ಅಭಿವೃದ್ಧಿ ಕೆಲಸ ನಮ್ಮವೆಂದು ಹೇಳಿ ಹಣ ವಸೂಲಿ

ದಾವಣಗೆರೆ, ಏ.11- ಸ್ಮಾರ್ಟ್ ಸಿಟಿ ಯೋಜನೆ, ಜಲ ಸಿರಿ ಯೋಜನೆ, ರಾಜ ಕಾಲುವೆ, ರಿಂಗ್ ರಸ್ತೆ ಎಲ್ಲವನ್ನೂ ನಾವೇ ಮಾಡಿಸುತ್ತಿದ್ದೇವೆ ಎಂದು ಜನರಿಗೆ ಸುಳ್ಳು ಹೇಳುತ್ತಾ, ಈ ಎಲ್ಲಾ ಕೆಲಸಗಳು ನಮ್ಮವೇ ಎಂದು ಅಧಿಕಾರಿಗಳಿಂದ ಹಣ ವಸೂಲಿ ಮಾಡುವ ಕೆಲಸ ದಾವಣಗೆರೆಯಲ್ಲಿ ನಡೆಯುತ್ತಿದೆ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಪರೋಕ್ಷವಾಗಿ ಬಿಜೆಪಿ ಮುಖಂಡರ ಮೇಲೆ ಹರಿಹಾಯ್ದರು.

ಗ್ರೂಪ್ ಆಫ್ ಐರನ್ ಗೇಮ್ಸ್ ದಾವಣಗೆರೆ ಹಾಗೂ ಕರ್ನಾಟಕ ರಾಜ್ಯ ಪವರ್ ಲಿಫ್ಟಿಂಗ್ ಅಸೋಸಿಯೇಷನ್  ಸಹಯೋಗದಲ್ಲಿ ನಗರದ ಕುವೆಂಪು ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ ಬೆಂಚ್ ಪ್ರೆಸ್ ಸ್ಪರ್ಧೆಗಳ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದಾವಣಗೆರೆಯಲ್ಲಿ ಸುಳ್ಳು ಹೇಳುವವರ ಸಂಖ್ಯೆ ಹೆಚ್ಚಾಗಿದೆ. ಅವರು ದಿನಕ್ಕೊಂದು ಸುಳ್ಳು ಹೇಳಲಾರಂಭಿಸಿದ್ದಾರೆ. ಒಂದು ಸುಳ್ಳನ್ನೇ ನಾಲ್ಕು ಸಾರಿ ಹೇಳಿ ಅದನ್ನೇ ನಿಜ ಎಂದು ಪ್ರತಿಪಾದಿಸುತ್ತಿದ್ದಾರೆ. ಆ ಮೂಲಕ ದಾವಣಗೆರೆಗೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದ್ದಾರೆ. ಅವರಿಗೆ ಏನೂ ಗೊತ್ತಿಲ್ಲ. ಅಧಿಕಾರ ವಹಿಸಿಕೊಂಡ ಮೇಲೆ ಆ ಎಲ್ಲಾ ಕೆಲಸಗಳು ನಮ್ಮದು ಎಂದು ಹೇಳುತ್ತಿದ್ದಾರೆ ಎಂದು ಬಿಜೆಪಿ ಮುಖಂಡರನ್ನು ತರಾಟೆಗೆ ತೆಗೆದುಕೊಂಡ ಎಸ್ಸೆಸ್, ದಾವಣಗೆರೆ ಜನ ಎಚ್ಚೆತ್ತುಕೊಳ್ಳಬೇಕು, ಪ್ರಾಮಾಣಿಕರಾಗಬೇಕು ಎಂದು ಕರೆ ನೀಡಿದರು.

ಇಂದು ಎಲ್ಲಿ ನೋಡಿದರೂ ಕೊರೊನಾ ಹೆಚ್ಚಾಗುತ್ತಿದೆ. ವೈರಾಣು ತಡೆಗೆ ಅನೇಕ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದನ್ನು ಕಾಣುತ್ತಿ ದ್ದೇವೆ. ಒಂದು ಕಡೆ ಕೊರೊನಾ ಹೆಚ್ಚಾದಂತೆ  ಮತ್ತೊಂದು ಕಡೆ ಭ್ರಷ್ಟಾಚಾರವೂ ಮಿತಿ ಮೀರುತ್ತಿದೆ.  ಪ್ರಧಾನಿ ನರೇಂದ್ರ ಮೋದಿ ಬಂದ ಮೇಲೆ ದೇಶದಲ್ಲಿ ಭ್ರಷ್ಠಾಚಾರ ಕಡಿಮೆಯಾಗುವ ಬದಲು ಮತ್ತಷ್ಟು ಹೆಚ್ಚಾಗಿದೆ. ಕರ್ನಾಟಕವೂ ಸೇರಿದಂತೆ ಇತ್ತೀಚೆಗೆ ನಡೆದ ಹಲವು ರಾಜ್ಯದ ಚುನಾವಣೆಗಳಲ್ಲಿ ದುಡ್ಡಿನ ಆಟ ನಡೆಯುತ್ತಿದೆ. ಜನ ಎಚ್ಚೆತ್ತುಕೊಳ್ಳಬೇಕೆಂದು ಪುನರುಚ್ಛರಿಸಿದರು.

ಡಿವೈಎಸ್ಪಿ ನಾಗೇಶ್ ಐತಾಳ್ ಮಾತನಾಡುತ್ತಾ, 40 ರಿಂದ 45 ವರ್ಷಗಳ ವಯೋಮಿತಿವರೆಗೆ ಮಾತ್ರ ಬೆಂಚ್ ಪ್ರೆಸ್ ನಂತಹ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ನಂತರವೂ ಕ್ರೀಡಾಪಟುಗಳು ದೈಹಿಕ ಕಸರತ್ತು ನಡೆಸುತ್ತಿರಬೇಕು. ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಂಡು, ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಸರ್ಕಾರ ಇಂತಹ ಸ್ಪರ್ಧೆಗಳಿಗೆ ಸಹಾಯ ನೀಡುವ ಮೂಲಕ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಬೇಕಿದೆ ಎಂದರು.

ಗ್ರೂಪ್ ಆಫ್ ಐರನ್ ಗೇಮ್ಸ್ ಕಾರ್ಯದರ್ಶಿ ರಜ್ವಿಖಾನ್,  ಸತೀಶ್ ಕುಮಾರ್ ಕುದ್ರೋಳಿ, ಹೆಚ್.ಟಿಪ್ಪು ಸುಲ್ತಾನ್, ಸಿಪಿಐ ಬಿ.ಹೆಚ್. ಭಾರತಿ ,  ಕೆ.ಪಿ. ಕಾರಂತ್, ಹೆಚ್.ದಾದಾಪೀರ್, ಎಂ.ಮಹೇಶ್ವರಯ್ಯ, ಕೆ.ಗಂಗಪ್ಪ, ಬಿ.ದಾದಾಪೀರ್, ಹೆಚ್.ಬಸವರಾಜ್, ಎಸ್.ನಾಗರಾಜನ್, ಪಿಎಸ್‌ಐ ಶೈಲಜಾ ಇತರರು ಉಪಸ್ಥಿತರಿದ್ದರು.

error: Content is protected !!