ಗುತ್ತಿಗೆ ಪದ್ಧತಿ ನಿಲ್ಲಿಸುವಂತೆ ಪೌರ ಕಾರ್ಮಿಕರ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ನಾರಾಯಣ ಮೈಸೂರು ಆಗ್ರಹ
ದಾವಣಗೆರೆ, ಫೆ. 12- ಸರ್ಕಾರ ಈ ಕೂಡಲೇ ರಾಜ್ಯದಲ್ಲಿರುವ 40 ಸಾವಿರ ಪೌರ ಕಾರ್ಮಿಕರನ್ನು ಖಾಯಂಗೊಳಿಸ ಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯ ಸ್ಥಗಿತಗೊಳಿಸುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಪೌರ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ನಾರಾಯಣ ಮೈಸೂರು ಹೇಳಿದರು.
ನಗರದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಪೌರ ಕಾರ್ಮಿಕರ ಮಹಾಸಂಘ, ದಾವಣಗೆರೆ ಮಹಾಗನರ ಪಾಲಿಕೆ ಪೌರ ಕಾರ್ಮಿಕರ ಮತ್ತು ಡಿ.ಗ್ರೂಪ್ ನೌಕರರ ಸಂಘ ಹಾಗೂ ಮಹಾನಗರ ಪಾಲಿಕೆ ನೇರ ಪಾವತಿ ಪೌರ ಕಾರ್ಮಿಕರ ಸಂಘದ ಆಶ್ರಯದಲ್ಲಿ ಪೌರ ಕಾರ್ಮಿಕರ ರಾಜ್ಯ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಪೌರ ಕಾರ್ಮಿಕರ ಪಾಲಿಗೆ ಗುತ್ತಿಗೆ ಪದ್ಧತಿ ಜೀತ ಪದ್ಧತಿ ಇದ್ದಂತೆ. ಪಿಎಫ್, ಇಎಸ್‌ಐ ಸೌಲಭ್ಯಗಳಿಲ್ಲದೆ ಗುತ್ತಿಗೆದಾರ ರಿಂದ ಪೌರ ಕಾರ್ಮಿಕರು ನಿರಂತರ ಶೋಷಣೆಗೊಳಪಡುತ್ತಿದ್ದರು. ಆದ್ದ ರಿಂದಲೇ ಈ ಹಿಂದೆ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪೌರ ಕಾರ್ಮಿಕರನ್ನು ಖಾಯಂ ಗೊಳಿಸಲು ಹೋರಾಟ ನಡೆಸಲಾಗಿತ್ತು ಎಂದರು.
ನಮ್ಮ ಹೋರಾಟಕ್ಕೆ ಸ್ಪಂದಿಸಿದ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ನವರು ಗುತ್ತಿಗೆ ಪದ್ಧತಿ ರದ್ದು ಮಾಡಿದ್ದರು. ಇದು ಪೌರ ಕಾರ್ಮಿಕರ ಸಂಘಕ್ಕೆ ಸಿಕ್ಕ ಯಶಸ್ಸಾಗಿತ್ತು. ಆದರೆ ಇಂದಿಗೂ ಕೆಲ ನಗರಸಭೆ, ಪುರಸಭೆಗಳಲ್ಲಿ ಗುತ್ತಿಗೆದಾರರೇ ಪೌರ ಕಾರ್ಮಿಕರಿಗೆ ವೇತನ ನೀಡುತ್ತಿ ದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು ಇದರಲ್ಲಿ ಶಾಮೀಲಾಗಿದ್ದಾರೆ. ಕೂಡಲೇ ಗುತ್ತಿಗೆ ಪದ್ಧತಿ ನಿಲ್ಲಿಸದಿದ್ದರೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಅಂದು 11 ಸಾವಿರ ಮಂಜೂರಾದ ಹುದ್ದೆಗಳ ಪೈಕಿ 4800 ಪೌರ ಕಾರ್ಮಿಕರನ್ನು ಖಾಯಂಗೊಳಿಸಲಾಯಿತು. ಇನ್ನೂ 7800 ಜನರನ್ನು ಖಾಯಂ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು. ಸರ್ಕಾರಿ ಆದೇಶದಲ್ಲಿ ಕೇವಲ ಕಸ ಗುಡಿಸುವವರನ್ನು ಮಾತ್ರ ನೇಮಕಾತಿ ಮಾಡಿಕೊಳ್ಳಬೇಕೆಂದಿದೆ. ಆದರೆ ಒಳಚಂರಂಡಿ ಸ್ವಚ್ಛಗೊಳಿಸುವವರು, ಚಾಲಕರು, ಸ್ವಚ್ಛತಾ ಸಹಾಯಕರು, ತಾಜ್ಯವನ್ನು ಲೋಡ್ ಮಾಡುವವರು ಸೇರಿದಂತೆ ವಿವಿಧ ಹಂತದ ಸ್ವಚ್ಛತಾ ಸಿಬ್ಬಂದಿಗಳನ್ನು ಕೈ ಬಿಡಲಾಗಿದೆ. ಆದ್ದರಿಂದ ಎಲ್ಲಾ ವರ್ಗದ ಸ್ವಚ್ಛತಾ ಸಿಬ್ಬಂದಿಗಳನ್ನೂ ಸಹ ಖಾಯಂ ನೇಮಕಾತಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರಕ್ಕೆ ಮೂರು ತಿಂಗಳು ಗಡುವು ನೀಡಲಾಗುವುದು. ಇಲ್ಲದಿದ್ದರೆ ಕಳೆದ 2017ರಲ್ಲಿ ಸ್ವಚ್ಛತಾ ಕಾರ್ಯ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದಂತೆ ಹಾಗೂ ಅದಕ್ಕಿಂತ ಹೆಚ್ಚಿನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಪೌರ ಕಾರ್ಮಿಕರ ಹಿತಕ್ಕಾಗಿ ರಾಜ್ಯ ಪೌರ ಕಾರ್ಮಿಕರ ಸಂಘ ಶ್ರಮಿಸುತ್ತಿದೆ. ಸರ್ಕಾರದೊಂದಿಗೆ ಚರ್ಚಿಸಿ, ವಸತಿಗೃಹ, ಬೆಳಗಿನ ಉಪಹಾರ, ವೇತನ ಹೆಚ್ಚಳ ಸೇರಿದಂತೆ ಅನೇಕ ಪ್ರಯೋಜನಗಳನ್ನು ಕಲ್ಪಿಸಿಕೊಟ್ಟಿದೆ. ಬಲಿಷ್ಠ ಸಂಘಟನೆ ಇದ್ದಾಗ ಸರ್ಕಾರದ ಮೇಲೆ ಒತ್ತಡ ಹೇರಿ ಸೌಲಭ್ಯ ಪಡೆಯಬಹುದು. ಆದ್ದರಿಂದ ಪೌರ ಕಾರ್ಮಿಕರು ಸಂಘಟನೆಗೆ ಶಕ್ತಿ ತುಂಬಬೇಕು ಎಂದರು.
ಇದೇ ಸಂದರ್ಭದಲ್ಲಿ ಸಂಘದ ಕಾರ್ಯಾಧ್ಯಕ್ಷರಾಗಿದ್ದ ದಿವಂಗತ ಮೈಸೂರು ಪೆದ್ದಣ್ಣ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಪೌರ ಕಾರ್ಮಿಕರ ಸಂಘದ ಪದಾಧಿಕಾರಿಗಳು ಹಾಗೂ ವಿವಿಧ ಜಿಲ್ಲೆಗಳಿಂದ ಬಂದ ಪೌರ ಕಾರ್ಮಿಕರ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.
ರಾಜ್ಯ ಸಂಘದ ಹಿರಿಯ ಉಪಾಧ್ಯಕ್ಷ ಎಲ್.ಎಂ. ಹನುಮಂತಪ್ಪ ಮಾತನಾಡಿ, ದಿ.ಮೈಸೂರು ಪೆದ್ದಣ್ಣ ಅವರು ಸದಾ ಪೌರ ಕಾರ್ಮಿಕರ ಹಿತ ಬಯಸುತ್ತಿದ್ದರು ಎಂದು ಸ್ಮರಿಸಿದರು.
ಸಂಘದ ರಾಜ್ಯ ಸಂಚಾಲಕ ಡಾ.ಕೆ.ಬಿ. ಓಬಳೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಾಧ್ಯಕ್ಷ ಬಿ.ಹೆಚ್. ವೀರಭದ್ರಪ್ಪ, ಸಫಾಯಿ ಕರ್ಮಚಾರಿಗಳ ಸಂಘದ ಮಾಜಿ ಅಧ್ಯಕ್ಷ ಶ್ರೀರಾಮುಲು, ವಿವಿಧ ಜಿಲ್ಲೆಗಳನ್ನು ಪ್ರತಿನಿಧಿಸಿದ್ದ ಮುನಿರಾಜು, ಶ್ರೀನಿವಾಸ್, ಆರ್.ಸಿ.ಹೆಚ್. ಬಾಬು, ಮಂಡ್ಯ ನಾಗಣ್ಣ, ವಿಜಯ ಗುಂತಾಳ್, ರಾಯಚೂರಿನ ವೆಂಕಟೇಶ್, ಕೋಲಾರದ ಪದ್ಮಾವತಿ, ಬೆಂಗಳೂರಿನ ಜಯಮ್ಮ ರಾಮಚಂದ್ರ, ಸುರೇಶ್ ಬಾಬು ಮತ್ತಿತರರು ಉಪಸ್ಥಿತರಿದ್ದರು.