ದಾವಣಗೆರೆ ವಿಶ್ವವಿದ್ಯಾನಿಲಯ ಕೋವಿಡ್ ಲಸಿಕಾ ಅಭಿಯಾನದಲ್ಲಿ ಕುಲಪತಿ ಪ್ರೊ. ಹಲಸೆ ಅಭಿಮತ
ದಾವಣಗೆರೆ, ಜು. 4- ಜೀವವಿದ್ದರೆ ಜೀವನ, ಬದುಕಿದರೆ ಭವಿಷ್ಯ ಎಂಬ ಸೂತ್ರ ಅರಿತು ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಲು ಸ್ವಯಂ ಆಸಕ್ತಿಯಿಂದ ಮುಂದಾಗಬೇಕು ಎಂದು ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಸಲಹೆ ನೀಡಿದರು.
ಕೋವಿಡ್ 19 ನಿಯಂತ್ರಣಕ್ಕೆ ದಾವಣಗೆರೆ ವಿಶ್ವವಿದ್ಯಾ ನಿಲಯವು ತನ್ನ ವ್ಯಾಪ್ತಿಯ ಎಲ್ಲ ಕಾಲೇಜು ಮತ್ತು ವಿಶ್ವ ವಿದ್ಯಾನಿಲಯದಲ್ಲಿ ಏರ್ಪಡಿಸಿದ್ದ 2ನೇ ಸುತ್ತಿನ ಲಸಿಕಾ ಅಭಿ ಯಾನ ಸಪ್ತಾಹದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿಶ್ವವಿದ್ಯಾನಿಲಯಕ್ಕೆ ವಿದ್ಯಾರ್ಥಿಗಳು, ಪ್ರಾಧ್ಯಾಪಕರೇ ಆಸ್ತಿ. ಅವರ ಆರೋಗ್ಯ ರಕ್ಷಣೆ ಮಾಡುವುದು ವಿಶ್ವವಿದ್ಯಾನಿಲಯದ ಜವಾಬ್ದಾರಿ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳೂ ಸಹ ಪ್ರತಿಯೊಬ್ಬರ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಿದ್ದು, ಅದರ ಭಾಗವಾಗಿ ವಿಶ್ವವಿದ್ಯಾನಿಲಯ ಕರ್ತವ್ಯ ನಿರ್ವಹಿಸುತ್ತಿದೆ ಎಂದು ಅವರು ತಿಳಿಸಿದರು.
ವಿಶ್ವವಿದ್ಯಾನಿಲಯದ ವೈದ್ಯಾಧಿಕಾರಿ ಮತ್ತು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ರಾಘವನ್ ಮಾತನಾಡಿ, ಕೋವಿಡ್ ಲಸಿಕೆಯು ಜೀವಾಪಾಯವನ್ನು ತಡೆಯಲು ನೆರವಾಗಲಿದ್ದು, ಅದಕ್ಕಾಗಿ ವಿಶ್ವವಿದ್ಯಾನಿಲಯದಲ್ಲಿ ಕಾರ್ಯಕ್ರಮ ಆಯೋಜಿಸಿದೆ ಎಂದು ಹೇಳಿದರು.
ಕುಲಸಚಿವರಾದ ಪ್ರೊ. ಗಾಯತ್ರಿ ದೇವರಾಜ್, ಪರೀಕ್ಷಾಂಗ ಕುಲಸಚಿವರಾದ ಪ್ರೊ. ಎಚ್.ಎಸ್. ಅನಿತಾ ಅವರುಗಳು ಮಾತನಾಡಿದರು.
ಹಣಕಾಸು ಅಧಿಕಾರಿ ಡಿ. ಪ್ರಿಯಾಂಕ, ವಿವಿಯ ಕೋವಿಡ್ ಅಧಿಕಾರಿ ಡಾ. ಶರತ್, ಎನ್ನೆಸ್ಸೆಸ್ ಅಧಿಕಾರಿ ಡಾ. ಗಿರೀಶ್, ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಡಾ. ಮಹಾ ಬಲೇಶ್ವರ, ಶಿಕ್ಷಣ ನಿಕಾಯದ ಡೀನ್ ಡಾ. ಕೆ. ವೆಂಕಟೇಶ, ವಾಣಿಜ್ಯ ನಿಕಾಯದ ಡೀನ್ ಪ್ರೊ. ಜೆ.ಕೆ. ರಾಜು, ಪ್ರಾಧ್ಯಾ ಪಕ ಪ್ರೊ. ಲಕ್ಷ್ಮಣ, ಆರೋಗ್ಯ ಅಧಿಕಾರಿ ಡಾ. ಸಂತೋಷ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.