ನಟ ಕಿಚ್ಚ ಸುದೀಪ್‌ಗೆ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ

ರಾಜನಹಳ್ಳಿ (ಚಳ್ಳಕೆರೆ ತಿಪ್ಪೇಸ್ವಾಮಿ ವೇದಿಕೆ), ಫೆ.9- ಇಲ್ಲಿನ ವಾಲ್ಮೀಕಿ ಗುರುಪೀಠದಲ್ಲಿ ನಡೆದ 3ನೇ ವರ್ಷದ ಐತಿಹಾಸಿಕ ವಾಲ್ಮೀಕಿ ಜಾತ್ರೆಯ ಸಮಾವೇಶದಲ್ಲಿ ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಅವರಿಗೆ `ವಾಲ್ಮೀಕಿ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ವಾಲ್ಮೀಕಿ ಅವರ ಬೆಳ್ಳಿ ಮೂರ್ತಿ, ಪ್ರಶಸ್ತಿ ಪತ್ರ ಮತ್ತು 1 ಲಕ್ಷ ರೂ. ಚೆಕ್ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಇದೇ ಮೊದಲ ಬಾರಿಗೆ ಮಠದಿಂದ `ವಾಲ್ಮೀಕಿ ರತ್ನ’ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಕಲೆ, ಸಾಹಿತ್ಯ ಸೇರಿದಂತೆ ವಿವಿಧ ರಂಗಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಪ್ರತಿ ವರ್ಷ ವಾಲ್ಮೀಕಿ ಜಾತ್ರೆ ಯಲ್ಲಿ ಈ ಪ್ರಶಸ್ತಿ ನೀಡಲು ನಿರ್ಧರಿಸಿ, ಈ ವರ್ಷ ನಟ ಸುದೀಪ್ ಅವರಿಗೆ ಪ್ರಶಸ್ತಿ ನೀಡಿರುವುದು  ಸಂತೋಷ ತಂದಿದೆ.

ಸುದೀಪ್ ಅವರು ನಮ್ಮ ಸಮಾಜದಲ್ಲಿ ಹುಟ್ಟಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಚಿತ್ರರಂಗದಲ್ಲಿ ಯಶಸ್ವಿ 25 ವರ್ಷಗಳನ್ನು ಪೂರೈಸಿ ರುವ ಸುದೀಪ್ ಅವರು ಕನ್ನಡ ಅಷ್ಟೇ ಅಲ್ಲದೇ ಹಿಂದಿ, ತೆಲುಗು, ತಮಿಳು ಚಿತ್ರರಂಗದಲ್ಲೂ ಹೆಸರು ಮಾಡಿದ್ದಾರೆ. ಅವರು ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ ಎಂದರು.

ಪ್ರಶಸ್ತಿ ಸ್ವೀಕರಿಸಿದ ನಟ ಸುದೀಪ್ ಮಾತನಾಡಿ, ಮಠದಿಂದ ಇಂತಹ ದೊಡ್ಡ ಪ್ರಶಸ್ತಿಯ ಗೌರವ ಸಿಕ್ಕಿರುವುದು ಸಂತಸ ತಂದಿದೆ. ಈ ಪ್ರಶಸ್ತಿಗೆ ನಾನು ಅರ್ಹನೋ ಅಲ್ಲವೋ ಎಂಬುದು ಗೊತ್ತಿಲ್ಲ. ಶ್ರೀಗಳ ಹಾಗೂ ನಿಮ್ಮೆಲ್ಲರ ಈ  ಅಭಿಮಾನ, ಪ್ರೀತಿಗೆ ನಾನು ಚಿರಋಣಿಯಾಗಿರುತ್ತನೆಂ ದರು. ಪ್ರೇಕ್ಷಕರ ಅಪೇಕ್ಷೆಯಂತೆ ಹಾಡನ್ನು ಹಾಡಿ ರಂಜಿಸಿದರು.

ಸಂಸದ ಅರಸೀಕೆರೆ ದೇವೇಂದ್ರಪ್ಪ, ಶಾಸಕರಾದ ಎಸ್.ವಿ.ರಾಮಚಂದ್ರ, ರಾಜಾ ವೆಂಕಟಪ್ಪ ನಾಯಕ, ಅರುಣ್‌ಕುಮಾರ್, ಮುಖಂಡರಾದ ಸಿರಿಗೆರೆ ತಿಪ್ಪೇಶ್, ಟಿ.ಈಶ್ವರ್, ಹೊದಿಗೆರೆ ರಮೇಶ್, ಹರ್ತಿಕೋಟೆ ವೀರೇಂದ್ರ ಸಿಂಹ, ಡಾ. ಎ.ಬಿ.ರಾಮಚಂದ್ರಪ್ಪ, ಬಿ.ವೀರಣ್ಣ, ಭರತ್ ಮುಗದೂರು, ಶ್ರೀನಿವಾಸ್ ದಾಸಕರಿಯಪ್ಪ, ಕೆಟಿಜಿ ನಗರ ಲಕ್ಷ್ಮಣ, ಪತ್ರಕರ್ತ ಜಿಗಳಿ ಪ್ರಕಾಶ್ ಮತ್ತಿತರರು ಈ ವೇಳೆ ಹಾಜರಿದ್ದರು.

error: Content is protected !!