ಯುಗಾದಿಗೆ ಸಂಭ್ರಮದ ಸ್ವಾಗತ

ಹೊಸ ಭರವಸೆಯೊಂದಿಗೆ ನೂತನ ವರ್ಷ ಬರಮಾಡಿಕೊಂಡ ಜನತೆ

ಇಂದು ಚಂದ್ರದರ್ಶನ

ದಾವಣಗೆರೆ : ಸಂಭ್ರಮ-ಸಡಗರ ನೀಡುವ ಜೊತೆಗೆ,  ಹೊಸ ಭರವಸೆ, ಆಶಯ, ಗುರಿ, ಉದ್ದೇಶ, ಬಯಕೆ, ಕನಸನ್ನು ಚಿಗುರಿಸುವ ಹಬ್ಬ ಯುಗಾದಿ ಮತ್ತೆ ಬಂದಿದೆ.

ಕಳೆದ ವರ್ಷ ಕೊರೊನಾ ಎಂಬ ಮಹಾಮಾರಿಯ ಆರ್ಭಟದಿಂದ ಯುಗಾದಿ ಸರಳವಾಗಿಯೇ ಬಂದು ಹೋಗಿತ್ತು. ಈ ಬಾರಿಯೂ ಕೊರೊನಾ ಇದೆ. ಆದರೆ ಜನರಲ್ಲಿ ಭಯವಿಲ್ಲ. ಆದ್ದರಿಂದ ಯುಗಾದಿ ಸಂಭ್ರಮ ಹೆಚ್ಚಿಸಿಕೊಂಡಿದೆ. 

ಜಿಲ್ಲೆಯಲ್ಲಿ ಜನತೆ ಸೋಮವಾರ ಶಾವಿಗೆ ಉಂಡು, ಹಬ್ಬದ ಪ್ರಥಮ ದಿನವನ್ನು ಸಡಗರ ಸಂಭ್ರಮದಿಂದ ಬರ ಮಾಡಿಕೊಂಡಿದೆ. ಇನ್ನು ಬುಧವಾರದ ಬಿದಿಗೆ ಚಂದ್ರ ದರ್ಶನ ಬಾಕಿ ಇದೆ. 

ಚಂದ್ರದರ್ಶನ ಮಾಡಿ, ಪೂಜಿಸಿ, ಹಿರಿಯರಿಗೆ ನಮಸ್ಕರಿಸುವ ಮೂಲಕ ಮತ್ತು ಸ್ನೇಹಿತರು, ಸಂಬಂಧಿಗಳಿಗೆ ಪರಸ್ಪರ ಶುಭಾಶಯ ಹೇಳಿ ಬೇವು-ಬೆಲ್ಲ ಕೊಡುವ ಮೂಲಕ ಹಬ್ಬಕ್ಕೆ ಮತ್ತಷ್ಟು ಮೆರುಗು ನೀಡಲು ಮಕ್ಕಳು, ಮಹಿಳೆಯರು, ಯುವಕರು ಕಾತರದಲ್ಲಿದ್ದಾರೆ.

ಭಾನುವಾರ ಅಮಾವಾಸ್ಯೆ ಆಚರಣೆ ಮಾಡಿದ ಜನತೆ, ಸೋಮವಾರ ಪಾಡ್ಯ ಆಚರಿಸಿದೆ. ಸಂಪ್ರದಾಯದಂತೆ ಮನೆಗಳನ್ನು ತಳಿರು – ತೋರಣಗಳಿಂದ ಸಿಂಗರಿಸಿ ಮನೆಮಂದಿಯೆಲ್ಲ ಅಭ್ಯಂಜಯ ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು ಪೂಜೆ ಸಲ್ಲಿಸಿ ಸಂಭ್ರಮಿಸಿದರು. ಜೀವನದಲ್ಲಿ ಕಷ್ಟ-ಸುಖಗಳನ್ನು ಸಮನಾಗಿ ಸ್ವೀಕರಿಸಬೇಕೆಂಬ ಸಂಕೇತ ಸಾರುವ ಬೇವು-ಬೆಲ್ಲ ಸೇವಿಸಿದರು. ಸಂಜೆ ಕುಟುಂಬದೊಡನೆ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆದವು. 

ಕೊರೊನಾ ಎರಡನೇ ಅಲೆ ವೇಗವಾಗಿ ಹಬ್ಬುತ್ತಿದೆಯಾದರೂ ಜನತೆ ಡೋಂಟ್ ಕೇರ್ ಎಂಬಂತೆ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಖರೀದಿಯಲ್ಲಿ ಬ್ಯುಸಿಯಾಗಿದ್ದುದು ಕಂಡು ಬಂತು. ಬಟ್ಟೆ ಅಂಗಡಿಗಳು ಗ್ರಾಹಕರಿಂದ ತುಂಬಿದ್ದವು. ಇನ್ನು ಬೇವು-ಮಾವಿನ ಸೊಪ್ಪು ಖರೀದಿ ಜೋರಾಗಿತ್ತು.

ಯುಗಾದಿ ಹಬ್ಬದಂದು ಮುಂಜಾನೆ ಸ್ನಾನ ಕಾರ್ಯಗಳು ಮುಗಿದ ಬಳಿಕ ಹೊಸ ಬಟ್ಟೆ ಧರಿಸಿ, ದೇವರನ್ನು ಪೂಜಿಸಿ, ಬೇವು, ಬೆಲ್ಲವನ್ನು ಸೇವನೆ ಮಾಡಲಾಗುತ್ತದೆ. ಬೇವು- ಬೆಲ್ಲ, ಸುಖ-ದುಃಖದ ಸಂಕೇತ. ಮನುಷ್ಯನ ಜೀವನದಲ್ಲಿ ಸುಖ- ದುಃಖ್ಯಗಳು ಅವಿಭಾಜ್ಯ ಅಂಗಗಳು ಇದ್ದಂತೆ. ಎರಡನ್ನೂ ಸಮ ದೃಷ್ಟಿಯಿಂದ ಸವಿಯಲೆಂದೇ ಯುಗಾದಿ ಹಬ್ಬದ ದಿನದಂದು ಬೇವು- ಬೆಲ್ಲ ಸೇವಿಸಲಾಗುತ್ತದೆ. 

`ಯುಗ-ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸವರುಷಕೆ-ಹೊಸಹರುಷವ ಹೊಸತು ಹೊಸತು ತರುತಿದೆ’ ಎಂಬ ದ.ರಾ.ಬೇಂದ್ರೆ ಅವರ ಕವನವು ಯುಗಾದಿ ಹಬ್ಬದಂದೆ ಮತ್ತೆ ಮತ್ತೆ ಜನತೆಗೆ ನೆನಪಾಗುತ್ತಿದೆ.

error: Content is protected !!