ದಾವಣಗೆರೆ, ಏ.11- ಯಾವುದೇ ಭಯವಿಲ್ಲದೇ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ನಾಗರಿಕರು ಕೋವಿಡ್ ಲಸಿಕೆ ಪಡೆಯುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.
ಇಲ್ಲಿನ ವಿನೋಬನಗರ 1ನೇ ಮೇನ್‌ನಲ್ಲಿರುವ ಮುರುಘ ರಾಜೇಂದ್ರ ಪ್ರೌಢಶಾಲೆಯಲ್ಲಿ ಇಂದು ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಆರೋಗ್ಯ ಇಲಾಖೆಯಿಂದ ಆಯೋಜಿಸಿದ ಕೋವಿಡ್ ಲಸಿಕೆ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೋವಿಡ್ ಲಸಿಕೆ ಪಡೆಯುವುದರಿಂದ ಯಾವುದೇ ಸೈಡ್ ಎಫೆಕ್ಟ್ ಆಗುವುದಿಲ್ಲ. ಕೋವಿಡ್ ತಡೆಯಲು ಮುಂಜಾಗ್ರತಾ ಕ್ರಮಗಳಾದ ಮಾಸ್ಕ್ ಧರಿಸುವುದು, ಅಂತರ ಕಾಪಾಡುವುದು, ಜನಜಂಗುಳಿ ಇರುವೆಡೆ ಹೋಗದೇ ಇರುವುದು, ಸ್ಯಾನಿಟೈಸರ್ ಬಳಕೆ ಮಾಡುವುದರಿಂದ ಕೊರೊನಾ ತಡೆಗಟ್ಟಲು ಸಾಧ್ಯ. ಈ ಕಾರ್ಯಕ್ಕೆ ಜಿಲ್ಲಾಡಳಿತದೊಂದಿಗೆ ಸಾರ್ವಜನಿಕರು ಕೂಡ ಸಹಕರಿಸಬೇಕೆಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ್ ಮಾತನಾಡಿ, ರಾಷ್ಟ್ರಮಟ್ಟದಲ್ಲಿ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಮಾ. 1 ರಿಂದ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವ ಕಾರ್ಯಕ್ರಮ ನಡೆಯುತ್ತಾ ಇದೆ. ಕೊರೊನಾ 2ನೇ ಅಲೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಎಲ್ಲರಿಗೂ ರೋಗ ನಿರೋಧಕ ಶಕ್ತಿಯ ಅವಶ್ಯಕತೆ ಇದೆ. ಯಾವುದೇ ರೀತಿಯ ತೊಂದರೆಯಾಗಲ್ಲ. ಕೊರೊನಾ ಬಂದರೂ ತೊಂದರೆಯಾಗಲ್ಲ. ಖಂಡಿತಾ ಗುಣಮುಖರಾಗುತ್ತಾರೆ. ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟವರು 4 ಲಕ್ಷದ 17 ಸಾವಿರ ಇದ್ದಾರೆ. ಇಲ್ಲಿವರೆಗೂ 1 ಲಕ್ಷ 1 ಸಾವಿರ ಜನರಿಗೆ ಲಸಿಕೆ ಹಾಕಿದ್ದೇವೆ. ಇದನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ಮಾಡುವ ಪ್ರಯತ್ನದಲ್ಲಿದ್ದೇವೆ. ಈಗಾಗಲೇ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆ, ಜಿಲ್ಲಾಸ್ಪತ್ರೆಯ 100 ಕೇಂದ್ರ ಹಾಗೂ 115 ಉಪ ಕೇಂದ್ರಗಳಲ್ಲಿ ಲಸಿಕೆ ಮಾಡಿದ್ದೇವೆ. 5 ಖಾಸಗಿ ಆಸ್ಪತ್ರೆಗಳು ಸೇರಿದಂತೆ ಸುಮಾರು 220 ಕೇಂದ್ರಗಳಲ್ಲಿ ಲಸಿಕೆ ಕೊಡುವ ಕಾರ್ಯ ಮಾಡುತ್ತಿದ್ದೇವೆ. ಹೊಸ ಗೈಡ್‌ಲೈನ್ಸ್ ಪ್ರಕಾರ 45 ವರ್ಷ ಮೇಲ್ಪಟ್ಟವರು ಎಲ್ಲಿ 100 ಜನ ಇರುತ್ತಾರೋ ಅಲ್ಲಿಗೇ ಹೋಗಿ ಲಸಿಕೆ ನೀಡುವ ಯೋಜನೆ ಹಾಕಿಕೊಂಡಿದ್ದೇವೆ. ಯಾವುದೇ ದೊಡ್ಡ ಅಡ್ಡಪರಿಣಾಮಗಳು ಏನೂ ಆಗಿಲ್ಲ. ಲಸಿಕೆ ಹಾಕಿದಾಗ ಸ್ವಲ್ಪ ಮೈ ಕೈ ನೋವು, ಸುಸ್ತು, ಜ್ವರ ಬರಬಹುದು ಅದು ಬಿಟ್ಟು ಏನೂ ಆಗಿಲ್ಲ. ಅತೀ ಸುರಕ್ಷಿತವಾಗಿದೆ. ನಮ್ಮ ಉದ್ದೇಶ ನಮ್ಮ ಜಿಲ್ಲೆಯಲ್ಲಿ ಉಳಿದಿರುವ 3 ಲಕ್ಷ ಜನರಿಗೂ ಈ ಲಸಿಕೆ ತಲುಪಿ, ಎಲ್ಲರಿಗೂ ಕೊರೊನಾ ಬಂದರೂ ಯಾವುದೇ ತೊಂದರೆಯಾಗಬಾರದು ಎಂಬುದು ಆರೋಗ್ಯ ಇಲಾಖೆ ಉದ್ದೇಶವಾಗಿದೆ. ಮಹಾನಗರಪಾಲಿಕೆ, ಸಂಘ-ಸಂಸ್ಥೆಯವರು ಸಹಕಾರ ಕೊಡುತ್ತಿದ್ದಾರೆ. ಹಳೇ ದಾವಣಗೆರೆಯಲ್ಲಿ ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ. ಮಹಾನಗರ ಪಾಲಿಕೆ ಮೇಯರ್, ಪಾಲಿಕೆ ಸದಸ್ಯರು, ಧರ್ಮಗುರುಗಳು ಸೇರಿ ನಾಳೆ ಅಥವಾ ನಾಡಿದ್ದು ಒಂದು ಮೀಟಿಂಗ್ ಮಾಡಿ ಅಲ್ಲಿನ ಜನರ ಮನವೊಲಿಸಿ ಲಸಿಕೆ ನೀಡುವ ಕೆಲಸ ಮಾಡುವ ಯೋಜನೆ ಇದೆ ಎಂದರು.
ಮಹಾನಗರ ಪಾಲಿಕೆ ವಿಪಕ್ಷ ನಾಯಕ, ಸ್ಥಳೀಯ ವಾರ್ಡ್ ಸದಸ್ಯ ಎ.ನಾಗರಾಜ್ ಮಾತನಾಡಿ, ಈ ಭಾಗದಲ್ಲಿ ಕಳೆದೆರಡು ದಿನಗಳಿಂದ ಮೈಕ್ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಮೂಲಕ ಲಸಿಕೆ ಕಾರ್ಯಕ್ರಮ ಕುರಿತು ಮಾಹಿತಿ ನೀಡಲಾಗಿದ್ದು, ಜನರೂ ಸಹಾ ಲಸಿಕೆ ಪಡೆಯಲು ಬರುತ್ತಿದ್ದಾರೆ. ಏ. 11, 12, 13 ಮೂರು ದಿನಗಳ ಕಾಲ ಈ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಯಾವುದೇ ಭಯ ಪಡದೇ ಪ್ರತಿಯೊಬ್ಬ 45 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯುವಂತೆ ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಮಹಾಪೌರ ಎಸ್.ಟಿ.ವೀರೇಶ್, ಸದಸ್ಯರಾದ ಗಡಿಗುಡಾಳ ಮಂಜುನಾಥ್, ಕೆ.ಚಮನ್‌ಸಾಬ್, ಡಾ. ಮೀನಾಕ್ಷಿ, ಡಾ.ನಟರಾಜ್, ಡಾ.ಪ್ರಿಯಾಂಕ, ಕಿರಿಯ ಆರೋಗ್ಯ ಸಹಾಯಕರಾದ ಗೌರಮ್ಮ, ವೀಣಾ, ಗೌರಿ, ಸಾಮಾಜಿಕ ಕಾರ್ಯಕರ್ತ ಎಂ.ಜಿ.ಶ್ರೀಕಾಂತ್, ಬೆಳ್ಳೂಡಿ ಮಂಜುನಾಥ್, ರವಿ, ನಂದೀಶ್ ಬಾದಾಮಿ, ಸತೀಶ್ ಆಚಾರ್, ಚನ್ನಬಸವ ಶೀಲವಂತ್, ಎಸ್.ರವಿಕುಮಾರ್ ಸೇರಿದಂತೆ ಇತರರು ಇದ್ದರು.