ಅಣಕು ಶವ ಯಾತ್ರೆ ನಡೆಸಿ ಪ್ರತಿಭಟನೆ, ಎಸಿಗೆ ಮನವಿ
ದಾವಣಗೆರೆ, ಫೆ.11- ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬೆಲೆ ಏರಿಕೆಯ ಅಣಕು ಶವ ಯಾತ್ರೆ ಮುಖೇನ ಇಂದು ನಗರದಲ್ಲಿ ಪ್ರತಿಭಟಿಸಿದರು.
ಅಂಬೇಡ್ಕರ್ ವೃತ್ತದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಗರ ಪಾಲಿಕೆ ಮುಂಭಾಗ ಆಗಮಿಸಿದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಡುಗೆ ಸಿಲಿಂಡರ್, ಹಳೆಯ ದ್ವಿಚಕ್ರ ವಾಹನವನ್ನು ಸಿದ್ದಿಗೆ ಕಟ್ಟಿ ಅಣಕು ಶವಯಾತ್ರೆಯ ಪ್ರತಿಭಟನಾ ಮೆರವಣಿಗೆ ಮುಖೇನ ಬೆಲೆ ಏರಿಕೆಯ ವಿರುದ್ಧದ ಘೋಷಣೆಯ ನಾಮಫಲಕಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಉಪ ವಿಭಾಗಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ನಂತರ ನಗರ ಪಾಲಿಕೆ ಮುಂಭಾಗ ಬಹಿರಂಗ ಸಭೆ ನಡೆಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನಸಾಮಾನ್ಯರಿಗೆ ಬೆಲೆ ಏರಿಕೆಯ ಹೊರೆಯುಂಟು ಮಾಡಿ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸಿರುವುದಾಗಿ ಅಸಮಾಧಾನ ವ್ಯಕ್ತಪಡಿಸಿದರು. ರೈತ ಸಮುದಾಯಕ್ಕೆ ಮಾರಕವಾದ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ ಮಾತನಾಡಿ, 75 ದಿನಗಳಿಂದ ದೆಹಲಿಯ ಗಡಿಗಳಲ್ಲಿ ಚಳುವಳಿ ನಡೆಸುತ್ತಿರುವ ಲಕ್ಷಾಂತರ ಅನ್ನದಾತರ ನೋವು, ಅಳಲು, ಕಷ್ಟ ಕಾರ್ಪಣ್ಯಗಳಿಗೆ ಕಿವುಡಾಗಿ ಕೇಂದ್ರ ಸರ್ಕಾರವು ಚಳವಳಿಗೆ ಹಲವಾರು ಅಡೆತಡೆಗಳನ್ನೊಡ್ಡಿ ದಾರ್ಷ್ಟ್ಯವನ್ನು ಮೆರೆಯುತ್ತಿದೆ. ಮಂತ್ರಿಗಳ ಜೊತೆಗೆ ನಡೆದ 11 ಸುತ್ತಿನ ಮಾತುಕತೆಗಳ ನಂತರವೂ ರೈತರ ಬೇಡಿಕೆಗಳನ್ನು ಈಡೇರಿಸುವ ಕುರಿತಾದ ಯಾವುದೇ ಬೆಳವಣಿಗೆಯಾಗಿಲ್ಲ ಎಂದು ಆಕ್ಷೇಪಿಸಿದರು.
ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಮಾತನಾಡಿ, ರೈತರ ಅಳಲುಗಳಿಗೆ ಸ್ಪಂದಿಸುವುದು ಸರ್ಕಾರಗಳ ನೈತಿಕ ಕರ್ತವ್ಯ ಮತ್ತು ಹೊಣೆಗಾರಿಕೆಯಾಗಿದೆ. ಈಗಿನ ಕೇಂದ್ರ ಸರ್ಕಾರವು ದೃಢ ಸಂಕಲ್ಪದೊಂದಿಗೆ ರೈತ-ವಿರೋಧಿ ಧೋರಣೆಯೊಂದಿಗೆ ರೈತರ ಜೀವ ಮತ್ತು ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ದೂರಿದರು.
ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಸ್. ಬಸವಂತಪ್ಪ, ಕೆಪಿಸಿಸಿ ವೀಕ್ಷಕ ಅಮೃತೇಶ್ ಮತ್ತಿತರರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಪ್ರತಿಭಟನೆಯಲ್ಲಿ ನಗರ ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್, ಅಬ್ದುಲ್ ಲತೀಫ್, ಜಿ.ಎಸ್. ಮಂಜುನಾಥ್, ಜಾಕೀರ್, ಸೈಯದ್ ಚಾರ್ಲಿ, ಪಾಮೇನಹಳ್ಳಿ ನಾಗರಾಜ್, ಶ್ರೀಮತಿ ಸುಧಾ ಇಟ್ಟಿಗುಡಿ ಮಂಜುನಾಥ್, ಎಂ.ಎಸ್. ಕೊಟ್ರಯ್ಯ, ಶಾಮನೂರು ಟಿ. ಬಸವರಾಜ್, ಆರೀಫ್ ಖಾನ್, ಎಸ್. ಮಲ್ಲಿಕಾರ್ಜುನ್, ಕೆ.ಜಿ.ಶಿವಕುಮಾರ್, ನೀಲಗಿರಿಯಪ್ಪ, ಸೋಮ್ಲಾಪುರ ಹನುಮಂತಪ್ಪ, ಅಯೂಬ್ ಪೈಲ್ವಾನ್, ಕಿಸಾನ್ ಘಟಕದ ಬಾತಿ ಶಿವಕುಮಾರ್, ಅಜ್ಜಪ್ಪ ಪವಾರ್, ಎಸ್.ಎಂ. ರುದ್ರೇಶ್, ಅಣಜಿ ಅಂಜಿನಪ್ಪ, ಹೆಚ್. ಜಯಣ್ಣ, ಆನೆಕೊಂಡ ಲಿಂಗರಾಜ್, ಕಲ್ಲೇಶಪ್ಪ, ಎಂ. ಮಂಜುನಾಥ್, ಕೊಡಪಾನ ದಾದಾಪೀರ್, ಸುರಭಿ ಶಿವಮೂರ್ತಿ, ಸಿಮೇಎಣ್ಣೆ ಪರಮೇಶ್, ಅಲೆಕ್ಸಾಂಡರ್ (ಜಾನ್) ಇಮ್ತಿಯಾಜ್, ರಂಗನಾಥ್, ಡೋಲಿ ಚಂದ್ರು, ಅಬ್ದುಲ್ ಜಬ್ಬಾರ್, ದೇವರಹಟ್ಟಿ ಶಮಿ, ಎಸ್. ರವಿ, ನಂಜಾನಾಯ್ಕ, ಹರೀಶ್ ಕೆ.ಎಲ್.ಬಸಾಪುರ, ಮಹಿಳಾ ಕಾಂಗ್ರೆಸ್‍ನ ಅನಿತಾಬಾಯಿ ಮಾಲತೇಶ್, ಸುಷ್ಮಾ ಪಾಟೀಲ್, ಕವಿತಾ ಚಂದ್ರಶೇಖರ್, ಗೀತಾ ಚಂದ್ರಶೇಖರ್, ಎಲ್.ಹೆಚ್.ಸಾಗರ್, ಲಿಯಾಕತ್ ಅಲಿ, ಪ್ರವೀಣ್ ಫಾರ್ಮ, ಶ್ರೀಕಾಂತ್ ಬಗೇರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.