ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ: ಕಾಡಾ ಅಧ್ಯಕ್ಷರ ಭರವಸೆ
ಹೊನ್ನಾಳಿ, ಜು.2- ಅಪ್ಪರ್ ತುಂಗಾ ಮೇಲ್ದಂಡೆ ಕಾಲುವೆ ವ್ಯಾಪ್ತಿಯ ರೈತರುಗಳ ಬೆಳೆಗೆ 10 ದಿನಗಳಿಂದ ಮಳೆ ಬರದ ಕಾರಣ ಜೋಳ, ಶೇಂಗಾ, ಎಲೆಬಳ್ಳಿ ಸೇರಿದಂತೆ, ಅನೇಕ ಬೆಳೆಗಳು ನೀರಿನ ಅಭಾವ ಎದುರಿಸುತ್ತಿದ್ದು, ಕಾಲುವೆಗೆ ಕೂಡಲೇ ನೀರು ಹರಿಸುವಂತೆ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಕಾಡಾ ಅಧ್ಯಕ್ಷರಾದ ಶ್ರೀಮತಿ ಪವಿತ್ರ ರಾಮಯ್ಯ ಅವರಿಗೆ ಮನವಿ ನೀಡಿ ಒತ್ತಾಯಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ದೊಡ್ಡೇರಹಳ್ಳಿ ನಾಗರಾಜಪ್ಪ, ಮಲವ ಗೊಪ್ಪ ಶಿವಮೊಗ್ಗ ಕಛೇರಿಯಲ್ಲಿ ಮನವಿ ನೀಡಿ ಮಾತನಾಡಿ, ಅಪ್ಪರ್ ತುಂಗಾ ಮುಖ್ಯ ಕಾಲುವೆ ವ್ಯಾಪ್ತಿಯ ಹಳ್ಳಿಯ ರೈತರ ಬೆಳೆಗಳಿಗೆ ನೀರಿನ ಸಮಸ್ಯೆಯಾಗಿದ್ದು, ತುಂಗಭದ್ರಾ ನದಿಗೆ ವ್ಯರ್ಥವಾಗಿ ನೀರು ಹರಿಬಿಡುವ ಬದಲು ಮುಖ್ಯ ಕಾಲುವೆಗೆ ನೀರು ಹರಿಸುವುದರಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದರು.
ತಾಲ್ಲೂಕು ರೈತ ಸಂಘದ ಅಧ್ಯಕ್ಷ ಅರಬಗಟ್ಟೆ ಕೆ.ಸಿ. ಬಸಪ್ಪ ಮಾತನಾಡಿ, ಮಳೆ ಅಭಾವದಿಂದ ಅನೇಕ ಬೆಳೆಗಳು ಒಣ ಗುತ್ತಿವೆ. ಕಾಲುವೆ ವ್ಯಾಪ್ತಿಯ ತಾಲ್ಲೂಕಿನ ಚೀಲೂರು, ಗೋಪಗೊಂಡನಹಳ್ಳಿ, ಕೂಂಕೊವಾ, ಅರಬಗಟ್ಟೆ, ಮಾದನಬಾವಿ ಹಿರೇಮಠ, ಸೊರಟೂರು, ಹತ್ತೂರು, ಎರಳ್ಳಿ, ಮಾರಿಕೊಪ್ಪ, ಹನುಮ ಸಾಗರ ಹೊಳೆ ಹರಳಹಳ್ಳಿ ರೈತ ರುಗಳ ಬೆಳೆಗೆ ನಾಲೆಯಲ್ಲಿ ನೀರು ಹರಿಸುವುದರಿಂದ ಅನುಕೂಲದ ಜೊತೆಗೆ ಬೋರ್‌ಗಳಲ್ಲಿ ನೀರಿನ ಪ್ರಮಾಣ ಹೆಚ್ಚಲಿದೆ ಎಂದು ಅಭಿಪ್ರಾಯಪಟ್ಟರು.
ಸಂಘದ ಉಪಾಧ್ಯಕ್ಷ ಹೊಳೆಹರಳಹಳ್ಳಿ ಬಸವರಾಜಪ್ಪ, ರೈತ ಸಂಘದ ನ್ಯಾಮತಿ ತಾಲ್ಲೂಕು ಅಧ್ಯಕ್ಷ ಬೆಳಗುತ್ತಿ ಉಮೇಶಣ್ಣ ಮಾತನಾಡಿದರು.
ರೈತ ಮುಖಂಡ ಹಿರೇಮಠ ಬಸಣ್ಣ ಮಾತನಾಡಿ, ಕಾಡಾ ಅಧ್ಯಕ್ಷರು ಕಾಲುವೆಗೆ ನೀರು ಹರಿಸಲು 2 ದಿನಗಳ ಕಾಲಾವಕಾ ಶದಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಶೀಘ್ರವೇ ನೀರು ಬಿಡುವುದಾಗಿ ತಿಳಿಸಿದ್ದು, 2 ದಿನಗಳ ನಂತರ ನೀರು ಬಿಡುವ ಭರವಸೆ ನೀಡಿರುವುದಾಗಿ ತಿಳಿಸಿದ್ದಾರೆ.