ರೈತರ ಹೋರಾಟ ಪವಿತ್ರ

ಹೊಸ ವ್ಯವಸ್ಥೆ ಕಡ್ಡಾಯವಲ್ಲ : ಲೋಕಸಭೆಯಲ್ಲಿ ಪ್ರಧಾನಿ ಮೋದಿ

ನವದೆಹಲಿ, ಫೆ. 10 – ನೂತನ ಕೃಷಿ ಕಾಯ್ದೆಗಳ ಕುರಿತು ತಮ್ಮ ನಿಲುವಿನ ದನಿ ಎತ್ತಿರುವ ರೈತರ ಬಗ್ಗೆ ಸರ್ಕಾರ ಹಾಗೂ ಸಂಸತ್ತಿಗೆ ಅಪಾರ ಗೌರವ ಇದೆ. ಅವರ ಪ್ರತಿಭಟನೆ ಪವಿತ್ರ ಎಂದು ಭಾವಿಸಿದ್ದೇನೆ ಎಂದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ರೈತರು ಕೇಂದ್ರ ಸರ್ಕಾರದ ಜೊತೆ ಮಾತುಕತೆಗೆ ಬರುವಂತೆ ಮತ್ತೊಮ್ಮೆ ಆಹ್ವಾನ ನೀಡಿದ್ದಾರೆ. 

ರಾಷ್ಟ್ರಪತಿ ಭಾಷಣಕ್ಕೆ ಅಭಿನಂದನೆ ಸಲ್ಲಿಸುವ ನಿಲುವಳಿ ಕುರಿತ ಚರ್ಚೆಯಲ್ಲಿ ಮಾತನಾಡುತ್ತಿದ್ದ ಅವರು, ಮೂರು ಕೃಷಿ ಕಾಯ್ದೆಗಳನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ನೂತನ ವ್ಯವಸ್ಥೆ ಕಡ್ಡಾಯವಲ್ಲ, ಇದು ರೈತರಿಗೆ ನೀಡುವ ಆಯ್ಕೆ ಮಾತ್ರವಾಗಿದೆ. ಹಳೆಯ ವ್ಯವಸ್ಥೆಯೂ ಲಭ್ಯವಿರಲಿದೆ ಎಂದು ತಿಳಿಸಿದ್ದಾರೆ.

90 ನಿಮಿಷಗಳ ಕಾಲ ಮಾತನಾಡಿದ ಪ್ರಧಾನಿ, ತಮ್ಮ ಭಾಷಣದ ಬಹುತೇಕ ಸಮಯವನ್ನು ಕೃಷಿ ಕಾಯ್ದೆಗಳಿಗೆ ಮೀಸಲಿಟ್ಟಿದ್ದರು. 

ಕಾಯ್ದೆಯಲ್ಲಿ ಏನಾದರೂ ಲೋಪಗಳಿದ್ದರೆ ಅದರ ತಿದ್ದುಪಡಿಗೆ ಸರ್ಕಾರ ಮುಕ್ತವಾಗಿದೆ. ರೈತ ಒಕ್ಕೂಟಗಳ ಕಾಯ್ದೆಯ ಪ್ರತಿಯೊಂದು ಅಂಶವನ್ನು ಎಳೆ ಎಳೆಯಾಗಿ ಚರ್ಚಿಸಬಹುದಾಗಿದೆ ಹಾಗೂ ತಮ್ಮ ಆತಂಕಗಳನ್ನು ನಿವಾರಿಸಿಕೊಳ್ಳಬಹುದಾಗಿದೆ ಎಂದು ಮೋದಿ ಹೇಳಿದ್ದಾರೆ.

ಸೋಮವಾರ ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ §ಆಂದೋಲನ ಜೀವಿ¬ ಎಂಬ ಪದ ಬಳಸಿದ್ದರು. ಈ ಪದಕ್ಕೆ ಪ್ರತಿಭಟನಾ ನಿರತ ರೈತ ಒಕ್ಕೂಟಗಳು ಆಕ್ಷೇಪಿಸಿದ್ದವು.

  ಬಗ್ಗೆಯೂ ಮಾತನಾಡಿದ ಪ್ರಧಾನ ಮಂತ್ರಿ §ಆಂದೋಲನಕಾರಿ¬ (ಪ್ರತಿಭಟನಾಕಾರರು) ಹಾಗೂ ಆಂದೋಲನ ಜೀವಿಗಳ ನಡುವೆ ವ್ಯತ್ಯಾಸವಿದೆ. ರೈತರ ಆಂದೋಲನ ಪವಿತ್ರವಾಗಿದೆ ಎಂದು ನಾವು ಭಾವಿಸಿದ್ದೇನೆ. ಆದರೆ, ಆಂದೋಲನ ಜೀವಿಗಳು ಪವಿತ್ರ ಪ್ರತಿಭಟನೆಯನ್ನು ಹೈಜಾಕ್ ಮಾಡಿದ್ದಾರೆ. ಉಗ್ರವಾದದ ರೀತಿಯ ಗಂಭೀರ ಅಪರಾಧಗಳಲ್ಲಿ ಶಿಕ್ಷೆಗೆ ಗುರಿಯಾಗಿರುವವರ ಫೋಟೋ ಗಳನ್ನು ಪ್ರತಿಭಟನೆಯ ಸಂದರ್ಭದಲ್ಲಿ ತೋರಿಸುತ್ತಿದ್ದಾರೆ. ಇದರಿಂದ ಏನಾದರೂ ಪ್ರಯೋಜನವಾಗಲಿದೆಯೇ? ಟೋಲ್ ಪ್ಲಾಜಾಗಳು ಕೆಲಸ ಮಾಡಲು ಬಿಡದೇ ಇರುವುದು, ಪಂಜಾಬ್‌ನಲ್ಲಿ ಟೆಲಿಕಾಂ ಸ್ಥಾವರಗಳನ್ನು ನಾಶಗೊಳಿಸುವಂತಹ ಕೃತ್ಯಗಳಿಂದ ಪವಿತ್ರ ಆಂದೋಲನಕ್ಕೆ ಪ್ರಯೋಜನವಾಗುತ್ತದೆಯೇ? ಎಂದು ಮೋದಿ ಪ್ರಶ್ನಿಸಿದ್ದಾರೆ.

ಆಂದೋಲನ ಜೀವಿಗಳು ರೈತರ ಪವಿತ್ರ ಪ್ರತಿಭಟನೆಯನ್ನು ಹಾಳು ಮಾಡಿದ್ದಾರೆಯೇ ಹೊರತು ಆಂದೋಲನಕಾರಿಗಳಲ್ಲ. ಹೀಗಾಗಿ ದೇಶ ಆಂದೋಲನ ಜೀವಿಗಳು ಹಾಗೂ ಆಂದೋಲನಕಾರಿಗಳ ವ್ಯತ್ಯಾಸ ತಿಳಿಯಬೇಕಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಕಾಂಗ್ರೆಸ್ ಸದಸ್ಯರು ಸದನದಲ್ಲಿ ಮಾತನಾಡುವಾಗ ಕಾಯ್ದೆಗಳಲ್ಲಿ ಇರುವ ಲೋಪಗಳ ಬಗ್ಗೆ ಏನೂ ಮಾತನಾಡಿಲ್ಲ ಎಂದು ಹೇಳಿದ ಪ್ರಧಾನಿ ಮೋದಿ, ಪ್ರತಿಪಕ್ಷಗಳು ರೈತರ ದಾರಿ ತಪ್ಪಿಸುತ್ತಿವೆ ಎಂದು ಆರೋಪಿಸಿದ್ದಾರೆ. ಪ್ರಧಾನಿ ಕೃಷಿ ಕಾಯ್ದೆಗಳ ಕುರಿತು ತಮ್ಮ ನಿಲುವು ತಿಳಿಸುವಾಗಲೇ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು.

ಕೃಷಿ ಕಾಯ್ದೆಗಳಿಂದ ಮಂಡಿ ವ್ಯವಸ್ಥೆ ದುರ್ಬಲವಾಗಲಿದೆ ಹಾಗೂ ಕನಿಷ್ಠ ಬೆಂಬಲ ಬೆಲೆ ರದ್ದಾಗಲಿದೆ ಎಂದು ಟೀಕಾಕಾರರು ರೈತರಲ್ಲಿ ಹೆದರಿಕೆ ಹುಟ್ಟಿಸುತ್ತಿದ್ದಾರೆ. ಈ ಕಾಯ್ದೆಗಳು ಸಂಸತ್ತಿನಿಂದ ಅನುಮೋದನೆ ಪಡೆದ ನಂತರ ಯಾವುದೇ ಮಂಡಿ ಮುಚ್ಚಿಲ್ಲ. ಇದರ ಬದಲು ಕೃಷಿ ಮಂಡಿಗಳ ಆಧುನೀಕರಣಕ್ಕೆ ಹೆಚ್ಚು ಅನುದಾನ ನೀಡಲಾಗಿದೆ. ಇದೇ ರೀತಿ ಕನಿಷ್ಠ ಬೆಂಬಲ ಬೆಲೆ ಮುಂದುವರೆದಿದೆ. ಈ ಅಂಶಗಳನ್ನು ಕಡೆಗಣಿಸಲಾಗದು ಎಂದು ಪ್ರಧಾನಿ ತಿಳಿಸಿದ್ದಾರೆ.

ರೈತರು ಈ ಕಾಯ್ದೆಯನ್ನು ಕೇಳಿಯೇ ಇರಲಿಲ್ಲ ಏಕೆ ಕೊಟ್ಟಿರಿ ಎಂದು ಪ್ರತಿಪಕ್ಷಗಳ ಸದಸ್ಯರು ಹೇಳಿದ್ದರಿಂದ ಆಘಾತವಾಗಿದೆ. ವರದಕ್ಷಿಣೆ ವಿಷಯವೇ ಇರಲಿ, ತ್ರಿವಳಿ ತಲಾಕ್ ವಿಷಯವೇ ಇರಲಿ ಯಾರೊಬ್ಬರೂ ಇವುಗಳ ನಿಷೇಧಕ್ಕೆ ಕೇಳಿರಲಿಲ್ಲ. ಆದರೆ, ಪ್ರಗತಿಪರ ಸಮಾಜಕ್ಕೆ ಅಗತ್ಯವಾದ ರೀತಿಯಲ್ಲಿ ಕಾಯ್ದೆಗಳನ್ನು ಜಾರಿಗೆ ತರಬೇಕಾಗುತ್ತದೆ ಎಂದವರು ಹೇಳಿದ್ದಾರೆ.

ರಾಷ್ಟ್ರಪತಿ ಭಾಷಣಕ್ಕೆ ಅಭಿನಂದನೆ ಸಲ್ಲಿಸುವ ನಿಲುವಳಿಯಲ್ಲಿ ಸಾಕಷ್ಟು ಮಹಿಳಾ ಸಂಸದರು ಚರ್ಚೆಯಲ್ಲಿ ಪಾಲ್ಗೊಂಡರು. ಇದು ಉತ್ತಮ ಸಂಕೇತವಾಗಿದೆ. ಈ ಸದನದ ಪ್ರಕ್ರಿಯೆಗಳನ್ನು ತಮ್ಮ ವಿಚಾರಗಳಿಂದ ಶ್ರೀಮಂತಗೊಳಿಸಿದ ಮಹಿಳಾ ಸಂಸದರಿಗೆ ನಾನು ಅಭಿನಂದಿಸುತ್ತೇನೆ ಎಂದೂ ಪ್ರಧಾನಿ ತಿಳಿಸಿದ್ದಾರೆ.

error: Content is protected !!