ಡಾ. ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಸದ ಸಿದ್ದೇಶ್ವರ
ದಾವಣಗೆರೆ, ಏ. 14 – ನಗರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮೇ ಅಂತ್ಯಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ಡಾ. ಬಾಬು ಜಗಜೀವನರಾಂ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಸಂದರ್ಭದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರ ಪಾಲಿಕೆಗಳ ಸಂಯುಕ್ತಾ ಶ್ರಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ ದಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ.
ಬಡ ಕುಟುಂಬದಲ್ಲಿ ಜನಿಸಿದ್ದ ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿಯಾದರು, ಮಾತೃತ್ವದ ರಜೆಯನ್ನು ಮೊದಲ ಬಾರಿ ಕಲ್ಪಿಸಿದರು, ಕಾರ್ಮಿಕರ ಕೆಲಸದ ಅವಧಿಯನ್ನು 12 ಗಂಟೆಯಿಂದ 8 ಗಂಟೆಗೆ ಇಳಿಸಿದರು. ಹಿಂದೂ ಸಂಹಿತೆಯ ಅನ್ವಯ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡಲು ಸಾಧ್ಯವಾಗದೇ ಇದ್ದಾಗ 1951ರಲ್ಲಿ ಕಾನೂನು ಸಚಿವ ಹುದ್ದೆಗೆ ರಾಜೀನಾಮೆ ನೀಡಲೂ ಹಿಂಜರಿಯಲಿಲ್ಲ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಸ್.ಎ. ರವೀಂದ್ರನಾಥ್, ಬಹುತ್ವವನ್ನು ಬಿಂಬಿಸುವ ವಿಶ್ವದಲ್ಲೇ ಉತ್ತಮವಾದ ಸಂವಿಧಾನವನ್ನು ಅಂಬೇಡ್ಕರ್ ಒದಗಿಸಿದ್ದಾರೆ. ಇಂತಹ ಸಂವಿಧಾನವನ್ನು ಅರಗಿಸಿಕೊಂಡು ಜನರಿಗೆ ಒಳ್ಳೆಯ ಕೆಲಸ ಮಾಡಬೇಕು ಎಂದರು.
ಅಂಬೇಡ್ಕರ್ ಭವನದ ಸ್ಥಳಕ್ಕೆ ಒಮ್ಮತವಿಲ್ಲ
ಸಂಸದ ಜಿ.ಎಂ. ಸಿದ್ದೇಶ್ವರ ಅವರು ಅಂಬೇಡ್ಕರ್ ಭವನವನ್ನು ಆರ್.ಟಿ.ಒ. ಕಚೇರಿ ಎದುರು ನಿರ್ಮಿಸಲಾಗುವುದು ಎಂದು ಹೇಳಿದರಾದರೂ, ಅದಕ್ಕೆ ಆಕ್ಷೇಪಗಳು ಎದುರಾದವು.
ಸಿದ್ದೇಶ್ವರ ಅವರು ಸಭೆಯಲ್ಲಿ ಈ ಹೇಳಿಕೆ ನೀಡಿದಾಗ ಆಕ್ಷೇಪಿಸಿದ ಕೆಲವರು, ನಗರದ ಮಧ್ಯ ಭಾಗದಲ್ಲಿರುವ ತೋಟಗಾರಿಕಾ ಕಚೇರಿ ಜಾಗದಲ್ಲಿ ಭವನ ನಿರ್ಮಾಣ ಆಗಬೇಕು ಎಂದು ಒತ್ತಾಯಿಸಿದರು. ಆಗ ಸಭೆಯಲ್ಲಿ ಒಬ್ಬರು ಹೈಸ್ಕೂಲ್ ಮೈದಾನದಲ್ಲೇ ಭವನ ನಿರ್ಮಿಸಿ ಎಂಬ ಕೂಗನ್ನೂ ಎಬ್ಬಿಸಿದರು!
ಮಧ್ಯ ಪ್ರವೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಸ್ಥಳದ ಬಗ್ಗೆ ಮುಖಂಡರ ಹಾಗೂ ಜನಪ್ರತಿನಿಧಿಗಳ ಅಭಿಪ್ರಾಯ ಪಡೆದು, ಸಿದ್ದೇಶ್ವರ ಅವರ ಸೂಚನೆಯಂತೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಚರ್ಚೆಗೆ ತೆರೆ ಎಳೆದರು.
ಇದಕ್ಕೂ ಮುಂಚೆ ಮಾತನಾಡಿದ್ದ ತಾ.ಪಂ. ಸದಸ್ಯ ಆಲೂರು ನಿಂಗರಾಜ್, 2009ರಿಂದಲೂ ಅಂಬೇಡ್ಕರ್ ಭವನ ನಿರ್ಮಾಣದ ವಿಷಯ ನೆನೆಗುದಿಯಲ್ಲಿದೆ. ಈ ಬಗ್ಗೆ ಜನಪ್ರತಿನಿಧಿಗಳು ನಿರ್ಧಾರ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಈ ಬಗ್ಗೆ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಶಾಸಕ ಎಸ್.ಎ. ರವೀಂದ್ರನಾಥ್, ನಗರದಲ್ಲಿರುವ ಉತ್ತಮ ಜಾಗಗಳು ಈಗಾಗಲೇ ಖಾಲಿ ಆಗಿವೆ. ಬಹುಶಃ ಅಂಬೇಡ್ಕರ್ 30 ವರ್ಷ ಮುಂಚೆ ಹುಟ್ಟಿದ್ದಿದ್ದರೆ ಉತ್ತಮ ಜಾಗ ಸುಲಭವಾಗಿ ಸಿಗತ್ತಿತ್ತೇನೋ ಎಂದರು.
ಜನತಾ ಪಕ್ಷದ ಸರ್ಕಾರ ಇದ್ದಾಗ ಮೈತ್ರಿ ಧರ್ಮ ಪಾಲಿಸದ ಕಾರಣ ಬಾಬು ಜಗಜೀವನರಾಂ ಅವರು ಪ್ರಧಾನ ಮಂತ್ರಿ ಆಗಲು ಸಾಧ್ಯವಾಗಲಿಲ್ಲ. 1980ರಲ್ಲಿ ಜನತಾ ಪಕ್ಷ ಬಾಬು ಜಗಜೀವರಾಂ ಅವರನ್ನು ಪ್ರಧಾನ ಮಂತ್ರಿಯಾಗಿ ಬಿಂಬಿಸಿ ಚುನಾವಣಾ ಪ್ರಚಾರ ಮಾಡಿತ್ತು. ಆದರೆ, ಜಗಜೀವನರಾಂ ಅವರ ಸಮುದಾಯದ ಜನರೇ ಅವರಿಗೆ ಮತ ಹಾಕದೇ ಕಾಂಗ್ರೆಸ್ಗೆ ಮತ ಹಾಕಿದರು ಎಂದು ಹೇಳಿದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಅಭಿವೃದ್ಧಿಯ ಫಲವನ್ನು ಎಲ್ಲರಿಗೂ ಸಮನಾಗಿ ತಲುಪಿಸಬೇಕಿದೆ. ಮಕ್ಕಳಿಗೆ ಸಂವಿಧಾನದ ಆಶಯಗಳನ್ನು ತಿಳಿಸಬೇಕು ಎಂದು ಹೇಳಿದರು.
ಬಾಬು ಜಗಜೀವನರಾಂ ಕುರಿತು ದಾವಣಗೆರೆ ವಿ.ವಿ.ಯ ಡಾ. ಬಾಬು ಜಗಜೀವನರಾಂ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಹೆಚ್. ವಿಶ್ವನಾಥ್ ಹಾಗೂ ಅಂಬೇಡ್ಕರ್ ಕುರಿತು ನಿವೃತ್ತ ಉಪನ್ಯಾಸಕ ಪ್ರೊ. ಟಿ. ರಾಜಪ್ಪ ಉಪನ್ಯಾಸ ನೀಡಿದರು.
ಈ ವೇಳೆ ಹೆಗ್ಗೆರೆ ರಂಗಪ್ಪ ಹಾಗೂ ಐರಣಿ ಚಂದ್ರು ಅವರಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ವೇದಿಕೆಯ ಮೇಲೆ ಜಿ.ಪಂ. ಅಧ್ಯಕ್ಷೆ ಕೆ.ವಿ. ಶಾಂತಕುಮಾರಿ, ಶಾಸಕ ಹಾಗೂ ಲಿಡ್ಕರ್ ನಿಗಮದ ಅಧ್ಯಕ್ಷ ಪ್ರೊ. ಎನ್. ಲಿಂಗಣ್ಣ, ಪಾಲಿಕೆ ಮೇಯರ್ ಎಸ್.ಟಿ. ವೀರೇಶ್, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಸಾಕಮ್ಮ ಗಂಗಾಧರನಾಯ್ಕ, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಎನ್. ಲೋಕೇಶ್ವರಪ್ಪ, ಜಿ.ಪಂ. ಸದಸ್ಯರಾದ ಬಸವಂತಪ್ಪ, ತೇಜಸ್ವಿ ಪಟೇಲ್, ಎಸ್ಪಿ ಹನುಮಂತರಾಜ, ಎಡಿಸಿ ಪೂಜಾರ್ ವೀರಮಲ್ಲಪ್ಪ, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ರೇಷ್ಮ ಜಿ. ಕೌಸರ್ ಮತ್ತಿತರರು ಉಪಸ್ಥಿತರಿದ್ದರು.
ಗಂಗಾಧರ ನಿಟ್ಟೂರು ನಿರೂಪಿಸಿದರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಮತ್ತಿತರರು ಉಪಸ್ಥಿತರಿದ್ದರು.