`ಸಂಘರ್ಷಗಳು ಮತ್ತು ಸಾಮರಸ್ಯ’ ವಿಷಯ ಕುರಿತ ಕಾರ್ಯಕ್ರಮದಲ್ಲಿ ಮುರುಘಾ ಶ್ರೀ
ಚಿತ್ರದುರ್ಗ, ಏ.11- ಶೂನ್ಯತ್ವ ಇಡೀ ವಚನ ಸಾಹಿತ್ಯದ ಕೇಂದ್ರಬಿಂದು. ವೈದಿಕ ವ್ಯವಸ್ಥೆಯ ವಿಷಮತೆಗಳನ್ನು ನಿವಾರಿಸಲು ಮಾನವೀಯ ಮೌಲ್ಯಗಳ ಆಧಾರದ ಮೇಲೆ ಯಶಸ್ವಿಯಾದವರು ಬಸವಾದಿ ಶರಣರು ಎಂದು ಪ್ರೊ. ಮಲ್ಲಿಕಾರ್ಜುನ ಆರ್. ಹಲಸಂಗಿ ಅಭಿಪ್ರಾಯಪಟ್ಟರು.
ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗು ಎಸ್.ಜೆ.ಎಂ. ಆಂಗ್ಲ ಮಾಧ್ಯಮ ಶಾಲೆ ಚಿತ್ರದುರ್ಗ ಇವರ ಸಹಯೋಗದಲ್ಲಿ ನಡೆದ ಶರಣ ಸಂಗಮ ಕಾರ್ಯ ಕ್ರಮದಲ್ಲಿ `ಸಂಘರ್ಷಗಳು ಮತ್ತು ಸಾಮರಸ್ಯ’ ವಿಷಯ ಕುರಿತು ಅವರು ಮಾತನಾಡಿದರು.
ಸಂಘರ್ಷ ಮಾನವ ಇತಿಹಾಸದ ಆಯಾಮ ವಾಗಿಯೇ ಬೆಳೆದುಕೊಂಡು ಬಂದಿರುವ ವಿದ್ಯ ಮಾನ. ಸಂಘರ್ಷದ ಮೂಲ ಉದ್ದೇಶ ಸರಿಪಡಿ ಸುವಿಕೆ. ವರ್ಣ ವ್ಯವಸ್ಥೆ, ಜಾತಿ ವ್ಯವಸ್ಥೆಯ ಬುನಾದಿ. ಅಂದು ಜಾತಿ ವ್ಯವಸ್ಥೆಗೆ ಧಾರ್ಮಿಕ ಸ್ವರೂಪ ಕೊಡ ಲಾಯಿತು. ಅಂದಿನಿಂದ ಸಂಘರ್ಷ ಪ್ರಾರಂಭ ವಾಯಿತು. ಧಾರ್ಮಿಕ, ಸಾಂಸ್ಕೃತಿಕ ಆಯಾಮ ಗಳನ್ನು ಕೊಟ್ಟು ಗಟ್ಟಿಗೊಳಿಸಿ ಯಜಮಾನಿಕೆ ವ್ಯವಸ್ಥೆ ಉಂಟುಮಾಡಿದರು. ಶರಣ ಸಂಕುಲ ಇದರ ನಿರ್ಮೂಲನೆಗಾಗಿ ಹುಟ್ಟಿಕೊಂಡಿತು ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಶಿವಮೂರ್ತಿ ಮುರುಘಾ ಶರಣರು ಮಾತನಾಡಿ ಚಳುವಳಿ, ಹೋರಾಟಕ್ಕೆ ಉದಾತ್ತ ಧ್ಯೇಯಗಳಿವೆ. ಅದು ಸ್ವಾತಂತ್ರ್ಯ ಸಂಗ್ರಾಮವಾಗಿರಬಹುದು, ಇನ್ನಿತರೆ ಹಲವು ಹೋರಾಟಗಳಿರಬಹುದು. ಚಳುವಳಿಗಿಂತಲು ತೀವ್ರತರವಾದದ್ದು ಕ್ರಾಂತಿ. ರಷ್ಯಾ, ಅಮೆರಿಕ, ಫ್ರಾನ್ಸ್ ಕ್ರಾಂತಿಯಂತೆ ಕರ್ನಾಟಕದಲ್ಲು ಕಲ್ಯಾಣ ಕ್ರಾಂತಿಯಾಯಿತು. ಕುಟುಂಬದಲ್ಲಿದ್ದುಕೊಂಡು ಹಣ, ಆಸ್ತಿ, ಅನ್ನ, ಅರಿವೆ, ಆಶ್ರಯಕ್ಕಾಗಿ ಸಂಘರ್ಷ ಮಾಡುವವರು ಜನಸಾಮಾನ್ಯರು. ಇವರದು ಭೌತಿಕವಾಗಿರುವ ಸಂಘರ್ಷ. ಎಲ್ಲ ಕಾಲದಲ್ಲೂ ಸಾಮಾಜಿಕ ಅಸಮಾನತೆ ಇರುತ್ತದೆ. ಇದು ರಾಜಕೀಯ ಅಸಮಾನತೆಗೂ ಕಾರಣವಾಗುತ್ತದೆ. ಅದರ ಜೊತೆ ಧಾರ್ಮಿಕ ಅಸಮಾನತೆ ಇರುತ್ತದೆ. ವರ್ಣ, ವರ್ಗ, ಜಾತಿ, ಲಿಂಗ ಹಾಗೂ ವಯೋಭೇದ ಹೀಗೆ ಪಂಚ ಭೇದಗಳಿವೆ. ಇವು ಬುದ್ಧ, ಬಸವ, ಪೈಗಂಬರ್, ಗಾಂಧೀಜಿ, ಅಂಬೇಡ್ಕರ್ ಮತ್ತು ನಮ್ಮ ಕಾಲದಲ್ಲೂ ಇವೆ. ಅಸಮಾನತೆ ಇಲ್ಲದಿರುವ ಸಮಾಜ ಅದು ಸಮಸಮಾಜ. ಜ್ಞಾನಪ್ರಧಾನ ಪುಸ್ತಕಗಳನ್ನು ಓದಬೇಕು. ಪ್ರಕೃತಿ ಪುಸ್ತಕವನ್ನು ಓದಬೇಕು. ಸಮಾಜ ಸುಧಾರಕರು ಎಷ್ಟೇ ಬಂದರು ಇನ್ನೂ ಅಸಮಾನತೆ ಇದೆ. ನಾವು ಆಶಾವಾದಿಗಳಾಗಿ ಇರಬೇಕು ಎಂದರು.
ಬಸವಣ್ಣನವರದು ವೈಚಾರಿಕ ಕ್ರಾಂತಿ. ಆ ಸಂದರ್ಭದಲ್ಲಿ ಅನೇಕ ಸವಾಲುಗಳಿದ್ದವು. ಶರಣರು ವಿಚಾ ರದ ಮೂಲಕ ಕ್ರಾಂತಿ ಮಾಡಿದರು. ಶಿವಶರಣರು ಸತ್ಯವೆಂಬ ಕತ್ತಿಯನ್ನು ಹಿಡಿದು ಹೋರಾಡಿದರು. ಕೊಲ್ಲುವ ಹೃದಯವನ್ನು ಗೆಲ್ಲುತ್ತೇವೆಂಬುದು ಶರಣರ ತತ್ವ. ಸತ್ಯ, ಕರುಣೆ, ಮಮತೆ, ಪ್ರೀತಿ ಇವು ಶರಣ ತತ್ವದ ಜೀವಾಳ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಶಶಿಧರ ಉಬ್ಬಳಗುಂಡಿ ರಚನೆಯ `ಮರಣ ಮೃದಂಗ’ ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು. ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಸವರಾಜ್ ಐರಣಿ ದಾವಣಗೆರೆ ಇವರನ್ನು ಸನ್ಮಾನಿಸಲಾಯಿತು.
ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಶ್ರೀಮತಿ ಪರಂಜ್ಯೋತಿ, ಶ್ರೀಮತಿ ಪುಷ್ಪವಲ್ಲಿ, ಎಸ್.ಜೆ.ಎಂ. ಆಂಗ್ಲ ಮಾಧ್ಯಮ ಶಾಲೆಯ ಸಿಬ್ಬಂದಿ ವರ್ಗ ಮೊದಲಾದವರಿದ್ದರು.
ಜಮುರಾ ಕಲಾವಿದರು ವಚನ ಪ್ರಾರ್ಥಿಸಿ ದರು. ಇಮ್ರಾನ್ ಸ್ವಾಗತಿಸಿದರು. ಶ್ರೀಮತಿ ನೇತ್ರಾ ವತಿ ನಿರೂಪಿಸಿದರು. ಕಾಟಲಿಂಗೇಶ್ವರ ವಂದಿಸಿದರು.