ಕೋವಿಶೀಲ್ಡ್ ಲಸಿಕೆ ಪಡೆದ ಐಜಿಪಿ ಎಸ್.ರವಿ

ದಾವಣಗೆರೆ ಫೆ. 10 – ಪೂರ್ವ ವಲಯ ಐ.ಜಿ.ಪಿ. ಎಸ್. ರವಿ ಅವರು ಬುಧವಾರ ನಗರದ ಸಿ.ಜಿ. ಜಿಲ್ಲಾ ಆಸ್ಪತ್ರೆಯಲ್ಲಿ ಕೊರೊನಾಗೆ ನೀಡಲಾಗುವ ಕೋವಿಶೀಲ್ಡ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ.

ಜಿಲ್ಲೆಯಲ್ಲಿ ಈಗ ಎರಡನೇ ಹಂತದಲ್ಲಿ ಪೊಲೀಸರು ಹಾಗೂ ಅಧಿಕಾರಿಗಳನ್ನು ಒಳಗೊಂಡ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದೆ. ಅದರ ಅನ್ವಯ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಸೇರಿದಂತೆ ಹಲವರು ಲಸಿಕೆ ಪಡೆದಿದ್ದಾರೆ.

ನಿಯಮಗಳ ಅನ್ವಯ ಆನ್‌ಲೈನ್‌ ಮೂಲಕ ಕೊವಿನ್ ವೆಬ್ ತಾಣದಲ್ಲಿ ಹೆಸರು ನೋಂದಾಯಿಸಿದ ನಂತರ ಐಜಿಪಿ ಲಸಿಕೆ ಪಡೆದುಕೊಂಡರು. ನಂತರ ಅರ್ಧ ಗಂಟೆ ಕಾಲ ನಿಗಾದಲ್ಲಿದ್ದರು. ಜಿಲ್ಲಾ ಪೊಲೀಸರು ಲಸಿಕೆ ಪರ ಅಭಿಯಾನ ನಡೆಸಲು ಅಳವಡಿಸಿರುವ ಸೆಲ್ಫೀ ಫ್ರೇಮ್‌ನಲ್ಲಿ ಎಸ್‌ಪಿ ಹನುಮಂತರಾಯ ಜೊತೆಗೆ ಅವರು ಚಿತ್ರವನ್ನೂ ತೆಗೆಸಿಕೊಂಡರು. ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಐಜಿಪಿ ರವಿ, ಅನೇಕ ಹಿರಿಯ ವಿಜ್ಞಾನಿಗಳು ಹೇಳುವ ರೀತಿ, ಲಸಿಕೆ ತೆಗೆದುಕೊಳ್ಳುವುದು ಉತ್ತಮ. ಯಾವುದೇ ಸಂಶಯ ಇಲ್ಲದೇ ಲಸಿಕೆ ಪಡೆಯಿರಿ. ಪೊಲೀಸ್ ಇಲಾಖೆಯ ಕಟ್ಟ ಕಡೆಯ ಸಿಬ್ಬಂದಿಯವರೆಗೂ ಎಲ್ಲರೂ ಲಸಿಕೆ ಪಡೆಯಿರಿ ಎಂದು ಕರೆ ನೀಡಿದರು.

ನಾನೂ ಈಗ ಚಿಗಟೇರಿ ಆಸ್ಪತ್ರೆಗೆ ಬಂದು ಕೋವಿಶೀಲ್ಡ್ ಲಸಿಕೆ ಪಡೆದಿದ್ದೇನೆ. ಜಿಲ್ಲಾಧಿಕಾರಿ ಬೀಳಗಿ ಹಾಗೂ ಎಸ್ಪಿ ಹನುಮಂತರಾಯ, ಜಿಲ್ಲಾ ವೈದ್ಯಾಧಿಕಾರಿ ಡಾ. ನಾಗರಾಜ್ ಸೇರಿದಂತೆ ಹಲವರು ಈಗಾಗಲೇ ಲಸಿಕೆ ಪಡೆದಿದ್ದಾರೆ ಎಂದವರು ಇದೇ ಸಂದರ್ಭದಲ್ಲಿ ಹೇಳಿದರು.

ಜಗಳೂರಿನಲ್ಲಿ ಜಿಲೆಟಿನ್ ಕುರಿತು ತನಿಖೆ

ಜಗಳೂರಿನಲ್ಲಿ ಜಿಲೆಟಿನ್ ಸಂಗ್ರಹಣಾ ಪ್ರಕ್ರಿಯೆಯಲ್ಲಿ ಲೋಪಗಳಿರುವುದು ಕಂಡು ಬಂದಿದ್ದು ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.

ಈ ಬಗ್ಗೆ ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಗಳೆರಡರಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದೂ ಅವರು ಹೇಳಿದ್ದಾರೆ.

ಇತ್ತೀಚೆಗೆ ಪತ್ತೆಯಾದ ಲೆಕ್ಕವಿಲ್ಲದ 1.47 ಕೋಟಿ ರೂ.ಗಳ ಬಗ್ಗೆ  ಸಕ್ಷಮ ಪ್ರಾಧಿಕಾರವಾದ ಆದಾಯ ತೆರಿಗೆ ಇಲಾಖೆಗೆ ತಿಳಿಸಲಾಗಿದೆ. ಅವರು ಮುಂದಿನ ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಎಂದವರು ಮತ್ತೊಂದು ಪ್ರಶ್ನೆಗೆ ಉತ್ತರಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಎಸ್ಪಿ ಹನುಮಂತರಾಯ, ಲಸಿಕೆ ಸುರಕ್ಷಿತವಾಗಿದ್ದು, ಎಲ್ಲರೂ ಲಸಿಕೆ ಪಡೆಯಬೇಕು. ಲಸಿಕೆ ಸ್ವಯಂ ಪ್ರೇರಿತವಾದರೂ, ಅದನ್ನು ಪಡೆದರೆ ಕೊರೊನಾ ವೈರಸ್ ಎದುರಿಸಲು ಸಾಧ್ಯವಾಗಲಿದೆ. ಹೀಗಾಗಿ ಜಿಲ್ಲೆಯಲ್ಲಿರುವ ಎಲ್ಲಾ 1,500 ಪೊಲೀಸರು ಲಸಿಕೆ ಪಡೆಯಬೇಕು ಎಂದು ಕಿವಿಮಾತು ಹೇಳಿದರು.

ಪೊಲೀಸ್ ಸಿಬ್ಬಂದಿ ಬಂದೋಬಸ್ತ್‌ನಲ್ಲಿದ್ದರು. ಹರಿಹರದಲ್ಲಿ ನಡೆದ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದರು. ಇನ್ನು ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆಯಲಿದ್ದಾರೆ ಎಂದು ತಿಳಿಸಿದರು.

ಲಸಿಕೆ ಪಡೆದುಕೊಂಡ ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಪರಿಣಾಮವಿರುತ್ತದೆ. ಆದರೆ, ಲಸಿಕೆ ನಂತರ ನಾನು ಯಾವುದೇ ಅಡ್ಡ ಪರಿಣಾಮ ಎದುರಿಸಿಲ್ಲ. ಜಿಲ್ಲಾಧಿಕಾರಿಗಳಿಗೂ ಯಾವುದೇ ಅಡ್ಡ ಪರಿಣಾಮವಾಗಿಲ್ಲ ಎಂದು ಕೇಳಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಐಜಿಪಿ ರವಿ ಅವರ ಜೊತೆಗೆ ಕೆ.ಟಿ.ಜೆ. ನಗರದ ಮುಖ್ಯಪೇದೆ ಸುರೇಶ್ ಬಾಬು ಅವರೂ ಲಸಿಕೆ ಪಡೆದರು.

ಈ ಸಂದರ್ಭದಲ್ಲಿ ಜಿಲ್ಲಾ ವೈದ್ಯಾಧಿಕಾರಿ ಡಾ. ನಾಗರಾಜ್, ಜಿಲ್ಲಾ ಸರ್ಜನ್ ಡಾ. ಜಯಪ್ರಕಾಶ್, ಆರ್.ಎಂ.ಒ. ಮಂಜುನಾಥ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!