ಎರಡನೇ ಅಲೆ ಎದುರಿಸಲು ಲಸಿಕೆ ಉಪಯುಕ್ತ

ಲಸಿಕಾ ಶಿಬಿರಗಳಿಗೆ ಪಾಲಿಕೆ ಸದಸ್ಯರ ಸಹಕಾರಕ್ಕೆ ಆರೋಗ್ಯಾಧಿಕಾರಿ ಕರೆ

ದಾವಣಗೆರೆ, ಏ. 12 – ಬರುವ ಮೇ 1ರಿಂದ ದಾವಣಗೆರೆ ಸೇರಿದಂತೆ ರಾಜ್ಯಾದ್ಯಂತ ಕೊರೊನಾದ ಎರಡನೇ ಅಲೆ ಬರುವ ಸಾಧ್ಯತೆ ಇದೆ ಎಂದು ಪರಿಣಿತರು ಎಚ್ಚರಿಸಿದ್ದು, ಈ ಹಿನ್ನೆಲೆಯಲ್ಲಿ ಕೊರೊನಾ ಶಿಷ್ಟಾಚಾರಗಳ ಪಾಲನೆ ಹಾಗೂ ಲಸಿಕೆ ನೀಡುವುದಕ್ಕೆ ಒತ್ತು ಕೊಡಬೇಕಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗರಾಜ್ ತಿಳಿಸಿದ್ದಾರೆ.

ನಗರ ಪಾಲಿಕೆ ಸಭಾಂಗಣದಲ್ಲಿ ನಗರ ಪಾಲಿಕೆ ಮತ್ತು ಆರೋಗ್ಯ ಇಲಾಖೆಗಳ ವತಿಯಿಂದ ಆಯೋಜಿಸಲಾಗಿದ್ದ ಕ್ಷಯರೋಗ ಹಾಗೂ ಕೊರೊನಾ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ದೇಶದಲ್ಲಿ ಕೊರೊನಾದ ಎರಡನೇ ಅಲೆ ಆರಂಭವಾಗಿದೆ. ರಾಜ್ಯದ 6-7 ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಕರಣಗಳು ಕಂಡು ಬರುತ್ತಿವೆ. ದಾವಣಗೆರೆಯಲ್ಲೂ ಸೋಂಕುಗಳು ಹೆಚ್ಚಾಗುತ್ತಿವೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ವೇಗವಾಗಿ ಸೋಂಕು ಹರಡುವ ಆತಂಕವಿದೆ ಎಂದು ಹೇಳಿದರು.

ಕಳೆದ ಬಾರಿ ಸೋಂಕು ಬಂದಾಗ ಚಿಕಿತ್ಸೆ ಇರಲಿಲ್ಲ. ಈ ಬಾರಿ ಲಸಿಕೆ ಲಭ್ಯವಿದೆ. ಜಿಲ್ಲೆಯಲ್ಲಿ 1.33 ಲಕ್ಷ ಜನರಿಗೆ ಈಗಾಗಲೇ ಲಸಿಕೆ ನೀಡಲಾಗಿದೆ. 45 ವರ್ಷ ಮೀರಿದ ಇನ್ನೂ 4.17 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಇದೆ. ಆರೋಗ್ಯ ಕೇಂದ್ರಗಳಷ್ಟೇ ಅಲ್ಲದೇ, ವಾರ್ಡುಗಳಲ್ಲಿ ಲಸಿಕಾ ಶಿಬಿರ ನಡೆಸುವ ಉದ್ದೇಶವಿದೆ. ಈ ಬಗ್ಗೆ ಪಾಲಿಕೆ ಸದಸ್ಯರು ಜನರಲ್ಲಿ ಲಸಿಕೆಯ ಬಗ್ಗೆ ಅರಿವು ಮೂಡಿಸಬೇಕು ಎಂದವರು ಹೇಳಿದರು.

ಲಸಿಕೆ ಹಾಕಿಸಿಕೊಂಡ ತಕ್ಷಣ ಕೊರೊನಾ ಸೋಂಕು ಬರುವುದಿಲ್ಲ ಎಂದರ್ಥವಲ್ಲ. ಆದರೆ, ಸೋಂಕು ಬಂದರೂ ಶ್ವಾಸಕೋಶ ಮತ್ತಿತರೆ ಅಂಗಗಳಿಗೆ ತೊಂದರೆ ಆಗುವುದಿಲ್ಲ. ಹೀಗಾಗಿ ಸೋಂಕು ಮಾರಣಾಂತಿಕವಾಗಿರುವು ದಿಲ್ಲ ಎಂದು ಡಾ. ನಾಗರಾಜ್ ವಿವರಿಸಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್ ಮಾತನಾಡಿ, ಕೊರೊನಾ ಮಹಾ ಮಾರಿ ಎಂದು ಭಾವಿಸಬೇಕಿಲ್ಲ. ಜಿಲ್ಲೆಯಲ್ಲಿ 23 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ಬಂದರೂ 256 ಜನ ಮಾತ್ರ ಸಾವನ್ನಪ್ಪಿದ್ದಾರೆ. ಇವರೂ ಸಹ ಸರಿಯಾದ ಸಮಯಕ್ಕೆ ಚಿಕಿತ್ಸೆಗೆ ಬಂದಿದ್ದರೆ ಇವರಲ್ಲೂ ಅರ್ಧ ದಷ್ಟು ಜನರ ಜೀವ ಉಳಿಸಬಹುದಿತ್ತು ಎಂದರು.

ಕೊರೊನಾ ಸಾವಿನಲ್ಲಿ ಬಹುತೇಕರು ಹೃದಯ ರೋಗ, ಮಧುಮೇಹ ಮತ್ತಿತರೆ ಸಹ ಅಸ್ವಸ್ಥತೆಯಿಂದ ಬಳಲುತ್ತಿರುವವರು ಜಿಲ್ಲೆಯಲ್ಲಿ ಕಳೆದ ವರ್ಷ ಡಿಸೆಂಬರ್ 2020ರ ನಂತರ ಕೊರೊನಾದಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದವರು ಹೇಳಿದರು.

ಜಿಲ್ಲೆಯಲ್ಲಿ ಕೇವಲ ಶೇ.5-10ರಷ್ಟು ಜನರು ಮಾತ್ರ ಮಾಸ್ಕ್ ಧರಿಸುತ್ತಿದ್ದಾರೆ. ಬಸ್‌ಗಳಲ್ಲಿ ಮಾಸ್ಕ್ ಧರಿಸದೇ ಸಂಚರಿಸುವವರೇ ಹೆಚ್ಚಾಗಿದ್ದಾರೆ. ಕೊರೊನಾ ಶಿಷ್ಟಾಚಾರ ಪಾಲಿಸಿದರೆ ಹಾಗೂ ಲಸಿಕೆ ಪಡೆದರೆ ಎರಡನೇ ಅಲೆ ತಡೆಯಬಹುದು ಎಂದರು.

ಕೊರೊನಾ ಸೋಂಕು ಕಂಡು ಬಂದಾಗ ಸಂಪರ್ಕಿತರನ್ನು 24 ಗಂಟೆಗಳ ಒಳಗೆ ಪರೀಕ್ಷೆಗೆ ಒಳಪಡಿಸಬೇಕೆಂಬ ಗುರಿ ಇದೆ. ಇದಕ್ಕಾಗಿ ಆರೋಗ್ಯ ಇಲಾಖೆಯ ತಂಡಗಳ ಜೊತೆ ನಗರ ಪಾಲಿಕೆ ಸದಸ್ಯರೂ ಸಹಕರಿಸಬೇಕು ಎಂದರು.

ಮೇಯರ್ ಎಸ್.ಟಿ. ವೀರೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನರ ಆರೋಗ್ಯ ಕಾಪಾಡುವುದು ಜನಪ್ರತಿನಿಧಿಗಳಾದ ನಮ್ಮ ಕರ್ತವ್ಯ. ಸೋಂಕಿತರ ಮಾಹಿತಿ ತಿಳಿದ ತಕ್ಷಣ ಆರೋಗ್ಯಾಧಿಕಾರಿ ಭೇಟಿ ಮಾಡಿ ಮಾಹಿತಿ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕ್ಷಯ ರೋಗ ಅಧಿಕಾರಿ ಡಾ. ಕೆ.ಹೆಚ್. ಗಂಗಾಧರ್ ಅವರು ಕ್ಷಯ ರೋಗದ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಉಪ ಮೇಯರ್ ಶಿಲ್ಪ ಜಯಪ್ರಕಾಶ್, ಪಾಲಿಕೆ ಸದಸ್ಯರು ಹಾಗೂ ಸ್ಥಾಯಿ ಸಮಿತಿ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.

error: Content is protected !!