ಸಾಮಾಜಿಕ ಜಾಲತಾಣದಲ್ಲಿ ತರಳಬಾಳು ಹುಣ್ಣಿಮೆ
ಸಿರಿಗೆರೆ, ಫೆ.11- ಬಳ್ಳಾರಿ ಜಿಲ್ಲೆ ಕೊಟ್ಟೂರು ಪಟ್ಟಣದಲ್ಲಿ ಇದೇ ಫೆಬ್ರವರಿ ಮಾಹೆಯಲ್ಲಿ ನಡೆಯಬೇಕಾಗಿದ್ದ ತರಳಬಾಳು ಜಗದ್ಗುರು ಬೃಹನ್ಮಠದ ಪ್ರಮುಖ ವಾರ್ಷಿಕ ಆಚರಣೆ ಯಾದ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಮುಂದೂಡಲಾಗಿದೆ ಎಂದು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಪ್ರಕಟಿಸಿದ್ದಾರೆ.
ದೇಶದಲ್ಲೆಡೆ ಕೋವಿಡ್‍ನ ಪ್ರಭಾವ ಇರುವ ಸಂದರ್ಭದಲ್ಲಿ ಅದರ ಜವಾಬ್ದಾರಿಯನ್ನು ನಿರ್ವಹಿಸ ಬೇಕಾದ ಹೊಣೆಗಾರಿಕೆ ಇರುವು ದರಿಂದ ಈ ಕ್ರಮ ಅಗತ್ಯ ವಾಗಿದೆ. 9 ದಿನಗಳ ಕಾಲ ನಡೆ ಯುವ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ನಿತ್ಯವೂ ಸಾವಿರಾರು ಜನರು ಭಾಗಿಯಾಗುತ್ತಾರೆ. ಕೋವಿಡ್ ಕಾರಣದಿಂದ ಭಕ್ತರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾದರೆ ತಮಗೆ ವೇದನೆಯಾಗುತ್ತದೆ. ಆ ಸಂಕಟವನ್ನು ತಾಳಿಕೊಳ್ಳಲು ತಮಗೆ ಸಾಧ್ಯವಾಗುವುದಿಲ್ಲ. ಗುರುಗಳಾದ ನಮಗೆ ಆರೋಗ್ಯದ ತೊಂದರೆ ಆದಲ್ಲಿ ರಾಜ್ಯದ ಚುಕ್ಕಾಣಿ ಹಿಡಿದಿರುವ ಸರ್ಕಾರ, ಮುಖ್ಯಮಂತ್ರಿಗಳು, ಸಚಿವರು, ಆಡಳಿತ ವ್ಯವಸ್ಥೆ ನಮ್ಮ ಆರೋಗ್ಯದ ಕಡೆ ಗಮನ ನೀಡುತ್ತದೆ. ಆದರೆ ಜನಸಾಮಾನ್ಯರಾದ ಭಕ್ತರಿಗೆ ಆರೋಗ್ಯದಲ್ಲಿ ಏರುಪೇರಾದಲ್ಲಿ ನೋಡಿಕೊಳ್ಳುವುದು ಸುಲಭವಲ್ಲ. ಈ ಹಿನ್ನೆಲೆಯಲ್ಲಿ ಕೊಟ್ಟೂರಿನಲ್ಲಿ ನಡೆಯ ಬೇಕಾಗಿದ್ದ ತರಳಬಾಳು ಹುಣ್ಣಿಮೆಯನ್ನು ಒಂದು ವರ್ಷ ಮುಂದಕ್ಕೆ ಹಾಕಿದ್ದೇವೆ ಎಂದು ಜಗದ್ಗುರುಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರಳ ಹುಣ್ಣಿಮೆ, ಜಾಲತಾಣದಲ್ಲಿ ಪ್ರಸಾರ : ತರಳಬಾಳು ಹುಣ್ಣಿಮೆ ಮಹೋತ್ಸವ ರದ್ದಾದಾಗೆಲ್ಲ ಸರಳವಾಗಿ ಒಂದು ದಿನದ ಆಚರಣೆಯಾಗಿ ಸಿರಿಗೆರೆಯ ಮಠದ ಆವರಣದಲ್ಲಿ ಹುಣ್ಣಿಮೆ ನಡೆಯುತ್ತಿತ್ತು. ಆದರೆ, ಈ ಬಾರಿ ಆ ಯೋಚನೆಯನ್ನೂ ಸಹ ಕೈಬಿಡಲಾಗಿದ್ದು, ಹುಣ್ಣಿಮೆ ಸಂದೇಶವು ಭಕ್ತರಿಗೆ ತಲುಪುವಂತೆ 9 ದಿನಗಳ ಕಾಲ ನಿತ್ಯವೂ ಸಂದೇಶವನ್ನು ಸಾಮಾಜಿಕ ಜಾಲತಾಣದ ಮೂಲಕ ಪ್ರಸಾರ ಮಾಡುವಂತೆ ಏರ್ಪಾಟು ಮಾಡಲಾಗಿದೆ. ಜಗತ್ತಿನೆಲ್ಲೆಡೆಯಿಂದ ಭಕ್ತರು ತಮ್ಮ ಮೊಬೈಲ್ ಫೋನ್ ಮೂಲಕವೂ ಸಹ ತರಳಬಾಳು ಹುಣ್ಣಿಮೆ ಮಹೋತ್ಸವದ ಸಂದೇಶಗಳನ್ನು ವೀಕ್ಷಿಸಬಹುದು ಎಂದು ಸ್ವಾಮೀಜಿ ಹೇಳಿದರು.