುವ ದರದಲ್ಲಿ ಲೇಸರ್ ಚಿಕಿತ್ಸೆ ನೀಡಲಾಗುವುದು ಎಂದರು. ತೀರ ಬಡವರು ಚಿಕಿತ್ಸೆಗೆ ಬಂದರೆ ಅವರಿಗೆ ಬಿ.ಇ.ಎ ಸಂಸ್ಥೆ ಛೇರ್ಮನ್ ಡಾ. ಶಾಮನೂರು ಶಿವಶಂಕರಪ್ಪ ಅವರ ಅನುಮತಿ ಪಡೆದು ಉಚಿತವಾಗಿ ಈ ಸೌಲಭ್ಯ ಕಲ್ಪಿಸಲಾಗುವುದು ಎಂದು ಅವರು ಹೇಳಿ ದರು. ಚರ್ಮ ರೋಗಗಳಿಗೆ ಸಂಬಂಧಿಸಿದಂತೆ ಡಯೋಡ್ ಲೇಸರ್, ಫ್ರಾಕ್ಷನಲ್ ಲೇಸರ್, ಕ್ಯೂ ಸ್ಟಿಚ್ಡ್ ಲೇಸರ್, ಎಕ್ಸ್‌ಕ್ವಯರ್ ಲೇಸರ್ ಎಂಬ ನಾಲ್ಕು ಬಗೆಯ ಲೇಸರ್ ಸೌಲಭ್ಯಗಳನ್ನು ಪರಿಚಯಿಸಿದರು.
ಚರ್ಮಕ್ಕೆ ಸಂಬಂಧಪಟ್ಟಂತೆ ಕೆಲವು ರೋಗಗಳಿಗೆ ಲೇಸರ್ ಉತ್ತಮ ಮದ್ದಾಗಿದೆ. ಲೇಸರ್ ಕಿರಣ ಬೇರೆ ಬೇರೆ ಕಾಯಿಲೆಗೆ ಬೇರೆ ಬೇರೆ ಪರಿಣಾಮ ಬೀರುವ ಸಾಮರ್ಥ್ಯ ಹೊಂದಿದೆ ಮತ್ತು ಇದೊಂದು ಸರಳ ವಿಧಾನವಾಗಿದೆ ಎಂದು ತಿಳಿಸಿದರು.
ಬೊಕ್ಕುತಲೆ, ಮಾಯದ ಗಾಯಗಳಿಗೆ ಪಿಆರ್‌ಪಿ ಚಿಕಿತ್ಸೆ ಲಭ್ಯವಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ಜಗಳೂರು ಬಸ್ ನಿಲ್ದಾಣದ ಬಳಿ ಇರುವ ಎಸ್.ಎಸ್. ಆಸ್ಪತ್ರೆಯಲ್ಲಿ ಇದೀಗ ಮಕ್ಕಳ ವಿಭಾಗ, ಹೊರ ರೋಗಿಗಳ ವಿಭಾಗ, ಚರ್ಮ ರೋಗ ವಿಭಾಗ ಹಾಗೂ ಔಷಧಿಯ ವಿಭಾಗಗಳನ್ನು ತೆರೆಯಲಾಗಿದೆ ಎಂದರು.
ಎಸ್.ಎಸ್ ಕೇರ್ ಟ್ರಸ್ಟ್‌ನಿಂದ ನಾಲ್ಕು ಡಯಾಲಿಸಿಸ್ ಯುನಿಟ್ ಪ್ರಾರಂಭಿಸಿರುವುದಾಗಿ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ಸೂಗಾ ರೆಡ್ಡಿ ಹಾಗೂ ಡಾ. ರಾಜಶೇಖರ್ ಉಪಸ್ಥಿತರಿದ್ದು ಮಾಹಿತಿ ನೀಡಿದರು.