ದಾವಣಗೆರೆ, ಜು. 4 – ಕನ್ನಡ ಸಾಹಿತ್ಯ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಕಳೆದ ನಾಲ್ಕು ದಶಕಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸಿರುವ ದಲಿತ ಕವಿ ದಿ|| ಡಾ. ಸಿದ್ದಲಿಂಗಯ್ಯನವರಿಗೆ ಅವರ ಸೇವೆಯನ್ನು ಗೌರವಿಸಿ, ಮರಣೋತ್ತರವಾಗಿ ರಾಷ್ಟ್ರಕವಿ ಎಂದು ಘೋಷಿಸಲಿ ಎಂದು ರಾಜ್ಯ ಸರ್ಕಾರಕ್ಕೆ ಕೆಪಿಸಿಸಿ ರಾಜ್ಯ ವಕ್ತಾರ ಡಿ. ಬಸವರಾಜ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಆಗ್ರಹಿಸಿದ್ದಾರೆ.
ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಮೊನ್ನೆ ಏರ್ಪಡಿಸಲಾಗಿದ್ದ ದಿ|| ಡಾ. ಸಿದ್ದಲಿಂಗಯ್ಯನವರ ನುಡಿ ನಮನ ಕಾರ್ಯಕ್ರಮದಲ್ಲಿ ಸಿದ್ದಲಿಂಗಯ್ಯನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಬಂಡಾಯ ಸಾಹಿತಿ, ದಲಿತ ಕವಿ ಎಂದೇ ಪ್ರಸಿದ್ಧರಾದ ಸಿದ್ದಲಿಂಗಯ್ಯನವರು, ದಲಿತ ಹೋರಾಟ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಕಾವ್ಯ ಸಾಹಿತ್ಯಗಳನ್ನು ರಚಿಸಿದರು. ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದ್ದಾರೆ. ಎರಡು ಬಾರಿ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಸದನದಲ್ಲಿ ಶೋಷಿತರ ಧ್ವನಿಯಾಗಿ ಕೆಲಸ ಮಾಡಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರಗಳ ಅಧ್ಯಕ್ಷರಾಗಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಕನ್ನಡ ನಾಡು – ನುಡಿಗೆ ಶ್ರಮಿಸಿದ್ದಾರೆ ಎಂದು ಸಿದ್ದಲಿಂಗಯ್ಯನವರ
ಸೇವೆಯನ್ನು ಅವರು ಸ್ಮರಿಸಿದರು.
ಅಮೆರಿಕದಲ್ಲಿ ಒಂದು ವೇದಿಕೆಯಲ್ಲಿ ಸಿನಿಮಾ ನಟ-ನಟಿಯರ ಕಾರ್ಯಕ್ರಮವಿತ್ತು. ಅದೇ ಸಮಯದಲ್ಲಿ ಮತ್ತೊಂದು ವೇದಿಕೆಯಲ್ಲಿ ಡಾ. ಸಿದ್ದಲಿಂಗಯ್ಯನವರ ಕಾರ್ಯಕ್ರಮವಿತ್ತು. ಸಿದ್ದಲಿಂಗಯ್ಯನವರು ನಡೆಸಿಕೊಟ್ಟ ಗ್ರಾಮ ದೇವತೆಗಳು ಕಾರ್ಯಕ್ರಮ ಸಿನಿಮಾ ನಟರ ಕಾರ್ಯಕ್ರಮಕ್ಕಿಂತಲೂ ಹೆಚ್ಚು ಪ್ರೇಕ್ಷಕರನ್ನು ಹೊಂದಿತ್ತು. ಅಂತಹ ಒಂದು ಶಕ್ತಿ ಅವರ ಮಾತಿನಲ್ಲಿತ್ತು ಎಂದು ಅವರು ಸ್ಮರಿಸಿದ್ದಾರೆ.
ಇದೇ ಸಂದರ್ಭದಲ್ಲಿ ಡಾ. ಸಿದ್ದಲಿಂಗಯ್ಯನವರು ರಚಿಸಿದ ಕಾವ್ಯಗಳನ್ನು ಹಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಇಂಟೆಕ್ ಅಧ್ಯಕ್ಷ ಕೆ.ಎಂ. ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಮುಖಂಡರುಗಳಾದ ಕೆ.ಜಿ. ರಹಮತ್‍ವುಲ್ಲಾ, ಎಂ.ಕೆ. ಲಿಯಾಖತ್ ಅಲಿ, ಜೆ.ವಿ. ವೆಂಕಟೇಶ್, ಡಿ. ಶಿವಕುಮಾರ್, ಬಾಸಿತ್‍ಖಾನ್, ಆರ್.ಬಿ.ಝಡ್. ಬಾಷಾ, ಮೊಹಮ್ಮದ್ ಜಿಕ್ರಿಯಾ ಮತ್ತಿತರರು ಇದ್ದರು.