ಲಸಿಕೆ ನಂತರ ಸಿಎಎ ಜಾರಿ

ಲಸಿಕೆ ನಂತರ ಸಿಎಎ ಜಾರಿ - Janathavaniಪೌರತ್ವ ತಿದ್ದುಪಡಿ ಕಾಯ್ದೆ (ಸಿ.ಎ.ಎ.) ಜಾರಿಗೆ ತರುವುದರಿಂದ ಭಾರತೀಯ ಅಲ್ಪಸಂಖ್ಯಾತರ ಸ್ಥಾನಮಾನದ ಮೇಲೆ ಯಾವುದೇ ಪರಿಣಾಮವಾಗುವು ದಿಲ್ಲ. ಆದರೂ, ಪ್ರತಿಪಕ್ಷಗಳು ಅಲ್ಪಸಂಖ್ಯಾತರ ದಾರಿ ತಪ್ಪಿಸುತ್ತಿವೆ ಎಂದು ಷಾ ಆರೋಪಿಸಿದ್ದಾರೆ.

ಠಾಕೂರ್‌ನಗರ್ (ಪಶ್ಚಿಮ ಬಂಗಾಳ), ಫೆ. 11 – ಕೊರೊನಾ ಲಸಿಕೆ ಪ್ರಕ್ರಿಯೆ ಮುಗಿದ ನಂತರ ವಲಸೆ ಬಂದವರಿಗೆ ಸಿ.ಎ.ಎ. ಅಡಿ ಭಾರತೀಯ ಪೌರತ್ವ ನೀಡುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ತಿಳಿಸಿದ್ದಾರೆ.

ನೂತನ ಪೌರತ್ವ ಕಾಯ್ದೆ ಜಾರಿಗೆ ತರುವುದಾಗಿ ಮೋದಿ ಸರ್ಕಾರ 2018ರಲ್ಲಿ ಭರವಸೆ ನೀಡಿತ್ತು. 2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಈ ಭರವಸೆ ಈಡೇರಿಸಿದೆ ಎಂದವರು ಹೇಳಿದ್ದಾರೆ.

ದೇಶಕ್ಕೆ 2020ರಲ್ಲಿ ಕೊರೊನಾ ಸೋಂಕು ಅಪ್ಪಳಿಸಿದಾಗ ಪೌರತ್ವ ಕಾಯ್ದೆ ಜಾರಿಯನ್ನು ತಡೆಯಲಾಗಿತ್ತು ಎಂದು ಅಮಿತ್ ಷಾ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಳ್ಳು ಭರವಸೆ ನೀಡಿದ್ದಾರೆ. ಸಿ.ಎ.ಎ. ವಿರೋಧಿಸುತ್ತಿರುವ ಅವರು, ಅದನ್ನು ಎಂದೂ ಜಾರಿಗೆ ತರುವುದಿಲ್ಲ ಎಂದಿದ್ದಾರೆ. ಬಿಜೆಪಿ ಸದಾ ತಾನು ನೀಡಿರುವ ಭರವಸೆ ಈಡೇರಿಸಿದೆ. ನಾವು ಈ ಕಾನೂನು ಜಾರಿಗೆ ತಂದಿದ್ದೇವೆ, ವಲಸಿಗರಿಗೆ ಪೌರತ್ವ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.

ಕೊರೊನಾ ಲಸಿಕೆ ನೀಡುವ ಪ್ರಕ್ರಿಯೆ ಮುಗಿದ ನಂತರ ಸಿ.ಎ.ಎ. ಅಡಿ ಪೌರತ್ವ ನೀಡುವ ಪ್ರಕ್ರಿಯೆ ಆರಂಭವಾಗಲಿದೆ. ನೀವೆಲ್ಲರೂ ಭಾರತದ ಗೌರವಾನ್ವಿತ ನಾಗರಿಕರಾಗಲಿದ್ದೀರಿ ಎಂದು ಮತುವಾ ಸಮುದಾಯದ ಸಮಾವೇಶ ಉದ್ದೇಶಿಸಿ ಮಾತನಾಡುತ್ತಿದ್ದ ಅವರು ಹೇಳಿದ್ದಾರೆ.

ಮತುವಾ ಸಮುದಾಯದವರು ಪೂರ್ವ ಪಾಕಿಸ್ತಾನದ ವರಾಗಿದ್ದಾರೆ. ದೇಶ ವಿಭಜನೆ ಹಾಗೂ ಬಾಂಗ್ಲಾದೇಶ ರಚನೆಯ ಸಂದರ್ಭಗಳಲ್ಲಿ ದುರ್ಬಲ ಹಿಂದೂ ಸಮು ದಾಯಕ್ಕೆ ಸೇರಿದ ಅವರು ಭಾರತಕ್ಕೆ  ಬಂದಿದ್ದರು. ಇವರಲ್ಲಿ ಕೆಲವರಿಗೆ ಭಾರತೀಯ ಪೌರತ್ವ ನೀಡಲಾಗಿದೆ. ಆದರೆ, ದೊಡ್ಡ ಪ್ರಮಾಣದ ಜನರಿಗೆ ಇನ್ನೂ ಪೌರತ್ವ ಸಿಕ್ಕಿಲ್ಲ.

ರಾಜ್ಯದಲ್ಲಿ ಸುಮಾರು 30 ಲಕ್ಷ ಮತುವಾ ಸಮುದಾಯದವರಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಕನಿಷ್ಠ ನಾಲ್ಕು ಲೋಕಸಭೆ ಹಾಗೂ 30 ವಿಧಾನಸಭೆಗಳಲ್ಲಿ ಪ್ರಭಾವಿಗಳಾಗಿದ್ದಾರೆ. ಈ ಸಮುದಾಯ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುತ್ತಾ ಬಂದಿತ್ತು. ಆದರೆ, 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಸಿ.ಎ.ಎ. ಜಾರಿ ವಿಳಂಬ ಹಾಗೂ ಅನುಮಾನ ಗಳಿಂದಾಗಿ ಈ ಸಮುದಾಯ ಕೈ ಬಿಟ್ಟು ಹೋಗಲಿದೆ ಎಂದು ರಾಜ್ಯ ಬಿಜೆಪಿ ನಾಯಕತ್ವದ ಒಂದು ವರ್ಗ ಕಳವಳ ವ್ಯಕ್ತಪಡಿಸಿತ್ತು.

ಮಮತಾ ಮುಖ್ಯಮಂತ್ರಿಯಾಗಿರದೇ ಇದ್ದರೆ ಅವರು ಸಿ.ಎ.ಎ. ಜಾರಿಗೆ ಅಡ್ಡಿಪಡಿಸಲು ಸಾಧ್ಯವಿಲ್ಲ ಎಂದೂ ಷಾ ಹೇಳಿದ್ದಾರೆ. ಈ ವರ್ಷ ಏಪ್ರಿಲ್ – ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆ ಇದೆ.

ದೇಶದ ಅಲ್ಪಸಂಖ್ಯಾತರಾರೂ ಪೌರತ್ವ ಕಳೆದುಕೊಳ್ಳು ವುದಿಲ್ಲ ಎಂದು ದೇಶದ ಗೃಹ ಸಚಿವನಾಗಿ ನಾನು ಭರವಸೆ ನೀಡಲು ಬಯಸುತ್ತೇನೆ. ಸಿ.ಎ.ಎ. ವಲಸಿಗರಿಗೆ ಪೌರತ್ವ ನೀಡುವ ಕಾಯ್ದೆಯಾಗಿದೆ. ಇದು ಯಾರೊಬ್ಬರ ಪೌರತ್ವ  ವನ್ನೂ ಕಸಿಯುವುದಿಲ್ಲ ಎಂದು ಅಮಿತ್ ಷಾ ಹೇಳಿದ್ದಾರೆ.

error: Content is protected !!