ದಾವಣಗೆರೆ, ಏ. 14 -ಜಿಲ್ಲೆಯಲ್ಲಿ ಲಸಿಕೆಯ ಕೊರತೆ ಇಲ್ಲ. ಪ್ರಸಕ್ತ 18 ಸಾವಿರ ಡೋಸ್ ಕೋವಿಶೀಲ್ಡ್ ಲಸಿಕೆ ಇದೆ. ಖಾಲಿಯಾದ ನಂತರ ಮತ್ತೆ ಪೂರೈಕೆ ಮಾಡುವುದಾಗಿ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದ್ದಾರೆ.
ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಲಸಿಕೆ ಅಭಿಯಾನದಲ್ಲಿ ಹೆಚ್ಚು ಸಾಧನೆ ಮಾಡುವವರಿಗೆ ಹೆಚ್ಚು ಲಸಿಕೆ ಪೂರೈಕೆ ಮಾಡಲಾಗುವುದು ಎಂದು ಸರ್ಕಾರದಿಂದ ತಿಳಿಸಲಾಗಿದೆ ಎಂದವರು ಹೇಳಿದ್ದಾರೆ.
45 ವರ್ಷ ಮೀರಿದ ಜಿಲ್ಲೆಯ 4.17 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಈ ಗುರಿ ತಲು ಪಲು ಆರೋಗ್ಯ ಇಲಾಖೆಯ ಜೊತೆಗೆ ಪಾಲಿಕೆ ಸಿಬ್ಬಂದಿ, ಪಾಲಿಕೆ ಸದಸ್ಯರು ಹಾಗೂ ಧರ್ಮ ಗುರುಗಳ ಜೊತೆಗೂಡಿ ಕೆಲಸ ಮಾಡಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ 1,882 ಬೆಡ್ಗಳು, 93 ವೆಂಟಿಲೇಟರ್ಗಳು ಹಾಗೂ ಎಂ.ಐ.ಸಿ.ಯು. ಘಟಕಗಳನ್ನು ಸಿದ್ಧ ಮಾಡಿಕೊಂಡಿದ್ದೇವೆ ಎಂದ ಬೀಳಗಿ, ಪ್ರಸಕ್ತ 147 ಬೆಡ್ಗಳಲ್ಲಿ ಮಾತ್ರ ರೋಗಿಗಳಿದ್ದಾರೆ ಎಂದರು.
ಜಿಲ್ಲೆಯಲ್ಲಿ ಪತ್ತೆಯಾಗಿರುವ ಬಹುತೇಕ ಸೋಂಕಿತರು ಲಕ್ಷಣ ರಹಿತರಾಗಿದ್ದಾರೆ. ಗುಣಮುಖರಾಗಿ ಬಿಡುಗಡೆಯಾಗುವವರ ಸಂಖ್ಯೆಯೂ ಹೆಚ್ಚಾಗಿದೆ ಎಂದ ಅವರು, ಮಾಸ್ಕ್ ಹಾಗೂ ಸಾಮಾಜಿಕ ಅಂತರದಂತಹ ಕೊರೊನಾ ಶಿಷ್ಟಾಚಾರಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದರು.