ಹಲವು ದಿನಗಳ ನಂತರ ದೇವಾಲಯಗಳಲ್ಲಿ ಕೇಳಿ ಬಂತು ಗಂಟೆ ಸದ್ದು, ಸಂಜೆ ನಗರದಲ್ಲಿ ಕಾರ ಮಂಡಕ್ಕಿ, ಮಿರ್ಚಿ,ಗೋಬಿ, ಪಾನಿಪೂರಿಗೆ ಮುಗಿ ಬಿದ್ದ ಜನತೆ
ದಾವಣಗೆರೆ, ಜು. 5- ದೇವಾಲಯಗಳಲ್ಲಿ ಕೇಳಿ ಬಂದ ಗಂಟೆ ಸದ್ದು, ವೃತ್ತಗಳಲ್ಲಿ ಕಾರ್ಯಾರಂಭಗೊಂಡ ಸಿಗ್ನಲ್ ದೀಪಗಳು, ವಾಣಿಜ್ಯ ರಸ್ತೆಗಳಲ್ಲಿ ಶುರುವಾದ ಪಾರ್ಕಿಂಗ್ ಸಮಸ್ಯೆ, ಬಾಯಲ್ಲಿ ನೀರೂರಿಸುವ ಮಂಡಕ್ಕಿ ಮೆಣಸಿನ್ಕಾಯಿ, ಪಾನಿಪುರಿ, ಗೋಬಿ ಮಂಚೂರಿಗೆ ಮುಗಿ ಬಿದ್ದ ಜನತೆ.
ಕೊರೊನಾ ಲಾಕ್‌ಡೌನ್ ನಿಂದ ವಿಧಿಸಿದ್ದ ನಿರ್ಬಂಧಗಳನ್ನು ಬಹುತೇಕ ಸಡಿಲಗೊಳಿಸಿದ ಹಿನ್ನೆಲೆಯಲ್ಲಿ ಸಹಜ ಸ್ಥಿತಿಗೆ ಮರಳಿದ ನಗರದಲ್ಲಿ ಸೋಮವಾರ ಕಂಡು ಬಂದ ದೃಶ್ಯಗಳಿವು.
ದೇವಾಲಯಗಳ ಪ್ರವೇಶಕ್ಕೆ ಭಕ್ತರಿಗೆ ಅವಕಾಶ ನೀಡಿದ್ದರಿಂದ ಜನತೆ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ, ದರ್ಶನ ಪಡೆದರು. ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನವೂ ಸೇರಿದಂತೆ ನಗರದಲ್ಲಿನ ಎಲ್ಲಾ ದೇವಾಲಯಗಳಲ್ಲೂ ಮುಕ್ತ ಪ್ರವೇಶವಿತ್ತು. ಹಲವು ದಿನಗಳಿಂದ ನಿಶ್ಯಬ್ಧವಾಗಿದ್ದ ದೇವಾಲಯಗಳಲ್ಲಿ ಗಂಟೆ ಸದ್ದು ಕೇಳಿ ಬಂತು. ವಿಶೇಷ ಪೂಜೆಗಳು ನಡೆದವು.
ಇನ್ನು ಮಂಡಿಪೇಟೆ, ಕೆ.ಆರ್. ಮಾರ್ಕೆಟ್ ರಸ್ತೆ, ಗಡಿಯಾರ ಕಂಬ, ಕಾಳಿಕಾದೇವಿ ರಸ್ತೆ, ಚೌಕಿಪೇಟೆ, ಅಶೋಕ ರಸ್ತೆ ಮುಂತಾದ ಕಡೆ ವಹಿವಾಟು ಗರಿಗೆದರಿದ್ದರಿಂದ ವಾಹನಗಳ ಸಂಖ್ಯೆ ಹೆಚ್ಚಾಗಿ, ಪಾರ್ಕಿಂಗ್ ಸಮಸ್ಯೆ ಮತ್ತೆ ಆರಂಭವಾಗಿತ್ತು.
ಪ್ರಮುಖ ವೃತ್ತಗಳನ್ನು ಹೊರತುಪಡಿಸಿ ಉಳಿದ ವೃತ್ತಗಳಲ್ಲಿ ಟ್ರಾಫಿಕ್ ಸಿಗ್ನಲ್ ದೀಪಗಳು ಕಾರ್ಯಾರಂಭವಾಗಿರಲಿಲ್ಲ. ಆದರೆ ಇಂದು ಬಹುತೇಕ ಎಲ್ಲಾ ವೃತ್ತಗಳಲ್ಲೂ ಸಿಗ್ನಲ್ ದೀಪಗಳು ಆರಂಭವಾಗಿದ್ದವು.
ಸಂಜೆ ಜಯದೇವ ವೃತ್ತ, ಗುಂಡಿ ಸರ್ಕಲ್, ಗಡಿಯಾರ ಕಂಬ ಸೇರಿದಂತೆ ವಿವಿಧ ಕಡೆ ತಿಂಡಿ ಅಂಗಡಿಗಳು ತೆರೆಯಲ್ಪಟ್ಟಿದ್ದವು. ಪಾನಿಪುರಿ, ಗೋಬಿ ಸವಿಯಲು ಜನತೆ ಮುಗಿ ಬಿದ್ದಿದ್ದರು. ಸಂಜೆ ತುಂತುರು ಮಳೆ ಬೀಳುತ್ತಿದ್ದ ಪರಿಣಾಮ ಹಾಗೂ ತಂಡಿ ವಾತಾವರಣಕ್ಕೆ ಕಾರ-ಮಂಡಕ್ಕಿ ಅಂಗಡಿಗಳಲ್ಲಿ ಮಿರ್ಚಿ ಬಾಣಲಿಯಿಂದ ಹೊರ ಬರುತ್ತಿದ್ದಂತೆ ಖಾಲಿಯಾಗುತ್ತಿದ್ದವು.
ಒಟ್ಟಿನಲ್ಲಿ ಕೊರೊನಾ ಲಾಕ್‌ಡೌನ್ ನಿಂದ ಕಂಗೆಟ್ಟಿದ್ದ ಜನತೆ ನಿಟ್ಟುಸಿರು ಬಿಟ್ಟರು. ಆದರೆ ಮಾಸ್ಕ್, ಸಾಮಾಜಿಕ ಅಂತರ ಪಾಲನೆ ಅಷ್ಟಾಗಿ ಕಂಡು ಬರಲಿಲ್ಲ.