ಬೆಂಗಳೂರು, ಫೆ. 11 – ನ್ಯಾಯಾಂಗದ ಕಲಾಪಗಳಿಗೆ ಬಹಿಷ್ಕಾರ ಹಾಕುವಂತೆ ಕರೆ ನೀಡಿದ ದಾವಣಗೆರೆ ಹಾಗೂ ಮಂಡ್ಯ ಜಿಲ್ಲೆಗಳ ವಕೀಲರ ಒಕ್ಕೂಟದ ಕೆಲ ಪದಾಧಿಕಾರಿಗಳ ವಿರುದ್ಧ ಕರ್ನಾಟಕ ಹೈಕೋರ್ಟ್ ಸ್ವಯಂ ಪ್ರೇರಿತ ಕ್ರಮಕ್ಕೆ ಮುಂದಾಗಿದೆ.
ಬಹಿಷ್ಕಾರಕ್ಕೆ ನೀಡಿರುವ ಕರೆ ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆ ಎಂಬ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ ಓಕ ಹಾಗೂ ನ್ಯಾಯಮೂರ್ತಿ ಸಚಿನ್ ಶಂಕರ್ ಮದ್ಗುಂ ಅವರನ್ನು ಒಳಗೊಂಡ ಪೀಠ ನ್ಯಾಯಾಂಗ ನಿಂದನೆ ಕ್ರಮಕ್ಕೆ ಮುಂದಾಗಿದೆ.
ಮಂಡ್ಯ ಹಾಗೂ ದಾವಣಗೆರೆ ಜಿಲ್ಲೆಗಳ ವಕೀಲರ ಒಕ್ಕೂಟ ಜನವರಿ 4ರಿಂದ ಫೆಬ್ರವರಿ 8ರ ನಡುವೆ ಹಲವಾರು ದಿನಾಂಕಗಳನ್ನು ಕಲಾಪಗಳಿಗೆ ಬಹಿಷ್ಕಾರ ಹಾಕಲು ತಿಳಿಸಿತ್ತು ಎಂದು ನ್ಯಾಯಾಲಯದ ರಿಜಿಸ್ಟ್ರಿಗೆ ವರದಿ ಸಲ್ಲಿಸಲಾಗಿತ್ತು.
ಬಹಿಷ್ಕಾರ ಹಾಕಲು ಕಾರಣಗಳೇನೇ ಇದ್ದರೂ ಸಹ, ಅಂತಹ ಕ್ರಮಕ್ಕೆ ಮುಂದಾಗಬಾರದು ಎಂದು ಮುಖ್ಯ ನ್ಯಾಯಮೂರ್ತಿ ಫೆಬ್ರವರಿ 3ರಂದು ಬಹಿರಂಗ ಕರೆ ನೀಡಿದ್ದರು. ಇದಾದ ನಂತರವೂ ವಕೀಲರ ಒಕ್ಕೂಟಗಳು ನ್ಯಾಯಾಂಗದ ಕಲಾಪಗಳಿಂದ ದೂರ ಉಳಿಯಲು ಕರೆ ನೀಡಿವೆ ಎಂಬದನ್ನು ಹೈಕೋರ್ಟ್ ಪೀಠ ಪರಿಗಣಿಸಿದೆ.
ನ್ಯಾಯಾಂಗದ ಕಲಾಪಗಳಿಗೆ ಬಹಿಷ್ಕಾರ ಹಾಕಲು ಕರೆ ನೀಡುವುದರಿಂದ ಕಕ್ಷಿದಾರರಿಗೆ ಹಾಗೂ ವಕೀಲರಿಗೆ ತೊಂದರೆಯಾಗುತ್ತದೆ ಎಂದು ಸುಪ್ರೀಂ ಕೋರ್ಟ್ ತೀರ್ಪುಗಳಲ್ಲಿ ತಿಳಿಸಲಾಗಿದೆ. ಅಲ್ಲದೇ, ಕೊರೊನಾ ನಂತರ ಈಗಷ್ಟೇ ಸಾಮಾನ್ಯ ಕೋರ್ಟ್ ಕಲಾಪಗಳು ಸಾಧ್ಯವಾಗುತ್ತಿರುವ ಸಮಯದಲ್ಲೇ ಬಹಿಷ್ಕಾರಕ್ಕೆ ಕರೆ ನೀಡಿರುವುದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಹೈಕೋರ್ಟ್ ಪೀಠ ಹೇಳಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವಕೀಲರು ಮುಷ್ಕರ ನಡೆಸುವು, ಬಹಿಷ್ಕಾರ ಹಾಕುವ ಇಲ್ಲವೇ ಸಾಂಕೇತಿಕ ಪ್ರತಿಭಟನೆ ನಡೆಸಲೂ ಸಹ ಹಕ್ಕು ಹೊಂದಿಲ್ಲ. ಬಹಿಷ್ಕಾರಕ್ಕೆ ಕರೆ ನೀಡಬಾರದು. ಇಂತಹ ಕ್ರಮಗಳು ನ್ಯಾಯಿಕ ಆಡಳಿತದಲ್ಲಿ ಮದ್ಯ ಪ್ರವೇಶಿಸದಂತೆ ಫೆಬ್ರವರಿ 3ರಂದು ವಕೀಲರ ಒಕ್ಕೂಟಗಳಿಗೆ ಪತ್ರ ಬರೆಯಲಾಗಿತ್ತು ಎಂದೂ ಹೈಕೋರ್ಟ್ ಪೀಠ ತಿಳಿಸಿದೆ.