ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಶೀಘ್ರ ಕ್ರಮ

ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ

ಹರಿಹರ, ಫೆ.9- ವಾಲ್ಮೀಕಿ ನಾಯಕ ಜನಾಂಗಕ್ಕೆ ಮೀಸಲಾತಿಯನ್ನು ಶೇ.7.5ರಷ್ಟು ಹೆಚ್ಚಿಸಬೇಕೆಂಬ ಬೇಡಿಕೆಯನ್ನು ಶೀಘ್ರವೇ ಈಡೇರಿಸಲು ಪ್ರಯತ್ನಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.

ತಾಲ್ಲೂಕಿನ ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಆವರಣದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ  ವಾಲ್ಮೀಕಿ ಜಾತ್ರಾ ಮಹೋತ್ಸವದ ಎರಡನೇ ದಿನವಾದ ಮಂಗಳವಾರ ಬೃಹತ್ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಮೀಸಲಾತಿ ಹೆಚ್ಚಳ ಮಾಡಬೇಕೆನ್ನುವ ನಿಮ್ಮ ಬಹು ದಿನದ ಬೇಡಿಕೆ ಈಡೇರಿಸಲು ಈಗಾಗಲೇ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಸಮಿತಿ ರಚಿಸಲಾಗಿರುವುದು ತಿಳಿದ ವಿಷಯವೇ. ಸಮಿತಿ ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಪರಿಶೀಲನೆಯ ಹಂತದಲ್ಲಿದೆ. ಆದಷ್ಟು ಬೇಗ ಮಂತ್ರಿಮಂಡಲದ ಸಭೆಯಲ್ಲಿ ಚರ್ಚಿಸಿ ನಿಮ್ಮ ನ್ಯಾಯಯುತ ಬೇಡಿಕೆಯನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ವಾಲ್ಮೀಕಿ ನಾಯಕ ಸಮುದಾಯಕ್ಕೆ ಭರವಸೆ ನೀಡಿದರು.

ಸಮಾವೇಶಕ್ಕೆ ಬರಲು ಸಾಧ್ಯವಾಗದಿದ್ದರೂ ಸ್ವಾಮೀಜಿಯವರ ಹಾಗೂ ಸಮುದಾಯದವರ ಭಾವನೆಗಳನ್ನು ತಿಳಿದುಕೊಳ್ಳಲು ಬಂದಿದ್ದೇನೆ ಎಂದ ಮುಖ್ಯಮಂತ್ರಿಗಳು, ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿ ಯವರು ಮೀಸಲಾತಿಗಾಗಿ ಮುಂದಿನ ಹೋರಾಟ ನಡೆಸಲು ಆಸ್ಪದ ನೀಡದಂತೆ ಬೇಡಿಕೆ ಈಡೇರಿಸುವುದಾಗಿ ಪುನರುಚ್ಛರಿಸಿದರು.

ಗುರುಪೀಠದಲ್ಲಿ ಮೂಲ ಸೌಕರ್ಯ ಕಲ್ಪಿಸಲು 10.80 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ. 5.40 ಕೋಟಿ ರೂ.ಗಳನ್ನು ಈಗಾಗಲೇ ಜಿಲ್ಲಾಧಿಕಾರಿಗಳ ಖಾತೆಗೆ ವರ್ಗಾಯಿಸಲಾಗಿದೆ ಎಂದು ಹೇಳಿದರು.

ಆದಿ ಕವಿ ಮಹರ್ಷಿ ವಾಲ್ಮೀಕಿ ಪ್ರಪಂಚದ ಚರಿತ್ರೆಯಲ್ಲಿ ಮಿಂಚಿದ ಧ್ರುವತಾರೆ. ಅಧ್ಯಾತ್ಮಿಕ ಚಿಂತಕ, ಶಿಕ್ಷಣ ತಜ್ಞರಾಗಿ ಅವರು ಜನ ಸಾಮಾನ್ಯರ ಮನದಲ್ಲಿ ನೆಲೆಸಿದ್ದಾರೆ. ಮಾನವೀಯ ಹಾಗೂ  ಸಾಮಾಜಿಕ ಮೌಲ್ಯಗಳುಳ್ಳ ರಾಮಾಯಣದಂತಹ ಮಹಾನ್ ಕೃತಿಯನ್ನು ಕೊಡುಗೆಯಾಗಿ ನೀಡಿದ ಶ್ರೇಷ್ಠ ದಾರ್ಶನಿಕ ಮಹರ್ಷಿ ವಾಲ್ಮೀಕಿ ಎಂದು ಬಣ್ಣಿಸಿದರು.  

ಭಾರತದ ಸಂಸ್ಕೃತಿಗೆ ವಾಲ್ಮೀಕಿ ಸಮುದಾಯದ ಕೊಡುಗೆ ಅಪಾರವಾದದ್ದು. ಸಮುದಾಯ ಸುಶಿಕ್ಷಿತರಾದಾಗ ಮಾತ್ರ ಜನಾಂಗದ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಸಮಾಜವು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಮುಂದುವರೆಯಲು ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ರಚಿಸಿ, ಆ ಮೂಲಕ ಅನೇಕ ಸವಲತ್ತುಗಳನ್ನು ನೀಡಲಾಗುತ್ತಿದೆ.ಸಮುದಾಯದ ಆರ್ಥಿಕ ಸ್ವಾವಲಂಬನೆಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ನೂತನ ಹೆಚ್ಚುವರಿ ಶಾಲಾ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಮುಖ್ಯಮಂತ್ರಿ ಯಡಿಯೂರಪ್ಪನವರು ನಾಯಕ ಸಮಾಜಕ್ಕೆ ಶೇ.7.5ರಷ್ಟು ಮೀಸಲಾತಿ ಹೆಚ್ಚಿಸುತ್ತಾರೆಂಬ ಭರವಸೆ ಇದೆ. ನಾವು ತಾಳ್ಮೆಯಿಂದ ಇರಬೇಕಿದೆ. ಪರಿಶಿಷ್ಚ ಜಾತಿ, ಪರಿಶಿಷ್ಟ ಪಂಗಡಕ್ಕೆ ನ್ಯಾಯ ಒದಗಿಸಲೆಂದೇ ನನಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಸ್ಥಾನ ನೀಡಿದ್ದಾರೆ.  ಮುಖ್ಯಮಂತ್ರಿಗಳು ಹಾಗೂ ಬಿಜೆಪಿಯ ಬಗ್ಗೆ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದರು.

ಬೇರೆ ಸಮುದಾಯಗಳು ಎಸ್ಟಿಗೆ ಸೇರ್ಪಡೆಗೊಳ್ಳಲು ಹೋರಾಟ ನಡೆಸುತ್ತಿವೆ. ಇಂತಹ ವೇಳೆ ನಾವು ತಾಳ್ಮೆಯಿಂದ ನಮ್ಮ ಹಕ್ಕು ಪಡೆಯಬೇಕಿದೆ. ನಮಗೆ ರಾಜಕೀಯಕ್ಕಿಂತ ಸಮುದಾಯ ಮುಖ್ಯ. ಬೇರೆ ಜಾತಿ ಹೋರಾಟಗಳಿಗೆ ಕಿವಿಗೊಡಬೇಡಿ ಎಂದು ಹೇಳಿದರು.

ಶ್ರೀಗಳು ವಾಲ್ಮೀಕಿ ಜಾತ್ರೆ ಮೂಲಕ ಸಮಾಜವನ್ನು ಜಾಗೃತಗೊಳಿಸುವ ಕಾರ್ಯ ಮಾಡುತ್ತಿದ್ದಾರೆ. ಜಾತ್ರೆಯಲ್ಲಿ ಆತ್ಮವಿಮರ್ಶೆ ಮಾಡಿಕೊಳ್ಳುವ ಕೆಲಸವಾಗಬೇಕು. ಶೈಕ್ಷಣಿಕವಾಗಿ ಪ್ರಗತಿಹೊಂದುವ ಮೂಲಕ ಯುವಕರು ಸಮುದಾಯದ ಪ್ರಗತಿಗೂ ಮುಂದಾಗಬೇಕು. ಬೇಡುವ ಕೈಗಳಾಗದೆ ಕೊಡುವ ಕೈಗಳಾಗಬೇಕು ಎಂದು ಕರೆ ನೀಡಿದರು.

ಮಾಜಿ ಸಚಿವರೂ, ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಸತೀಶ್ ಲ.ಜಾರಕಿಹೊಳಿ ಮಾತನಾಡುತ್ತಾ, ಕಳೆದ ಬಾರಿಯೇ ಮುಖ್ಯಮಂತ್ರಿಗಳು ಪ್ರತ್ಯೇಕ ಸಚಿವಾಲಯ ಮಾಡುವುದಾಗಿ ಭರವಸೆ ನೀಡಿ, ಪತ್ರವನ್ನೂ ಬರೆದಿದ್ದರು. ಆದರೆ ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಪ್ರತ್ಯೇಕ ಸಚಿವಾಲಯವನ್ನು ಈ ಬಾರಿಯಾದರೂ ಮಾಡಬೇಕು ಎಂದು ಮನವಿ ಮಾಡಿದರು.

ಮೀಸಲಾತಿ ಹೆಚ್ಚಳ ಮಾಡಬೇಕೆಂಬುದು ಬಹು ದಿನದ ಬೇಡಿಕೆಯಾಗಿದೆ. ಹಿಂದಿನ ಸರ್ಕಾರ ಮೀಸಲಾತಿ ಹೆಚ್ಚಿಸದ ಕಾರಣ ತಕ್ಕ ಪಾಠ ಕಲಿಸಿದ್ದೀರಿ. ಮೀಸಲಾತಿ ಹೆಚ್ಚಿಸುವುದನ್ನು ವಿಳಂಬ ಮಾಡಿದ್ದಕ್ಕೆ  ನಾವೂ ಪಶ್ಚಾತ್ತಾಪ ಪಡುತ್ತಿದ್ದೇವೆ.  ನ್ಯಾಯ ಸಮ್ಮತವಾಗಿರುವ ಸಮಾಜದ ಬೇಡಿಕೆ ಈಡೇರಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.

ಮೂವತ್ತು ವರ್ಷಗಳಿಂದ ಮೀಸಲಾತಿ ಹೆಚ್ಚಳದ ಬೇಡಿಕೆ ಇದೆ. ಇದು ನಮಗೆ ಸಿಗಬೇಕಾದ ಹಕ್ಕು. ಆದ್ದರಿಂದ ಕೇಳುತ್ತಿದ್ದೇವೆ. ಈಗಾಗಲೇ ರಾಜಕೀಯ ಮೀಸಲಾತಿ ಸಿಕ್ಕಿದೆ. ಉದ್ಯೋಗದಲ್ಲೂ ಮೀಸಲಾತಿ ಸಿಕ್ಕರೆ ಸಮಾಜದ ಪ್ರಗತಿ ಸಾಧ್ಯವಿದೆ. ಆದ್ದರಿಂದ ಯಾವುದೇ ಪಕ್ಷದಲ್ಲಿದ್ದರೂ ಸಮಾಜದ ವಿಷಯದಲ್ಲಿ ಎಲ್ಲರೂ ಒಂದಾಗಿದ್ದೇವೆ. ಸ್ವಾಮೀಜಿಗಳು ತೆಗೆದುಕೊಳ್ಳುವ ಎಲ್ಲಾ ನಿರ್ಧಾರ ಗಳಿಗೂ ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.

ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರೂ ಆದ ಶಾಸಕ ನರಸಿಂಹನಾಯಕ (ರಾಜುಗೌಡ್ರು) ಮಾತನಾಡುತ್ತಾ, ಸಮಾಜದ ಮೂಗಿಗೆ ತುಪ್ಪ ಸವರುವ ಕೆಲಸ ಮಾಡದೆ, ಶಾಶ್ವತವಾಗಿ ಮೀಸಲಾತಿ ಸಿಗುವಂತೆ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಮೀಸಲಾತಿ ನೀಡಿದರೆ ವಾಲ್ಮೀಕಿಯಂತೆ ಮುಖ್ಯಮಂತ್ರಿಗಳೂ ಸಹ ಸಮಾಜದಿಂದ ಪೂಜಿಸಲ್ಪಡುತ್ತಾರೆ ಎಂದರು.

ಅಗತ್ಯವಾದರೆ ನಮಗೆ ನೀಡಿರುವ  ರಾಜಕೀಯ ಸ್ಥಾನಮಾನಗಳನ್ನು ಹಿಂಪಡೆದು ಸಮಾಜಕ್ಕೆ ಆದಷ್ಟು ಬೇಗ ಮೀಸಲಾತಿ ಹೆಚ್ಚಳ ಮಾಡಬೇಕು ಎಂದ ಅವರು, ಶ್ರೀಮಠದ ಅಭಿವೃದ್ಧಿಗೆ 10 ಕೋಟಿ ರೂ.ಗಳನ್ನು ನೀಡುವುದಾಗಿ ರಮೇಶ್ ಜಾರಕಿಹೊಳಿ ಅವರು ಹೇಳಿದ್ದು, ಅವರಿಗೆ ಅಭಿನಂದಿಸುವುದಾಗಿ ಹೇಳಿದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸರ್ಕಾರ ವಾಲ್ಮೀಕಿ ಜನಾಂಗದ ಬೇಡಿಕೆ ಈಡೇರಿಸಬೇಕು. ಕಾಂಗ್ರೆಸ್ ಎಂದಿಗೂ ವಾಲ್ಮೀಕಿ ಜನಾಂಗದೊಂದಿಗೆ ಇರಲಿದೆ ಎಂದರು.

ಪ್ರಾಧ್ಯಾಪಕ ಡಾ.ಎ.ಬಿ. ರಾಮಚಂದ್ರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಶ್ರೀಮಠದ ಅಭಿವೃದ್ಧಿಗಾಗಿ 1 ಕೋಟಿ ರೂ. ಹಣ ನೀಡಿದರು.

ಹೊಳೆನರಸೀಪುರ ಶಾಸಕ ಹೆಚ್.ಡಿ. ರೇವಣ್ಣ, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರು, ದಾವಣಗೆರೆ ದಕ್ಷಿಣ ಶಾಸಕರೂ ಆದ ಶಾಮನೂರು ಶಿವಶಂಕರಪ್ಪ, ಸಂಸದ ಜಿ.ಎಂ. ಸಿದ್ದೇಶ್ವರ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಸಂಡೂರು ಶಾಸಕ ಇ.ತುಕಾರಾಂ, ಜಗಳೂರು ಶಾಸಕ, ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ವಿ. ರಾಮಚಂದ್ರ, ರಾಜ್ಯ ರಸ್ತೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಶಿವನಗೌಡ ನಾಯಕ, ಮಾಯಕೊಂಡ ಶಾಸಕ ಪ್ರೊ.ಲಿಂಗಣ್ಣ, ಸಂಸದ ರಾದ ಅಮರೇಶನಾಯಕ, ವೈ.ದೇವೇಂದ್ರಪ್ಪ,  ಎ.ನಾರಾಯಣಸ್ವಾಮಿ, ಮಾಜಿ ಸಂಸದರಾದ ವೈ.ವೇಂದ್ರಪ್ಪ, ವಿ.ಎಸ್. ಉಗ್ರಪ್ಪ, ಭಗವಂತನಾಯಕ, ಶಾಸಕರುಗಳಾದ ರಾಜವೆಂಕಟಪ್ಪ ನಾಯಕ, ಅರುಣಕುಮರ ಪೂಜಾರ್, ಡಾ.ಯತೀಂದ್ರ ಸಿದ್ಧರಾಮಯ್ಯ, ಭೀಮಾನಾಯ್ಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ,  ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಅಪ್ಪಣ್ಣ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ವೇಣುಗೋಪಾಲ ರೆಡ್ಡಿ, ಜೆಡಿಎಸ್ ಜಿಲ್ಲಾಧ್ಯಕ್ಷ ಚಿದಾನಂದಪ್ಪ, ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಹೆಚ್.ವಿ. ಶಿವಶಂಕರ್,  ಕ ಕಂಪ್ಲಿ ಗಣೇಶ್, ಪ್ರತಾಪಗೌಡ ಪಾಟೀಲ, ಅನಿಲ್ ಚಿಕ್ಕಮಾದು, ಎಂ.ಎಸ್. ಸೋಮಲಿಂಗಪ್ಪ, ಟಿ.ಈಶ್ವರ್  ಇತರರು ಉಪಸ್ಥಿತರಿದ್ದರು.


ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಶೀಘ್ರ ಕ್ರಮ - Janathavaniಕೆ.ಎನ್. ಮಲ್ಲಿಕಾರ್ಜುನ ಮೂರ್ತಿ,
[email protected]

error: Content is protected !!