ಉಪ್ಪಾರ ಸಮಾಜದ ಕಾರ್ಯಕ್ರಮದಲ್ಲಿ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ
ದಾವಣಗೆರೆ, ಏ. 11 – ಪರಿಶುದ್ಧ ಕಾಯಕದಿಂದ ತನ್ನ ಹಾಗೂ ಕುಟುಂಬದವರಷ್ಟೇ ಅಲ್ಲದೇ ಸಮಾಜಕ್ಕೂ ನೆರವಾಗುವುದು ಕಾಯಕ ದಾಸೋಹ ಎಂದಿರುವ ಹೊಸದುರ್ಗ ಭಗೀರಥ ಪೀಠದ ಡಾ. ಪುರುಷೋತ್ತಮಾನಂದಪುರಿ ಸ್ವಾಮೀಜಿ, ಇಂತಹ ಕಾಯಕ ಜೀವನ ನಡೆಸುವುದೇ ಸಂಸ್ಕೃತಿ ಎಂದು ತಿಳಿಸಿದ್ದಾರೆ.
ನಗರದ ಐಟಿಐ ಕಾಲೇಜು ಆವರಣದ ಲ್ಲಿರುವ ಚೌಡೇಶ್ವರಿ ದೇವಸ್ಥಾನ ಸಮುದಾಯ ಭವದನದ ಜಿಲ್ಲಾ ಉಪ್ಪಾರ ಸಂಘ ಹಾಗೂ ಜಿಲ್ಲಾ ಉಪ್ಪಾರ ನೌಕರರ ಸಂಘ ಮತ್ತು ಜಿಲ್ಲಾ ಉಪ್ಪಾರ ಯುವಕರ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ನೂತನ ಗ್ರಾ.ಪಂ. ಸದಸ್ಯರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡುತ್ತಿದ್ದರು.
ದುಡಿದದ್ದು ನನಗಿರಲಿ ಎಂದರೆ ಪ್ರಕೃತಿ. ಸ್ವಾರ್ಥಕ್ಕಾಗಿ ದೋಚಿ – ದರೋಡೆ ಮಾಡಿದರೆ ಅದು ವಿಕೃತಿ. ಪರಿಶುದ್ಧ ಕಾಯದ ಹಾಗೂ ಪರಿಶುದ್ಧ ದುಡಿಮೆಯಿಂದ ಸಮಾಜಕ್ಕೆ ದಾನ ನೀಡುವುದೇ ಸಂಸ್ಕೃತಿ ಎಂದು ಶ್ರೀಗಳು ಹೇಳಿದರು.
ಪ್ರಾಣಿಗಳಿಗೆ ಹಾಗೂ ಕೆಲ ದೇವತೆಗಳಿಗೂ ದಕ್ಕದಂತಹ ಶ್ರೇಷ್ಠ ಜೀವನವನ್ನು ಮನುಷ್ಯ ಪಡೆದಿದ್ದಾನೆ. ಇಂತಹ ಜೀವನದಲ್ಲಿ ಅಧ್ಯಾತ್ಮಿಕ ಮೌಲ್ಯ ರೂಢಿಸಿಕೊಳ್ಳಬೇಕು. ಸಂಸ್ಕಾರವಂತರಾಗಿ ಆದರ್ಶ ಜೀವನ ನಡೆಸಿದರೆ ನಮ್ಮ ಹಾಗೂ ಬೇರೆಯವರ ಜೀವನ ಹಸನಾಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ರಾಜ್ಯ ಉಪ್ಪಾರ ಸಂಘದ ಗೌರವಾಧ್ಯಕ್ಷ ಎಸ್. ಬಸವರಾಜಪ್ಪ ತುರ್ಚಘಟ್ಟ, ಬೇರೆ ಯಾವ ಸಮಾಜದಲ್ಲೂ ಇಲ್ಲದಂತೆ ನಮ್ಮ ಸಮಾಜದಲ್ಲಿ ನಾಲ್ಕು ಸಂಘಗಳಿವೆ. ಈ ಸಂಘಗಳು ಹೋಗಿ ಒಂದೇ ಸಂಘವಾಗಬೇಕು. ನಗರದಲ್ಲಿ ಉಪ್ಪಾರರ ಸಾಂಸ್ಕೃತಿಕ ಭವನ ನಿರ್ಮಾಣವಾಗಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಹೆಚ್. ತಿಪ್ಪಣ್ಣ ತುರ್ಚಘಟ್ಟ, ಉಪ್ಪಾರ ಸಮುದಾಯದ ರಾಜಕಾರಣಿಗಳು, ಇತರೆ ಸಮುದಾಯದವರ ಒಳಗೊಂಡು ಬೆಂಬಲ ಪಡೆಯಬೇಕು. ಆಗ ಮಾತ್ರ ಗೆಲುವು ಪಡೆಯಲು ಸಾಧ್ಯ ಎಂದು ಹೇಳಿದರು.
ರಾಜ್ಯ ಉಪ್ಪಾರ ಸಂಘದ ಕಾನೂನು ಸಲಹೆಗಾರ ಯು. ಹನುಮಂತಪ್ಪ ಮತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯ ಮೇಲೆ ಗುತ್ತಿಗೆದಾರ ಆರ್ ಪರಮೇಶ್ವರಪ್ಪ, ಜಿಲ್ಲಾ ಉಪ್ಪಾರ ನೌಕರರ ಸಂಘದ ಅಧ್ಯಕ್ಷ ಎನ್.ಎಸ್. ಚಂದ್ರಪ್ಪ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾ ಪ್ರಕಾಶ್, ಪಾಲಿಕೆ ಸದಸ್ಯ ಪಿ.ಎಸ್. ಬಸವರಾಜ್, ಸಮಾಜದ ಮುಖಂಡರಾದ ಎಸ್. ಸಿದ್ದಲಿಂಗಪ್ಪ ದೊಡ್ಡಬಾತಿ, ಎನ್.ಟಿ.ಎ. ಲೋಕೇಶ್, ಜೆ.ಹೆಚ್. ಮಹಾಂತೇಶ್, ಕೆ.ಬಿ. ಗಿರೀಶ್, ಬಿ.ಆರ್. ಷಣ್ಮುಖಪ್ಪ ಮತ್ತಿತರರು ಉಪಸ್ಥಿತರಿದ್ದರು.
ಪರಮೇಶ್ವರಪ್ಪ ಪ್ರಾರ್ಥಿಸಿದರು. ಎಂ.ಎನ್. ಮಂಜುನಾಥ ಸ್ವಾಗತಿಸಿದರೆ, ಸುಮತಿ ಜಯಪ್ಪ ನಿರೂಪಿಸಿದರು.