ಅನ್ಯ ಇಲಾಖೆಯವರಿಗೆ ತಹಶೀಲ್ದಾರ್‌ ಹುದ್ದೆಗೆ ಮುಂಬಡ್ತಿ ಬೇಡ

ಕಂದಾಯ ಇಲಾಖೆ ನೌಕರರ ಮನವಿ

ದಾವಣಗೆರೆ, ಜು. 5- ಅನ್ಯ ಇಲಾಖೆಯ ಅಧಿಕಾರಿಗಳನ್ನು ಕಂದಾಯ ಇಲಾಖೆಯ ತಹಶೀಲ್ದಾರ್‍ ಹುದ್ದೆಗೆ ನೇಮಿಸಬಾರದೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಕಂದಾಯ ಇಲಾಖೆ ನೌಕರರ ಸಂಘದ ಜಿಲ್ಲಾ ಘಟಕ ಜಿಲ್ಲಾಡಳಿತಕ್ಕೆ ಮನವಿ ಮಾಡಿತು.

ಕಂದಾಯ ಇಲಾಖೆಯ ತಹಶೀಲ್ದಾರ್ ಹುದ್ದೆಯು ತಾಲ್ಲೂಕು ಮ್ಯಾಜಿಸ್ಟ್ರೇಟ್ ಗ್ರೇಡ್ ಹುದ್ದೆಯಾಗಿದ್ದು, ರಾಜ್ಯದಲ್ಲಿ 634 ಹುದ್ದೆಗಳಿದ್ದು, ಅವುಗಳಲ್ಲಿ ಶೇ.50ರಷ್ಟು ಮುಂಬಡ್ತಿ, ಇನ್ನು ಶೇ.50ರಷ್ಟು ನೇರ ನೇಮಕಾತಿ ಹುದ್ದೆ ಇದ್ದು, ಈ ಹುದ್ದೆಗಳಿಗೆ ಬೇರೆ ಇಲಾಖೆಯಿಂದ ತಹಶೀಲ್ದಾರ್ ಹುದ್ದೆಗೆ ನೇಮಕಾತಿ ಮಾಡುವುದರಿಂದ ಕಳೆದ 35-40 ವರ್ಷಗಳಿಂದ ಸೇವೆ ಸಲ್ಲಿಸಿದ ಕಂದಾಯ ಇಲಾಖೆಯ ಮೂಲ ನೌಕರರಾದ ಗ್ರಾಮ ಲೆಕ್ಕಾಧಿಕಾರಿಗಳು, ದ್ವಿತೀಯ ದರ್ಜೆ ಸಹಾಯಕರು, ಪ್ರಥಮ ದರ್ಜೆ ಸಹಾಯಕರು, ರಾಜಸ್ವ ನಿರೀಕ್ಷಕರು, ಶಿರಸ್ತೇದಾರರು, ಉಪ ತಹಶೀಲ್ದಾರರು ಮುಂಬಡ್ತಿಯಿಂದ ವಂಚಿತರಾಗಲಿದ್ದಾರೆ ಎಂದು ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಮನವಿ ಮಾಡಿದರು.

ನೇರ ನೇಮಕಾತಿಗೆ ಕೆಎಎಸ್‍ಗೆ ಕೆಪಿಎಸ್ಸಿ ನಡೆಸುವ ಪರೀಕ್ಷೆ ಎದುರಿಸಿ ನೇರವಾಗಿ ಆಯ್ಕೆಯಾಗಿ ಕಂದಾಯ ಇಲಾಖೆಯಲ್ಲಿ ತಮ್ಮ ಪ್ರೊಬೇಷನರಿ ಅವಧಿಯಲ್ಲಿ ಸೂಕ್ತ ತರಬೇತಿ ಪಡೆದಿರುವವರು ತಹಶೀಲ್ದಾರ್ ಹುದ್ದೆಗೆ ನೇಮಕವಾಗುವ ಪದ್ದತಿ ಇದೆ. ಇದರ ಜೊತೆಗೆ ಕಂದಾಯ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿ ಹಲವಾರು ವರ್ಷ ಅನುಭವ ಪಡೆದು ಬಡ್ತಿ ಮೂಲಕ ಕೆಎಎಸ್ ಪದವಿಗೆ ಆಯ್ಕೆ ಆದವರು ಈ ಎರಡು ವರ್ಗಗಳವರು ಮಾತ್ರ ಹುದ್ದೆ ನಿಭಾಯಿಸಲು ಸಮರ್ಥರಿರುತ್ತಾರೆ. ಆದರೆ, ತಹಶೀಲ್ದಾರ್ ಹುದ್ದೆಗೆ ಇತರೆ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ಬಡ್ತಿ ಮೂಲಕ ಕಂದಾಯ ಇಲಾಖೆಗೆ ಬರುವುದು ದುರಾದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.

ಈ ವೇಳೆ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಸ್. ವೀರೇಶ್, ಪ್ರಧಾನ ಕಾರ್ಯದರ್ಶಿ ಕೆ.ಎನ್. ಶ್ರೀನಿವಾಸ್, ಸಂಘಟನಾ  ಕಾರ್ಯದರ್ಶಿ ಬಿ. ದುರುಗೇಶ್, ಜಿಲ್ಲಾ ಗ್ರಾಮ ಲೆಕ್ಕಿಗರ ಸಂಘದ ಅಧ್ಯಕ್ಷ ಲೋಹಿತ್, ಮಾಜಿ ಅಧ್ಯಕ್ಷ ಜಗನ್ನಾಥ, ಜಿಲ್ಲಾ ಸರ್ಕಾರಿ
ನೌಕರರ ಸಂಘದ ಅಧ್ಯಕ್ಷ ಪಾಲಾಕ್ಷಪ್ಪ, ಸದಸ್ಯ ಮರುಳಸಿದ್ದಪ್ಪ, ಶಿರಸ್ತೇದಾರ್ ಕಿರಣ್ ಕುಮಾರ್, ಜಿಲ್ಲಾ ಕಂದಾಯ ನೌಕರರ ಸಂಘದ ಗೌರವಾಧ್ಯಕ್ಷ ಆರ್. ರವಿ, ಖಜಾಂಚಿ ಎನ್. ಬಸವರಾಜ್, ಗೌರವ ಸಲಹೆಗಾರ ಅಜ್ಜಪ್ಪ, ರಾಜ್ಯ ಪರಿಷತ್ ಸದಸ್ಯ
ಧನಂಜಯ ಮತ್ತಿತರರು ಇದ್ದರು.

error: Content is protected !!